ಒಳಮೀಸಲಾತಿ ಜಾರಿಗೆ ಸಿದ್ದರಾಮನಹುಂಡಿ ಜಾಥಾ: ಸಾಮಾಜಿಕ ನ್ಯಾಯದ ಹೋರಾಟ ಹತ್ತಿಕ್ಕಿದ ಸರ್ಕಾರ

Date:

ಕಾಂಗ್ರೆಸ್ ಸರ್ಕಾರವು ಬಾಯಲ್ಲಿ ʼಅಹಿಂದʼ ಎಂದು ಹೇಳಿಕೊಂಡರೂ, ಕ್ರಿಯೆಯಲ್ಲಿ ದಲಿತರ ಹೋರಾಟವನ್ನು ಹತ್ತಿಕ್ಕುವ, ಮಣಿಸುವ ಜಾತಿ ಪ್ರಭುತ್ವದ ರಕ್ಷಣೆಯನ್ನೇ ಮಾಡುತ್ತಿದೆ. ಇದು ಕೇವಲ ಒಂದು ಜಾಥಾವನ್ನು ತಡೆದದ್ದಲ್ಲ, ದಲಿತರ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ಸಮಾನತೆಯ ಹೋರಾಟದ ಮೇಲೆ ನಡೆಸಿದ ದಾಳಿಯಾಗಿದೆ.

ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿ ಮಾಡುವಂತೆ ಪರಿಶಿಷ್ಟ ಜಾತಿಗಳ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಿದ್ದರಾಮನಹುಂಡಿ ಕಾಲ್ನಡಿಗೆ ಜಾಥಾ ಮೈಸೂರಿನಲ್ಲಿ ನಡೆಯದಂತೆ ಪೊಲೀಸರು ಜಾಥಾವನ್ನು ಹತ್ತಿಕ್ಕಿದ್ದು, 144 ಸೆಕ್ಷನ್ ಹೇರುವುದರ ಮೂಲಕ, ಸ್ಥಳೀಯ ಗ್ರಾಮಗಳಲ್ಲಿ ಗುಂಪು ವೈಷಮ್ಯ ಉಂಟುಮಾಡಿ ಶಾಂತಿ ಸುವ್ಯವಸ್ಥೆ ಹದಗೆಡುವ ಕಾರಣ ನೀಡಿ, ಹಿಂಬರಹ ನೀಡುವ ಮೂಲಕ ಹೋರಾಟಗಾರರನ್ನು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.

ಡಿಸೆಂಬರ್ 6ರಿಂದ 11ರವರೆಗೆ ಒಳಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಕಾಲ್ನಡಿಗೆ ಜಾಥಾ ನಡೆದು, ‘ಮೈಸೂರು ಚಲೋ’ ಬೃಹತ್ ಸಮಾವೇಶ ಕೈಗೊಳ್ಳಲು ತೀರ್ಮಾನಿಸಿ ಪೊಲೀಸರ ಅನುಮತಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜಾಥಾ ನಡೆಸಲು ಅನುಮತಿ ನಿರಾಕರಿಸಿ, ಕಾರ್ಯಕ್ರಮಕ್ಕೆ ಕೆಲವು ಪರಸ್ಥಳೀಯ ನಾಯಕರು ಮರೆಮಾಚಿದ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಗಳ ಶಾಂತಿ ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆಯೆಂದು, ಸಾಮಾಜಿಕ ಸ್ವಾಸ್ತ್ಯ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಹಿತದೃಷ್ಟಿಯಿಂದ ಅನುಮತಿ ನಿರಾಕರಿಸಲಾಗಿದೆ” ಎಂದು ಹಿಂಬರಹ ನೀಡಿದ್ದಾರೆ.

