ಈದ್ಗಾ ಮೈದಾನ ಮತ್ತು ರಸ್ತೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆಯುತ್ತಾರೆಯೇ ಎಂದು ಮಾಜಿ ಸಚಿವ, ಶಾಸಕ ಕೆ.ಎನ್ ರಾಜಣ್ಣ ಪ್ರಶ್ನಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ಅನುಮತಿ ಪಡೆಯುವುದು ಕಡ್ಡಾಯ ಎಂಬ ನಿಯಮವನ್ನು ಸರ್ಕಾರ ಜಾರಿಗೆ ತಂದಿರುವ ಕುರಿತು ಪ್ರತಿಕ್ರಿಯೆ ನೀಡಿದರು. “ನಮಾಜ್ ಮಾಡಲು ಅನುಮತಿ ಕೇಳಿಕೊಂಡು ಅವರು (ಮುಸ್ಲಿಮರು) ಬರುತ್ತಾರೆಯೇ? ಅನುಮತಿ ಪಡೆಯದೇ ರಸ್ತೆಯಲ್ಲಿ ನಮಾಜ್ ಮಾಡಿದರೆ, ಅದನ್ನು ತಡೆಯುವ ಶಕ್ತಿ ಇದೆಯೇ? ಜಾರಿ ಮಾಡಲು ಸಾಧ್ಯವಾಗುವ ಕಾನೂನನ್ನು ಜಾರಿಗೆ ತರಬೇಕೇ ಹೊರತು, ಜಾರಿ ಮಾಡಲಾಗದ ಕಾನೂನುಗಳನ್ನು ಜಾರಿಗೆ ತಂದರೆ, ಅದು ಪುಸ್ತಕದಲ್ಲಿ ಮಾತ್ರವೇ ಇರುತ್ತದೆ. ಈ ನಿಯಮ ಯಾವ ಪ್ರಮಾಣದಲ್ಲಿ ಜಾರಿಗೆ ಬರುತ್ತದೆ ಕಾದು ನೋಡೋಣ” ಎಂದರು.
ಜಾಗೃತ ಕರ್ನಾಟಕ ಆಯೋಜಿಸಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ– ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರಗೋಷ್ಠಿಯಲ್ಲಿ ಜಿಲ್ಲಾ ಉಸ್ತುವರಿ ಸಚಿವ ಜಿ ಪರಮೇಶ್ವರ್ ಅವರ ಬಗ್ಗೆ ಮಾತನಾಡಿದ ರಾಜಣ್ಣ, “ಪರಮೇಶ್ವರ ಅವರಿಗೆ ಮೀಸಲು ಕ್ಷೇತ್ರವೇ ಯಾಕೆ ಬೇಕು? ಅವರು ಸಾಮಾನ್ಯ ಕ್ಷೇತ್ರದಲ್ಲಿ ಯಾಕೆ ನಿಲ್ಲಬಾರದು? ಅವರು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಮೀಸಲು ಕ್ಷೇತ್ರದಿಂದ ಮತ್ತೊಬ್ಬರಿಗೆ ಅವಕಾಶ ದೊರೆಯುತ್ತದೆ ಅಲ್ಲವೇ?” ಎಂದು ಹೇಳಿದರು.
“ಎಚ್.ಕಾಂತರಾಜು, ಜಯಪ್ರಕಾಶ್ ಹೆಗ್ಡೆ ನೇತೃತ್ವದ ವರದಿಗಳನ್ನು ಜಾರಿ ಮಾಡಬೇಕು ಎಂಬ ಮನಸ್ಥಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿತ್ತು. ಆದರೆ, ವರದಿಯನ್ನು ಜಾರಿಗೊಳಿಸದಂತೆ ಕಾಂಗ್ರೆಸ್ ನಾಯಕರೇ ಒತ್ತಡ ಹಾಕಿದರು. ಆದ್ದರಿಂದಲೇ ಮತ್ತೊಂದು ಸರ್ವೆ ನಡೆಸುವ ನಿರ್ಣಯ ಕೈಗೊಳ್ಳಬೇಕಾಯಿತು” ಎಂದು ರಾಜಣ್ಣ ವಿವರಿಸಿದರು.




