ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ‘ನಿಸರ್ಗ ಇಕೋ ಕ್ಲಬ್’ ವತಿಯಿಂದ ‘ಬಾನು ಬೆರಗು’ ಎಂಬ ವಿನೂತನ ಹಾಗೂ ಜ್ಞಾನವರ್ಧಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಶನಿವಾರ ಸಂಜೆ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಯಲ್ಲಾಪುರ ತಾಲೂಕಿನ ಆನಗೋಡ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರು ಹಾಗೂ ಹವ್ಯಾಸಿ ಖಗೋಳ ಶಾಸ್ತ್ರಜ್ಞರಾದ ಮಾರುತಿ ಆಚಾರಿ ಅವರು ಮಾರ್ಗದರ್ಶಕರಾಗಿ ಆಗಮಿಸಿದ್ದರು.
ಅವರು ಮೊದಲಿಗೆ ಸುಧಾರಿತ ಟೆಲಿಸ್ಕೋಪ್ ಮೂಲಕ ಸೌರಕಲೆಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. ನಂತರ ನಡೆದ ವಿಚಾರಗೋಷ್ಠಿಯಲ್ಲಿ ಗ್ರಹಗಳು, ಚಂದ್ರ, ನಕ್ಷತ್ರಗಳು, ನಕ್ಷತ್ರಪುಂಜಗಳು, ನಕ್ಷತ್ರ ಗುಚ್ಛಗಳು, ಧೂಮಕೇತುಗಳು, ಉಲ್ಕೆಗಳು ಹಾಗೂ ಕ್ಷುದ್ರಗ್ರಹಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.
ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಟೆಲಿಸ್ಕೋಪ್ ಸಹಾಯದಿಂದ ಚಂದ್ರನ ದರ್ಶನ ಪಡೆದರಲ್ಲದೆ, ಚಂದ್ರನ ಮೇಲಿರುವ ಕುಳಿಗಳು, ಗುರು ಗ್ರಹ ಮತ್ತು ಅದರ ಉಪಗ್ರಹಗಳು, ಶನಿ ಗ್ರಹದ ಉಂಗುರಗಳು, ನಕ್ಷತ್ರಪುಂಜಗಳು, ಅವಳಿ ನಕ್ಷತ್ರಗಳು ಹಾಗೂ ನಿಹಾರಿಕೆಗಳನ್ನು ಕಣ್ಣಾರೆ ಕಂಡು ಪುಳಕಿತರಾದರು.
5ನೇ ತರಗತಿಯ ‘ಬಾನಂಗಳ’ ಹಾಗೂ 6ನೇ ತರಗತಿಯ ‘ಭೂಮಿಯಿಂದ ಆಚೆಗೆ’ ಎಂಬ ಪಠ್ಯಪುಸ್ತಕದ ವಿಷಯಗಳನ್ನು ಪ್ರಾಯೋಗಿಕವಾಗಿ ನೋಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಪಠ್ಯದಲ್ಲಿರುವ ವಿಷಯಗಳನ್ನು ಕಣ್ಣಾರೆ ನೋಡುವ ಮೂಲಕ ದೃಡಪಡಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಹುಲ್ಕುತ್ರಿ ಶಾಲೆಯ 4 ರಿಂದ 7ನೇ ತರಗತಿಯ 34 ವಿದ್ಯಾರ್ಥಿಗಳು, ಹಾದ್ರಿಮನೆ ಕಿರಿಯ ಪ್ರಾಥಮಿಕ ಶಾಲೆಯ 3 ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪಾಲಕರು ಸೇರಿದಂತೆ ಅಂದಾಜು 110 ಜನರು ಈ ಆಕಾಶಕಾಯಗಳ ವೀಕ್ಷಣೆಯಲ್ಲಿ ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ| ರಿಶೆಲ್ ಕಿಸ್ತೋದ್ ಆತ್ಮಹತ್ಯೆ ಪ್ರಕರಣ: ಪ್ರಮುಖ ಆರೋಪಿ ಚಿರಾಗ್ ಚೆನ್ನೈನಲ್ಲಿ ಬಂಧನ
ಗ್ರಾಮ ಪಂಚಾಯಿತಿ ಸದಸ್ಯೆ ರಾಧಾ ವೆಂಕಟ್ರಮಣ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮಾರ್ಗದರ್ಶಕ ಮಾರುತಿ ಆಚಾರಿ, ಸಹಾಯಕ ನವೀನ್ ಆಚಾರಿ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಸುರೇಶ ಬಂಗಾರ್ಯ ಗೌಡ ಹಾಗೂ ಊರ ಹಿರಿಯರಾದ ವೆಂಕಟ್ರಮಣ ಗಣಪತಿ ಹೆಗಡೆ ಹುಟ್ಲೆ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕಿಯರಾದ ಮೈತ್ರಿ ಹೆಗಡೆ ಹಾಗೂ ನಾಗರತ್ನ ಭಂಡಾರಿಯವರು ಕಾರ್ಯಕ್ರಮ ನಿರ್ವಹಿಸಿದರೆ, ರಂಜನಾ ಭಂಡಾರಿಯವರು ವಂದಿಸಿದರು. ಕಾರ್ಯಕ್ರಮದ ನಂತರ ಫೈರ್ ಕ್ಯಾಂಪ್ ಮತ್ತು ಬೆಳದಿಂಗಳೂಟದ ವ್ಯವಸ್ಥೆ ಮಾಡಲಾಗಿತ್ತು.
2022ರಲ್ಲಿ ತಾಲೂಕಿನಲ್ಲೇ ಪ್ರಥಮ ಬಾರಿಗೆ ಇಂತಹ ನಕ್ಷತ್ರಪುಂಜ ವೀಕ್ಷಣೆ ಕಾರ್ಯಕ್ರಮ ಆಯೋಜಿಸಿದ್ದ ಹುಲ್ಕುತ್ರಿ ಶಾಲೆ, ಈ ಬಾರಿಯೂ ಸುಧಾರಿತ ಉಪಕರಣಗಳ ಮೂಲಕ ಮಕ್ಕಳಿಗೆ ನೇರ ಕಲಿಕೆಯ ಅನುಭವ ನೀಡುವ ಮೂಲಕ ಗಮನ ಸೆಳೆದಿದೆ.