“ಶಾಂತಿಯುತವಾಗಿ ಕಾಲ್ನಡಿಗೆ ಜಾಥಾ ನಡೆಸಲು ಬಂದ ಒಳಮೀಸಲಾತಿ ಹೋರಾಟಗಾರರನ್ನು ಬಂಧಿಸಿ, ಸಂಜೆ ವೇಳೆಗೆ ಬಿಡುಗಡೆಗೊಳಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರು ಪೊಲೀಸರನ್ನು ಬಿಟ್ಟಿದ್ದು, ಸಾಂವಿಧಾನಿಕವಾಗಿ ನಡೆಯುತ್ತಿದ್ದ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಅಧಿಕಾರಿ ವರ್ಗದವರನ್ನು ದುರ್ಬಳಕೆ ಮಾಡಿ ಹೋರಾಟವನ್ನು ಹತ್ತಿಕ್ಕಿದ್ದಾರೆ” ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ದಿನ.ಕಾಮ್ ಜತೆಗೆ ಮಾತನಾಡಿದ ಒಳಮೀಸಲಾತಿ ಹೋರಾಟಗಾರ ಹಾಗೂ ವಕೀಲರಾದ ಮಾರಪ್ಪ, “ಹೋರಾಟಗಾರರ ಹೋರಾಟವನ್ನು ಹತ್ತಿಕ್ಕುವುದು ಅಕ್ಷಮ್ಯ. ಒಳಮೀಸಲಾತಿ ಜಾರಿ, ಬಡ್ತಿ ವಿಚಾರವಾಗಿ ಸರ್ಕಾರ ಈವರೆಗೂ ಮೀನಾಮೇಷ ಎಣಿಸುತ್ತಿರುವಾಗ ಹೋರಾಟಗಾರರು ಸಮುದಾಯಗಳ ಹಿತಕ್ಕಾಗಿ ಶಾಂತಿಯುತ ಕಾಲ್ನಡಿಗೆ ಜಾಥಾ ಹಾಗೂ ಮೈಸೂರು ಚಲೋ ಸಮಾವೇಶಕ್ಕೆ ಮುಂದಾಗಿದ್ದೆವು. ಆದರೆ, ಪೊಲೀಸರು ಅನುಮತಿ ನಿರಾಕರಣೆ ಕಾರಣವಿರಿಸಿ ನಮ್ಮನ್ನೆಲ್ಲ ಬಂಧಿಸಿ, ಹೋರಾಟ ಹತ್ತಿಕ್ಕಿದ್ದಾರೆ” ಎಂದು ಹೇಳಿದರು.

“ನಾಳೆ(ಸೋಮವಾರ) ಈ ವಿಚಾರವಾಗಿ ಘನ ನ್ಯಾಯಾಲಯದಲ್ಲಿ ಪೊಲೀಸರ ನಡಾವಳಿ, ಕಾಲ್ನಡಿಗೆ ಜಾಥಾ ಹಾಗೂ ಮೈಸೂರು ಚಲೋ ನಡೆಸಲು ರಿಟ್ ಅರ್ಜಿ ಸಲ್ಲಿಸಲಾಗುವುದು. ಅಲ್ಲದೇ, ನ್ಯಾಯಾಲಯದ ಪ್ರಕ್ರಿಯೆಯಿಂದ ಒಂದೆರೆಡು ದಿನಗಳ ವ್ಯತ್ಯಾಸ ಆಗಬಹುದೇ ಹೊರತು ‘ಮೈಸೂರು ಚಲೋ’ ಬೃಹತ್ ಸಮಾವೇಶ ಮಾಡಿಯೇ ತೀರುತ್ತೇವೆ. ಒಳಮೀಸಲಾತಿ ಜಾರಿಗೆ ಸಚಿವ ಮಹದೇವಪ್ಪ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ” ಎಂದರು.

