ಎಸ್.ಐ.ಆರ್ (SIR) ಎಂಬುದು ಮೋದಿ ಸರ್ಕಾರವು 140 ಕೋಟಿ ಭಾರತೀಯರ ಮೇಲೆ ಹಾಕಿರುವ ಎಫ್.ಐ.ಆರ್‌ನಂತೆ ಇದೆ. ನಾವು ವಿದೇಶಿಗರಲ್ಲ, ಸ್ವದೇಶಿಗರೇ ಎಂಬುದನ್ನು ದಾಖಲೆಗಳ ಮೂಲಕ ಸಾಬೀತುಪಡಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶಿವಸುಂದರ್ ಆರೋಪಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಸಹ ಸಂಘಟನೆಗಳ ವತಿಯಿಂದ ಉಡುಪಿ ಜಾಮಿಯಾ ಮಸೀದಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಎಸ್.ಐ.ಆರ್ ಮತ್ತು ಮತದಾರರ ಪಟ್ಟಿ ಮ್ಯಾಪಿಂಗ್ ಕುರಿತ ಜನಜಾಗೃತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರ ಕುರಿತು ಸದಾ ಅನುಮಾನಪಡುವ ವಾತಾವರಣ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ–ಮುಸ್ಲಿಮರು ಒಟ್ಟಾಗಿ ಹೋರಾಡಿದ್ದರು. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಯಾಗುವ ಸಂದರ್ಭದಲ್ಲಿ ಈ ದೇಶ ಯಾರಿಗೆ ಸೇರಿದ್ದು ಎಂಬ ಪ್ರಶ್ನೆಗೆ ‘ಎಲ್ಲರಿಗೂ ಸೇರಿದ್ದು’ ಎಂಬ ಉತ್ತರ ನೀಡಲಾಗಿತ್ತು ಎಂದು ಅವರು ಸ್ಮರಿಸಿದರು.
ಈ ದೇಶದಲ್ಲಿ ಬಹುತೇಕ ಜನ ಬಡವರಾಗಿದ್ದು, ಎಲ್ಲರಿಗೂ ಮತದಾನದ ಹಕ್ಕು ನೀಡಿದರೆ ಬಡವರ ಪರ ಸರ್ಕಾರ ಬರುತ್ತದೆ ಎಂಬ ಭಯವೇ ಇಂದಿನ ವ್ಯವಸ್ಥೆಗೆ ಇದೆ. ಮತದಾನ ಪ್ರಕ್ರಿಯೆ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ. 18 ವರ್ಷ ತುಂಬಿದ ಪ್ರತಿಯೊಬ್ಬರನ್ನೂ ಮತದಾನ ಪ್ರಕ್ರಿಯೆಯಲ್ಲಿ ಒಳಗೊಳ್ಳಿಸಬೇಕೇ ಹೊರತು ಹೊರಗಿಡುವುದಲ್ಲ. ಜಾತಿ, ಧರ್ಮ, ಭಾಷೆ, ಪ್ರದೇಶದ ಆಧಾರದಲ್ಲಿ ನಾಗರಿಕತ್ವ ನಿರ್ಧರಿಸುವುದು ಸಂವಿಧಾನ ವಿರೋಧಿ ಎಂದು ಅವರು ಅಭಿಪ್ರಾಯಪಟ್ಟರು.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು, ತೆಗೆದುಹಾಕುವುದು ಅಥವಾ ತಿದ್ದುಪಡಿ ಮಾಡುವುದಷ್ಟೇ ಆಯೋಗದ ಕೆಲಸ. ಆದರೆ ಎಸ್.ಐ.ಆರ್ ಎಂಬುದು ಇದುವರೆಗೆ ಕೇಳಿಯೇ ಇಲ್ಲದ ನಿಯಮವಾಗಿದೆ. ಇದಕ್ಕೆ ಯಾವುದೇ ಸಂವಿಧಾನಬದ್ಧ ಆಧಾರವಿಲ್ಲ. 2003ರಲ್ಲಿ ಪೌರತ್ವ ಕಾಯಿದೆಗೆ ತಿದ್ದುಪಡಿ ತಂದ ಬಳಿಕ ಯಾವುದೇ ಹೊಸ ಪರಿಷ್ಕರಣೆ ನಡೆದಿಲ್ಲ. ಆದರೂ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಜನರ ಮೇಲೆ ದಾಖಲೆಗಳ ಹೊರೆ ಹಾಕಲಾಗುತ್ತಿದೆ ಎಂದು ಶಿವಸುಂದರ್ ಹೇಳಿದರು.
