ಸಿದ್ದಾಪುರ: ಅರಣ್ಯ ಭೂಮಿಯ ಹಕ್ಕನ್ನು ಪಡೆಯಲು ಅರಣ್ಯವಾಸಿಗಳಿಗೆ ಕಾನೂನಿನ ಅರಿವು ಅತ್ಯಗತ್ಯ. ಅರಣ್ಯವಾಸಿಗಳು ಕಾನೂನಿನ ಸಂಕೋಲೆಯಲ್ಲಿ ಸಿಲುಕಿರುವ ಇಂದಿನ ಸಂದರ್ಭದಲ್ಲಿ, ಕಾನೂನು ಜ್ಞಾನ ಪಡೆಯುವುದು ಅವರ ಮೂಲಭೂತ ಕರ್ತವ್ಯವಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಧಾನ ಸಂಚಾಲಕಿ ಹಾಗೂ ವಕೀಲೆ ಕು. ರಂಜಿತಾ ರವೀಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸಿದ್ದಾಪುರ ತಾಲೂಕಿನ ಇಟಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮೇಶ್ವರ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಅರಣ್ಯವಾಸಿಯ ಮನೆ ಮನೆಗೆ ಕಾನೂನು” ಎಂಬ ವಿನೂತನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸಾಮಾಜಿಕ ನ್ಯಾಯ ಒದಗಿಸುವ ಮತ್ತು ದೇಶದ ಆಹಾರೋತ್ಪನ್ನ ವೃದ್ಧಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ‘ಅರಣ್ಯ ಹಕ್ಕು ಕಾಯಿದೆ’ಯ ಅನುಷ್ಠಾನದಲ್ಲಿ ವೈಫಲ್ಯ ಉಂಟಾಗಿದೆ.
ಅರಣ್ಯ ಭೂಮಿಯ ಸಾಗುವಳಿಯನ್ನೇ ಅವಲಂಬಿಸಿರುವ ಅರಣ್ಯವಾಸಿಗಳಿಗೆ ಸಾಂದರ್ಭಿಕ ದಾಖಲೆಗಳ ಅಡಿಯಲ್ಲಿ ಸಾಗುವಳಿ ಹಕ್ಕನ್ನು ನೀಡಲು ಕಾನೂನಿನಲ್ಲಿ ಅವಕಾಶವಿದೆ. ಈ ಕುರಿತು ಅರಣ್ಯವಾಸಿಗಳಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಿದ್ದಾಪುರದಲ್ಲಿ 10,334 ಅರ್ಜಿಗಳ ತಿರಸ್ಕಾರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಿದ್ದಾಪುರ ತಾಲೂಕಿನಾದ್ಯಂತ ಒಟ್ಟು 10,860 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 10,334 ಅರ್ಜಿಗಳು (ಅಂದರೆ ಶೇ. 95 ರಷ್ಟು) ತಿರಸ್ಕೃತಗೊಂಡಿವೆ. ಸಲ್ಲಿಕೆಯಾದ ಅರ್ಜಿಗಳಲ್ಲಿ 17 ಪಾರಂಪರಿಕ ಅರಣ್ಯವಾಸಿಗಳ ಅರ್ಜಿ ಸೇರಿದಂತೆ ಕೇವಲ 138 ಜನರಿಗೆ ಮಾತ್ರ ಸಾಗುವಳಿ ಹಕ್ಕು ನೀಡಲಾಗಿದೆ. ಅಂದರೆ ತಾಲೂಕಿನಲ್ಲಿ ಕೇವಲ ಶೇ. 1.27 ರಷ್ಟು ಅರಣ್ಯವಾಸಿಗಳಿಗೆ ಮಾತ್ರ ಹಕ್ಕು ದೊರೆತಂತಾಗಿದೆ ಎಂದು ಅವರು ಅಂಕಿಅಂಶಗಳ ಸಮೇತ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ತಾಲೂಕಿನಾದ್ಯಂತ ಸಕ್ರಿಯಗೊಂಡ ಇಟ್ಟಿಗೆ ಭಟ್ಟಿಗಳು: ಅರಣ್ಯ–ಪರಿಸರದ ಮೇಲೆ ಹೆಚ್ಚಿದ ಒತ್ತಡ
ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಅರಣ್ಯವಾಸಿಗಳು ಸಾಗುವಳಿ ಹಕ್ಕಿನಿಂದ ವಂಚಿತರಾಗದಂತೆ ಕಾನೂನಿನ ಪ್ರಮುಖ ಅಂಶಗಳನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಗೋವಿಂದರಾಜ ಹೆಗಡೆ, ಅಶೋಕ ನಾಯ್ಕ, ಚಂದ್ರಕಾಂತ ನಾಯ್ಕ ಇಟಗಿ, ಸುನೀಲ್ ನಾಯ್ಕ ಸಂಪಖಂಡ ಮಾತನಾಡಿದರು. ಧನಂಜಯ್ ನಾಯ್ಕ ವಂದಿಸಿದರು. ಸಭೆಯಲ್ಲಿ ಶೇಖ್ ಸೈನ್ ಸಾಬ ಇಟಗಿ, ರಾಜು ಎಮ್. ನಾಯ್ಕ, ಬಿ. ಡಿ. ನಾಯ್ಕ, ಚಂದ್ರಶೇಖರ್ ನಾಯ್ಕ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.