ಈ ದಿನ.ಕಾಮ್ ಜತೆಗೆ ಮಾತನಾಡಿದ ಹಿರಿಯ ಮುಖಂಡ ಬಸವರಾಜ ಕೌತಾಳ್, “ಒಳಮೀಸಲಾತಿ ಸಂಬಂಧ ಶನಿವಾರ ಸಂಜೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆದಿದೆ. ಬಡ್ತಿ ಕಾಯ್ದೆ ತರುವ ಪ್ರಸ್ತಾಪ ಸರಿಯಾದ ಕ್ರಮವಲ್ಲ. 17 ಪರ್ಸೆಂಟ್ ವರ್ಗೀಕರಣ ಆಧರಿಸಿ ಒಳಮೀಸಲಾತಿ ಜಾರಿಯಲ್ಲಿಯೇ ಬಡ್ತಿ ಪ್ರಕ್ರಿಯೆ ಕೈಗೊಳ್ಳಬೇಕು. ಪಕ್ಕದ ಆಂಧ್ರದಲ್ಲಿ ಜಾತಿವಾರು ರೂಪಿಸರುವ ಕಾಯ್ದೆ ಅನುಸಾರ, ಇಲ್ಲಿಯೂ ಕೂಡ ಸಮುದಾಯ ಹಿತದೃಷ್ಟಿಯಲ್ಲಿ ಕಾಯ್ದೆ ಜಾರಿಯಾಗಬೇಕು. ಗ್ಯಾರೆಂಟಿ ಯೋಜನೆಗಳು ಯಾವ ರೀತಿಯಲ್ಲಿ ರಾಜ್ಯದಲ್ಲಿ ನೇರವಾಗಿ ಜನಗಳಿಗೆ ಸಿಗುವಂತೆ ಮಾಡಲಾಗಿದೆ, ಅದೇ ರೀತಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಸಮುದಾಯದ ಏಳಿಗೆಗಾಗಿ ನೇರವಾಗಿ ತಲುಪುವಂತೆ ಮಾಡಬೇಕು. ಇದೇ ಡಿಸೆಂಬರ್ 16ರಂದು ಅಧಿವೇಶನದಲ್ಲಿ ಒಳಮೀಸಲಾತಿ ಸಮರ್ಪಕವಾಗಿ ಜಾರಿ ಮಾಡದೇ ಇದ್ದಲ್ಲಿ, ಮುಂದಿನ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು” ಎಂದು ಹೇಳಿದರು.

ಬಹುಜನ ಚಳವಳಿಯ ಮುಖಂಡರಾದ ಚಿತ್ರದುರ್ಗದ ಪ್ರಕಾಶ್ ಮಾತನಾಡಿ, “ಆಳುವ ಸರ್ಕಾರಗಳ ವಿರುದ್ಧ ಕಳೆದ 35 ವರ್ಷಗಳಿಂದ ಸತತವಾಗಿ ಒಳಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಹೋರಾಟ ಮಾಡಲಾಗುತ್ತಿದೆ. ಆದರೇ, ಆಳುವ ಸರ್ಕಾರಗಳು ಇನ್ನಿಲ್ಲದ ಆಶ್ವಾಸನೆಗಳನ್ನು ನೀಡಿ ದಾರಿ ತಪ್ಪಿಸುವ ಕೆಲಸ ಮಾಡಿವೆ. ಒಳಮೀಸಲಾತಿ ಯಾರ ಸ್ವತ್ತಲ್ಲ. ನಿರ್ದಿಷ್ಟವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬರೆದಿದ್ದಾರೆ. ಆದರೇ, ಮನುವಾದಿಗಳ ಕುತಂತ್ರ, ನಮ್ಮನ್ನಾಳುವ ಸರ್ಕಾರಗಳು ಶೋಷಿತ ಸಮುದಾಯಗಳ ಹಕ್ಕನ್ನು ಬಲಿ ತೆಗೆದುಕೊಂಡಿವೆ” ಎಂದು ಆರೋಪಿಸಿದರು.