ಒಬ್ಬ ಸರ್ಕಾರಿ ಅಧಿಕಾರಿ ನಾನು ಭಾರತೀಯನಾ ಅಲ್ಲವಾ ಎಂಬುದನ್ನು ನಿರ್ಧರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನನ್ನ ಅಹವಾಲು ಕೇಳುವ ಅವಕಾಶವನ್ನೇ ಕಸಿದುಕೊಳ್ಳಲಾಗಿದೆ. ಎಸ್.ಐ.ಆರ್ ಮತದಾರರ ಪಟ್ಟಿ ಪರಿಷ್ಕರಣೆ ಅಲ್ಲ, ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯಾಗಿದೆ ಎಂದು ಅವರು ಆರೋಪಿಸಿದರು.
ಹಿಂದೆ ಚುನಾವಣಾ ಆಯೋಗದ ಸಿಬ್ಬಂದಿ ಮನೆ ಮನೆಗೆ ಬಂದು ಮಾಹಿತಿ ಸಂಗ್ರಹಿಸುತ್ತಿದ್ದರು. ಈಗ ಆ ಹೊಣೆಗಾರಿಕೆಯನ್ನು ಜನರ ಮೇಲೆಯೇ ಹಾಕಲಾಗಿದೆ. 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಅಥವಾ ತಂದೆ-ತಾಯಿ, ಅಜ್ಜ-ಅಜ್ಜಿಯ ಹೆಸರು ಇರಬೇಕು ಎಂಬ ನಿಯಮ ಜನರಿಗೆ ತೊಂದರೆ ಉಂಟುಮಾಡುತ್ತಿದೆ. ಬೇರೆ ಬೇರೆ ದಾಖಲೆಗಳಲ್ಲಿ ಹೆಸರುಗಳು ವ್ಯತ್ಯಾಸವಾಗಿರುವುದು ನಮ್ಮ ತಪ್ಪಲ್ಲ. ನಮ್ಮ ತಪ್ಪಲ್ಲದ ಕಾರಣಕ್ಕೆ ಶಿಕ್ಷೆ ನೀಡುವ ಪ್ರಯತ್ನ ನಡೆಯುತ್ತಿದೆ ಎಂದರು.
ಕರ್ನಾಟಕದಲ್ಲಿ ಮ್ಯಾಪಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಬಿಎಲ್‌ಒಗಳು ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಬೇಕು ಎಂಬ ನಿಯಮವಿದೆ. ಆದರೆ ಹಲವೆಡೆ ಬಿಎಲ್‌ಒಗಳು ಮನೆಗಳಿಗೆ ಬಾರದೆಯೇ ಕಚೇರಿಯಲ್ಲಿ ಕುಳಿತು ಮ್ಯಾಪಿಂಗ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಎರಡನೇ ಹಂತದಲ್ಲಿ ಬಿಎಲ್‌ಒ ಮನೆಗೆ ಅರ್ಜಿ ನೀಡಬೇಕು. ಅದನ್ನು ಭರ್ತಿ ಮಾಡಿ ಚುನಾವಣಾ ಆಯೋಗದ ಕಚೇರಿಗೆ ಸಲ್ಲಿಸದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಸಾಧ್ಯತೆ ಇದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ಸಭೆಯ ಪ್ರಸ್ತಾವಿಕ ಭಾಷಣವನ್ನು ಸಾಮಾಜಿಕ ಹೋರಾಟಗಾರ ಇದ್ರಿಸ್ ಹೂಡೆ ನೀಡಿದರು. ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಅಧ್ಯಕ್ಷ ನಿಸಾರ್ ಅಹ್ಮದ್ ಸಮಾರೋಪ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಅಬ್ದುಲ್ ಅಝೀಝ್ ಉದ್ಯಾವರ ನಿರೂಪಿಸಿದರು.
ಈ ಸಂದರ್ಭದಲ್ಲಿ ಸಹಬಾಳ್ವೆ ಸಂಚಾಲಕ ಕೆ. ಫಣಿರಾಜ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲ, ಸಾಲಿಡಾರಿಟಿ ಜಿಲ್ಲಾ ಅಧ್ಯಕ್ಷ ಅಫ್ವಾನ್ ಹೂಡೆ, ಜಾಮಿಯಾ ಮಸೀದಿ ಅಧ್ಯಕ್ಷ ರಿಯಾಝ್ ಅಹ್ಮದ್, ಕಾರ್ಯದರ್ಶಿ ಖಾಲೀದ್ ಅಬ್ದುಲ್ ಅಝೀಝ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





