ಸಿದ್ದಾಪುರ: ಮಲೆನಾಡು ಮತ್ತು ಕರಾವಳಿಯ ಜೀವನಾಡಿಯಾಗಿರುವ ಅಘನಾಶಿನಿ ನದಿಯನ್ನು ವರದಾ ನದಿಯೊಂದಿಗೆ ಜೋಡಿಸುವ ಸರ್ಕಾರದ ಪ್ರಸ್ತಾವಿತ ಯೋಜನೆಯ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶದ ಅಲೆ ಎದ್ದಿದೆ.
ಈ ಅವೈಜ್ಞಾನಿಕ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನೇತೃತ್ವದಲ್ಲಿ ಸಿದ್ದಾಪುರ ತಾಲೂಕಿನ ಗೋಳಿಮಕ್ಕಿಯಲ್ಲಿ ಬೃಹತ್ ಬಹಿರಂಗ ಸಭೆ ಹಾಗೂ ಪಾದಯಾತ್ರೆ ನಡೆಸುವ ಮೂಲಕ ‘ಜಾಗೃತ ಜಾಥಾ’ಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.
ಹೋರಾಟದ ನೇತೃತ್ವ ವಹಿಸಿದ್ದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಮಾತನಾಡಿ, ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು ಸಿದ್ಧಪಡಿಸಿರುವ ಅಘನಾಶಿನಿ-ವರದಾ ನದಿ ಜೋಡಣೆಯ ಪೂರ್ವ ಕಾರ್ಯ ಸಾಧ್ಯತಾ ಕರಡು ವರದಿಯನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿದರು.

“ಈ ಯೋಜನೆಯಿಂದ ಮಲೆನಾಡು ಮತ್ತು ಕರಾವಳಿಯ ನೈಸರ್ಗಿಕ ಸಮತೋಲನ ಸಂಪೂರ್ಣವಾಗಿ ನಾಶವಾಗುತ್ತದೆ. ಇದು ಕೇವಲ ಅವೈಜ್ಞಾನಿಕ ಯೋಜನೆಯಲ್ಲ, ಪರಿಸರ ವಿರೋಧಿ ಕೃತ್ಯವೂ ಹೌದು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಸರ್ಕಾರದ ದ್ವಂದ್ವ ನೀತಿಯ ವಿರುದ್ಧವೂ ಧ್ವನಿ ಎತ್ತಲಾಯಿತು. ಜಿಲ್ಲೆಯಲ್ಲಿ ವಿವಿಧ ರಾಷ್ಟ್ರೀಯ ಯೋಜನೆಗಳು ಮತ್ತು ಮೂಲಭೂತ ಸೌಕರ್ಯಗಳ ಹೆಸರಿನಲ್ಲಿ ಸರ್ಕಾರವು 64,354 ಹೆಕ್ಟೇರ್ ಅರಣ್ಯ ಭೂಮಿಯನ್ನು ಸುಲಭವಾಗಿ ಒದಗಿಸುತ್ತದೆ.
ಆದರೆ, ದಶಕಗಳಿಂದ ಅರಣ್ಯ ಭೂಮಿಯನ್ನೇ ನಂಬಿ ಬದುಕುತ್ತಿರುವ 80 ಸಾವಿರ ಕುಟುಂಬಗಳಿಗೆ ಕೇವಲ 53 ಸಾವಿರ ಎಕರೆ ಸಾಗುವಳಿ ಹಕ್ಕು ನೀಡಲು ಸರ್ಕಾರ ಹಿಂಜರಿಯುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.123 ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ನಿರ್ಧಾರನದಿ ಜೋಡಣೆ ಯೋಜನೆಯಿಂದಾಗುವ ಅನಾಹುತಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ತಾಲೂಕಿನ 123 ಗ್ರಾಮಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹೋರಾಟದ ವೇದಿಕೆ ನಿರ್ಧರಿಸಿದೆ.
ಈ ಸುದ್ದಿ ಓದಿದ್ದೀರಾ? ಸಿದ್ದಾಪುರ | ಹುಲ್ಕುತ್ರಿ ಶಾಲೆಯಲ್ಲಿ ‘ಬಾನು ಬೆರಗು’: ಟೆಲಿಸ್ಕೋಪ್ ಮೂಲಕ ಆಕಾಶಕಾಯಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳು
ಸಮುದಾಯದ ಅಸ್ತಿತ್ವಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ. ಗೋಳಿಮಕ್ಕಿಯಿಂದ ಪ್ರಾರಂಭವಾದ ಬೃಹತ್ ಪಾದಯಾತ್ರೆಯು ಗೇಜ್‌ಕಟ್ಟದ ಅಘನಾಶಿನಿ ನದಿ ತೀರದವರೆಗೆ ಸಾಗಿತು.
ಬಾವುಟಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಸಾಗಿದ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ಹಿರಿಯರು ಮತ್ತು ಮಹಿಳೆಯರು ಪಾಲ್ಗೊಂಡು ಹೋರಾಟಕ್ಕೆ ಶಕ್ತಿ ತುಂಬಿದರು. ಅಂತಿಮವಾಗಿ ನದಿ ತೀರದಲ್ಲಿ ನದಿಗೆ ಇಳಿದ ಹೋರಾಟಗಾರರು, ಯಾವುದೇ ಕಾರಣಕ್ಕೂ ಅಘನಾಶಿನಿಯನ್ನು ಯೋಜನೆಗೆ ಬಿಟ್ಟುಕೊಡುವುದಿಲ್ಲ ಮತ್ತು ನದಿಯನ್ನು ಉಳಿಸಿಕೊಳ್ಳಲು ದಿಟ್ಟ ಹೋರಾಟ ಮಾಡುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ನಾಗಪತಿ ಗೌಡ ಹುಕ್ಕಳ್ಳಿ ಪ್ರಸ್ತಾವನೆ ನಡೆಸಿಕೊಟ್ಟರೆ, ಹಿರಿಯ ಚಿಂತಕ ಎನ್.ವಿ. ಹೆಗಡೆ ಮುತ್ತಿಗೆ, ಜಿಲ್ಲಾ ಸಂಚಾಲಕ ಮಹಬಲೇಶ್ವರ ನಾಯ್ಕ ಬೇಡ್ಕಣಿ, ಮಹಿಳಾ ಧುರೀಣೆಯರಾದ ವೀಣಾ ಗೌಡ, ಶ್ಯಾಮಲಾ ಗೌಡ ಹಾಗೂ ಪರಿಸರವಾದಿ ಬಾಲಚಂದ್ರ ಹೆಗಡೆ ಸೇರಿದಂತೆ ಅನೇಕ ಮುಖಂಡರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಚಂದ್ರಶೇಖರ ಗೌಡ ಸ್ವಾಗತಿಸಿದರು, ಮಂಜುನಾಥ ನಾಯ್ಕ ನಿರೂಪಣೆ ಮಾಡಿದರೆ, ಕೆ.ಟಿ. ನಾಯ್ಕ ವಂದನಾರ್ಪಣೆ ಮಾಡಿದರು. ವೇದಿಕೆಯ ಮೇಲೆ ಜಿಲ್ಲೆಯ ವಿವಿಧ ಭಾಗಗಳ ಪ್ರಮುಖರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದು ಹೋರಾಟಕ್ಕೆ ಬೆಂಬಲ ಸೂಚಿಸಿದರು.