“ಸೌತ್ ಆಫ್ರಿಕಾದಲ್ಲಿ ಕಪ್ಪು ಜನರಿಗೆ ಮತದಾನದ ಹಕ್ಕನ್ನ ನೀಡಿರಲಿಲ್ಲ. ಕಪ್ಪು ಜನರ ಮತದಾನದ ಹಕ್ಕಿಗಾಗಿ 22 ವರ್ಷದ ನೆಲ್ಸನ್ ಮಂಡೇಲಾ ಹೋರಾಟಕ್ಕಿಳಿದರು. ಅಲ್ಲಿಯ ವ್ಯವಸ್ಥೆ ಜೈಲಿಗೆ ದೂಡಿತು. ಆದರೂ ಚಿಗುರು ಮೀಸೆಯ ಹುಡುಗ ನೆರೆತ ಗಡ್ಡದಲ್ಲಿ ಜೈಲಿಂದ ಹೊರ ಬರುವಾಗ, ಜೈಲಿನಿಂದಲೇ ಹೋರಾಟ ನಡೆಸಿ ಕಪ್ಪು ಜನರಿಗೆ ಮತದಾನದ ಹಕ್ಕನ್ನು ತಂದರು. ಅದರ ಪರಿಣಾಮವಾಗಿ ಅಲ್ಲಿಯ ಜನ ಸೂಕ್ಷ್ಮವಾಗಿ ಅರಿತು ನಮ್ಮ ಅಪ್ಪ, ನನ್ನ ತಾತ ತಂದ ಹಕ್ಕಿದು ಅಂತೇಳಿ ಸೂಕ್ತ ಬದಲಾವಣೆ ತಂದಿದ್ದಾರೆ. ಆದರೇ, ನಮ್ಮಗಳಿಗೆ ಈವರೆಗೆ ಮತದಾನದ ಮಹತ್ವ ತಿಳಿದಿಲ್ಲ. ಮತದಾನದ ಹಕ್ಕನ್ನ ನೀಡಿದ ಅಂಬೇಡ್ಕರ್ ಮರೆತು ರಾಜಕೀಯ ಪಕ್ಷಗಳ ದಾಳಕ್ಕೆ ಸಿಲುಕಿ ನಮ್ಮತನ ಕಳೆದುಕೊಂಡಿದ್ದೇವೆ. ಇಂತಹ ಪರಿಸ್ಥಿತಿ ಬದಲಾಗಬೇಕು. ನಮ್ಮ ಹಕ್ಕಿಗಾಗಿ, ನಮ್ಮ ಹೋರಾಟಕ್ಕಾಗಿ ಸೂಕ್ತ ಆಯ್ಕೆಗೆ ಮುಂದಾಗಬೇಕು” ಎಂದು ಕರೆ ನೀಡಿದರು.

ಮುಖಂಡ ನರಸಿಂಹಮೂರ್ತಿ ಮಾತನಾಡಿ, “ಒಳಮೀಸಲಾತಿ ಹೋರಾಟಗಾರರು ಅಂಬೇಡ್ಕರ್ ಪರಿನಿಬ್ಬಾಣದ ದಿವಸವನ್ನ ಆಚರಿಸಿ, ಸಿದ್ದರಾಮನಹುಂಡಿಯಿಂದ ಕಾಲ್ನಡಿಗೆ ಜಾಥಾ ನಡೆಸಲು ನೂರಾರು ಸಂಖ್ಯೆಯಲ್ಲಿ ಬಂದಿದ್ದರು. ಹಾಗೆಯೇ, ಸ್ಥಳೀಯವಾಗಿ ಗ್ರಾಮಸ್ಥರ ಬೆಂಬಲ ಕೋರಲಾಗಿ ಹೋರಾಟಗಾರರಿಗೆ ಬೆಂಬಲ ಸೂಚಿಸಿ ಬಂದಿದ್ದಾರೆ. ಅನೇಕ ಆದೇಶಗಳಾಗಿವೆ. ಅದರಲ್ಲಿ ಪರಮೋಚ್ಚ ನ್ಯಾಯಾಲಯದ ಆದೇಶ, ಜಸ್ಟಿಸ್ ನಾಗಮೋಹನ್ ದಾಸ್ ವರದಿ, ಸದಾಶಿವ ಆಯೋಗ ವರದಿ, ವಿಧಾನಸಭೆಯಲ್ಲಿ ತೆಗೆದುಕೊಂಡ ತೀರ್ಮಾನ ಎಲ್ಲವನ್ನು ಆಧರಿಸಿ ಎಲ್ಲ ವಿಭಾಗದಲ್ಲಿ ಅನುಕೂಲ ಆಗುವ ಪರಿಸ್ಥಿತಿಯಲ್ಲಿ ಇಲ್ಲ ಅನ್ನೋದು ಹೋರಾಟಗಾರ ಆಲೋಚನೆ” ಎಂದು ಹೇಳಿದರು.

