ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರು ಮತ್ತು ಹರ್ಕೂರು ಗ್ರಾಮಗಳ 13 ಕೊರಗ ಸಮುದಾಯದ ಕುಟುಂಬಗಳಿಗೆ ಗುರುತಿಸಿರುವ ಭೂಮಿಗೆ ಮಂಜೂರಾತಿ ನೀಡಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ, ಉಡುಪಿ ಜಿಲ್ಲೆ ವತಿಯಿಂದ ಕುಂದಾಪುರ ತಹಶೀಲ್ದಾರ್ ಕಚೇರಿ ಎದುರು ಹಮ್ಮಿಕೊಳ್ಳಲಾಗಿದ್ದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ತಹಶೀಲ್ದಾರ್ ಅವರ ಲಿಖಿತ ಭರವಸೆ ಮೇರೆಗೆ ಅಂತ್ಯಗೊಂಡಿತು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ಕಂದಾಯ ಇಲಾಖೆಯ ಸಮನ್ವಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಅವರು, 2016ರಿಂದಲೂ 10 ವರ್ಷಗಳ ಕಾಲ ಆಲೂರು–ಹರ್ಕೂರು ಗ್ರಾಮಗಳಲ್ಲಿ ಲಭ್ಯವಿರುವ ಡಿಸಿ ಮನ್ನಾ ಭೂಮಿ ಹಾಗೂ ಸರಕಾರಿ ಭೂಮಿಯನ್ನು ಡಾ. ಮಹಮ್ಮದ್ ಫೀರ್ ವರದಿ ಅನ್ವಯ ಕನಿಷ್ಠ ತಲಾ ಒಂದು ಎಕರೆಯಂತೆ 13 ಕೊರಗ ಕುಟುಂಬಗಳಿಗೆ ನೀಡುವಂತೆ ಸಂಘಟನೆ ನಿರಂತರ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದರು.
“ಕಂದಾಯ ಇಲಾಖೆ ಭೂಮಿ ಲಭ್ಯವಿಲ್ಲವೆಂದು ಹೇಳಿ ಕೈಚೆಲ್ಲಿ ಕುಳಿತ ಸಂದರ್ಭದಲ್ಲಿ, ಸಂಘಟನೆಯು ಕೊರಗ ಸಮುದಾಯದ ಸಹಕಾರದಿಂದ ಸ್ವತಃ ಭೂಮಿ ಗುರುತಿಸಿ ಅಗತ್ಯ ದಾಖಲೆಗಳನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಿತು. ಬಳಿಕ ಜಂಟಿ ಸರ್ವೆ ನಡೆಸಲಾಗಿದ್ದು, ಸರ್ವೆ ನಕ್ಷೆ, ಮಹಜರು, ಹೇಳಿಕೆ, ಗ್ರಾಮ ಆಡಳಿತಾಧಿಕಾರಿ ಹಾಗೂ ವಂಡ್ಸೆ ಕಂದಾಯ ನಿರೀಕ್ಷಕರ ವರದಿ ಎಲ್ಲವೂ ತಾಲೂಕು ಆಡಳಿತದ ಕೈ ಸೇರಿದೆ. ಆದರೂ ಹಕ್ಕುಪತ್ರ ನೀಡುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ತಿಂಗಳ ಮೊದಲ ವಾರದಲ್ಲಿ ಮನವಿ ನೀಡಿದಾಗ 10 ದಿನಗಳಲ್ಲಿ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲವೆಂದು ಅವರು ಆರೋಪಿಸಿದರು. ನ್ಯಾಯಸಮ್ಮತ ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿತ್ತು.

ಸಂಜೆ ತಹಶೀಲ್ದಾರ್ ಧರಣಿ ನಿರತರ ಅಹವಾಲು ಆಲಿಸಿ, ಆಲೂರು ಗ್ರಾಮದಲ್ಲಿ ಖಾದಿರಿಸಿರುವ ಭೂಮಿಯಲ್ಲಿ ಗೇರು ನಿಗಮದ ನಡುತೋಪು ಇರುವ ಹಿನ್ನೆಲೆಯಲ್ಲಿ ಅವರ ಅಭಿಪ್ರಾಯ ಪಡೆಯುವುದು ಅಗತ್ಯವಿದೆ ಎಂದು ತಿಳಿಸಿದರು. ಗೇರು ನಿಗಮಕ್ಕೆ ಈಗಾಗಲೇ ಪತ್ರ ಬರೆದಿದ್ದರೂ ಪ್ರತಿಕ್ರಿಯೆ ಬಂದಿಲ್ಲವೆಂದು ಹೇಳಿ, ಧರಣಿ ನಿರತರ ಸಮ್ಮುಖದಲ್ಲಿ ಮತ್ತೊಂದು ಪತ್ರ ಬರೆದು ಮಾರ್ಚ್ 5ರೊಳಗಾಗಿ ಉತ್ತರ ನೀಡುವಂತೆ ಮನವಿ ಮಾಡುವುದಾಗಿ ಹಾಗೂ ಉತ್ತರ ಸಿಗದಿದ್ದಲ್ಲಿ ಮಂಜೂರಾತಿ ಪ್ರಕ್ರಿಯೆ ಮುಂದುವರಿಸಲಾಗುವುದಾಗಿ ಲಿಖಿತ ಭರವಸೆ ನೀಡಿದರು. ಈ ಹಿನ್ನೆಲೆ ಧರಣಿ ಹಿಂಪಡೆಯಲಾಯಿತು.

ಧರಣಿಯಲ್ಲಿ ರಾಜ್ಯ ಸಮಿತಿ ಸದಸ್ಯ ಗಣೇಶ ಆಲೂರು, ಕೊರಗ ನಾರ್ಕಳಿ, ಚಂದ್ರಾವತಿ ಬ್ರಹ್ಮೇರಿ, ಸುರೇಶ್ ಆಲೂರು, ನಾಗರತ್ನ, ಜಯಲಕ್ಷ್ಮಿ, ಸಾಧು ನಾರ್ಕಳಿ, ರೇಷ್ಮಾ ನಾಡ, ಕಾರ್ಮಿಕ ಮುಖಂಡರಾದ ಸುರೇಶ್ ಕಲಾಗಾರ್, ಚಂದ್ರಶೇಖರ, ಮಹಾಬಲ ವಡೆರೋಬಳಿ, ಎಚ್. ನರಸಿಂಹ ಹಾಗೂ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಶೀಲಾವತಿ, ನಾಗರತ್ನ ನಾಡ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೊರಗ ಸಮುದಾಯದ ಭೂಮಿ ಹಕ್ಕು ಪ್ರಶ್ನೆಗೆ ಸಂಬಂಧಿಸಿದಂತೆ ಆಡಳಿತವು ಶೀಘ್ರ ನಿರ್ಧಾರ ಕೈಗೊಳ್ಳಬೇಕೆಂಬ ಒತ್ತಾಯ ಧರಣಿ ಮೂಲಕ ಮತ್ತೊಮ್ಮೆ ವ್ಯಕ್ತವಾಗಿದೆ.