“ಕೆಲವೇ ಕೆಲವು ಸೀಮಿತವಾದ ಮೀಸಲಾತಿಯನ್ನು ಅಂಗೀಕರಿಸಿದ್ದಾರೆ. ನಮಗೆ ರಾಜಕೀಯ ಮೀಸಲಾತಿ, ಶೈಕ್ಷಣಿಕ, ಸಹಕಾರ ಕ್ಷೇತ್ರ, ಉದ್ಯೋಗ ಮೀಸಲಾತಿ, ಬಡ್ತಿ, ಮುಂಬಡ್ತಿ ವಿಚಾರವಾಗಿ ಸರ್ಕಾರ ಸವಲತ್ತು ನೀಡುವಂತಹ ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಯಾಗಬೇಕು. ಒಂದನ್ನು ಕೊಟ್ಟು, ಇನ್ನೊಂದನ್ನು ಕಿತ್ತುಕೊಳ್ಳುವ ವಂಚನೆಯನ್ನು ತಡೆಯಬೇಕು, ಸಮುದಾಯಗಳ ಹಿತ ಕಾಯಬೇಕು” ಎಂದು ಸಲಹೆ ನೀಡಿದರು.

ಮೂಗೂರು ಸಿದ್ದರಾಜು ಮಾತನಾಡಿ, “ಒಳಮೀಸಲಾತಿ ವರದಿ ಅನುಷ್ಠಾನ ಮಾಡುವಂತೆ ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆ ಮಾಡಲಾಯಿತು. ಬೆಂಗಳೂರಿನಲ್ಲಿ ನಿರಂತರವಾಗಿ ಹಲವಾರು ಹೋರಾಟ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಸರಿ ಸುಮಾರು 8 ಲಕ್ಷಕ್ಕೂ ಅಧಿಕ ಜನರು ಸೇರಿದ ಬೃಹತ್ ಸಮಾವೇಶ ನಡೆಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಪ್ರತಿ ಹಿಡಿದು ಹೋರಾಟಕ್ಕಿಳಿದಾಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಆದ್ಯತೆಯಾಗಿ ಒಳಮೀಸಲಾತಿ ಜಾರಿ ಮಾಡುವುದಾಗಿ ಇದೇ ಸಿದ್ದರಾಮಯ್ಯನವರು ಮಾತು ಕೊಟ್ಟಿದ್ದರು. ಈ ಮಾತನ್ನು ನಂಬಿ ನಮ್ಮೆಲ್ಲ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ರಾಜ್ಯಾದ್ಯಂತ ಓಡಾಟ ನಡೆಸಿ ಅಧಿಕಾರಕ್ಕೆ ತಂದಿದ್ದೇವೆ” ಎಂದರು.

“ಇದಾದ ಬಳಿಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೇಳಿದಾಗ, ಈವರೆಗೆ ಕೊಟ್ಟಿರುವ ವರದಿಗಳು ಅವೈಜ್ಞಾನಿಕ. ಹಾಗಾಗಿ, ನಾವೇ ಏಕವ್ಯಕ್ತಿ ಆಯೋಗ ರಚಿಸಿ ಅದರ ಮೂಲಕ ಮೀಸಲಾತಿ ಕೊಡಲಾಗುತ್ತದೆ ಎಂತೇಳಿ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗ ರಚಿಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವರೂ ಕೂಡ ಸಿಹಿ ಸುದ್ದಿ ಕೊಡುತ್ತೇವೆಂದು ಹೇಳಿದ್ದರು. ಅದನ್ನು ನಂಬಿ ಹೋರಾಟಗಾರರು ಈವರೆಗೆ ಕಾದೆವು. ನಾಗಮೋಹನ್ ದಾಸ್ ಅವರು ಸಲ್ಲಿಸಿದ ವರದಿಯನ್ನು ಬದಿಗೊತ್ತಿ ತಮ್ಮದೇ ಆದ ರೀತಿಯಲ್ಲಿ ಕ್ಯಾಬಿನೆಟ್‌ನಲ್ಲಿ ವಿಚಾರ ಮಂಡನೆಯಾಗಿದೆ. ಆದರೆ ಒಳಮಿಸಲಾತಿ ವರ್ಗೀಕರಣ ಅನುಸಾರ ಈವರೆಗೆ ಜಾರಿಯಾಗಲೇ ಇಲ್ಲ. ಇದಕ್ಕೆಲ್ಲ ಕಾರಣ ಯಾರು ಅನ್ನೋದು ಮುಖ್ಯವಾದ ಪ್ರಶ್ನೆ. ಇದಕ್ಕೆಲ್ಲ ಅಡ್ಡಿಪಡಿಸುತ್ತಿರುವವರು. ನಮ್ಮ ಹಿಂದೆಯೇ ನಮ್ಮ ವಿರುದ್ಧ ಕೆಲಸ ಮಾಡುತ್ತಿರುವವರ ಬಗ್ಗೆ ಅರಿಯಬೇಕು” ಎಂದರು.

ಆನಂದ್ ಕುಮಾರ್ ಮಾತನಾಡಿ, “ಮೈಸೂರಿನಲ್ಲಿ ನಡೆಯಬೇಕಿದ್ದ ಕಾಲ್ನಡಿಗೆ ಜಾಥಾ ತಡೆಯುವಲ್ಲಿ ಪೊಲೀಸ್ ಅಧೀಕ್ಷಕರು, ಜಿಲ್ಲಾಡಳಿತ ನಡೆದುಕೊಂಡ ರೀತಿ ಬಾಬಾ ಸಾಹೇಬರಿಗೆ ಮಾಡಿದ ಅವಮಾನ. ಪೊಲೀಸ್ ಅಧೀಕ್ಷಕರಿಗೆ ಈ ಹಿಂದೆಯೇ ಮನವಿ ನೀಡಲಾಗಿತ್ತು. ಪೊಲೀಸ್ ಅಧೀಕ್ಷಕರು ಕೆಳಹಂತದ ಇಬ್ಬರು ಅಧಿಕಾರಿಗಳನ್ನ ನಮ್ಮೊಂದಿಗೆ ಮಾತಾಡಲು ಕಳುಹಿಸಿದ್ದರು. ಅವರು ನಮ್ಮೊಟ್ಟಿಗೆ ನಡೆದುಕೊಂಡ ರೀತಿ ಹೇಗಿತ್ತು ಎಂದರೆ ಯಾಕ್ರೀ ಸಿದ್ದರಾಮನಹುಂಡಿಯಲ್ಲಿ ಕಾಲ್ನಡಿಗೆ ಜಾಥಾ ಮಾಡುತ್ತೀರಿ? ಅಲ್ಲೇ ಯಾಕೆ ಪರಿನಿಬ್ಬಾಣ ಕಾರ್ಯಕ್ರಮ ಮಾಡುತ್ತೀರಿ? ಎನ್ನುವುದರ ಮೂಲಕ ಹೋರಾಟಗಾರರು ಎಲ್ಲಿ, ಯಾವಾಗ, ಹೇಗೆ ಹೋರಾಟ ಮಾಡಬೇಕು ಎನ್ನುವುದನ್ನು ನಿರ್ದೇಶನ ಮಾಡಲು ಮುಂದಾಗುತ್ತಾರೆ” ಎಂದು ಹೇಳಿದರು.

“ಆಗ ನಾವಂದುಕೊಂಡಿದ್ದು ಇವರಿಗೆ ಸಾರ್ವಜನಿಕವಾಗಿ ಹೇಗೆ ಸ್ಪಂದಿಸಬೇಕು, ನಡೆದುಕೊಳ್ಳಬೇಕು ಎನ್ನುವ ಅರಿವಿನ ಕೊರತೆ ಇದೆ. ಆದದೆ, ಪೊಲೀಸ್ ಅಧೀಕ್ಷಕರು ಸೂಕ್ತವಾಗಿ ಸ್ಪಂದಿಸಿತ್ತಾರೆ ಎನ್ನುವ ಭರವಸೆಯಲ್ಲಿ ಭೇಟಿ ಮಾಡಿದೆವು. ಅಚ್ಚರಿ ಏನೆಂದರೆ ಕೆಳಹಂತದ ಅಧಿಕಾರಿಗಳೇ ಎಷ್ಟೋ ಮಿಗಿಲು, ಅದಕ್ಕೂ ಕಡೆಯಾಗಿ ತಮ್ಮ ನಡಾವಳಿಯನ್ನು ಹೋರಾಟಗಾರರ ಜತೆ ತೋರುತ್ತಾರೆ. ಸರಿ ಸುಮಾರು ಮುಕ್ಕಾಲು ಗಂಟೆ ನಡೆದ ಮಾತುಕತೆಯಲ್ಲಿ ಶಾಂತಿಯುತವಾಗಿ, ಸುವ್ಯವಸ್ಥೆಗೆ ಭಂಗ ತರದ ರೀತಿಯಲ್ಲಿ ನಡೆಯುವ ಜಾಥಾ ಕುರಿತಾಗಿ ಮಾಹಿತಿ ಹಂಚಿಕೊಳ್ಳಲಾಗುತ್ತೆ. ಇದ್ಯಾವುದನ್ನು ಲೆಕ್ಕಿಸದೆ ಸದರಿ ಗ್ರಾಮಗಳಲ್ಲಿ ಕಾರ್ಯಕ್ರಮವಿದ್ದು, ಸ್ಥಳೀಯರು ಮನವಿ ಮಾಡಿದ್ದಾರೆ. ಆ ಕಾರಣಕ್ಕೆ ಅನುಮತಿ ನೀಡಲು ಅಸಾಧ್ಯ ಎನ್ನುತ್ತಾರೆ. ಅಲ್ಲದೆ, ಸ್ಥಳೀಯವಾಗಿ ನಮ್ಮೊಟ್ಟಿಗೆ ಸ್ಥಳೀಯರು ಇರುವಾಗ, ಬೆಂಬಲಿಸುವಾಗ ಇದು ಅಸಾಧ್ಯ ಮಾತು. ಸಿದ್ದರಾಮನಹುಂಡಿ ಭಾಗದ ಗ್ರಾಮಗಳ ಜನರೂ ಕೂಡ ಮನವಿ ಮಾಡಿದ್ದಾರೆ. ಆದರೂ ಒಳಮೀಸಲಾತಿ ಕಾಲ್ನಡಿಗೆ ಜಾಥಾ ನಡೆಸದಂತೆ ತಡೆದರು. ಸಚಿವ ಮಹದೇವಪ್ಪನವರು ಸಂವಿಧಾನ ಪುಸ್ತಕ ಹಿಡಿದು ಸಾಗಿದರೆ ಸಾಲದು. ಸಂವಿಧಾನದ ಸ್ಪಷ್ಟ ಜ್ಞಾನವಿರದೆ ನಡೆದುಕೊಳ್ಳುವುದು ಸರಿಯಲ್ಲ. ಸ್ವಲ್ಪ ಸಮಯದ ಕಾಲ ಸಂವಿಧಾನದ ಅರಿವನ್ನು ಪಡೆದು ಮತ್ತೆ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ, ಅದುವರೆಗೆ ಸಚಿವ ಸ್ಥಾನ ತೊರೆಯುವುದು ಸೂಕ್ತ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷ ವಿಡಿಯೋ ವೀಕ್ಷಿಸಿ :

ಮುಖಂಡರಾದ ಶಿವಮೊರ್ತಿ ಮಾತನಾಡಿ, “ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಆಯಾ ರಾಜ್ಯಗಳು ಒಳಮಿಸಲಾತಿಯನ್ನು ಜಾರಿ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದೆವು. ಆದರೇ, ದತ್ತಾಂಶ ಇಲ್ಲ ಎನ್ನುವ ಕಾರಣ ನೀಡಿ ಮುಂದೂಡಿದರು. ದತ್ತಾಂಶ ಪಡೆಯುವ ಉದ್ದೇಶದಿಂದಲೇ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗ ರಚಿಸಿದರು. ಅದರಂತೆ, ಸ್ಪಷ್ಟವಾದ ವರದಿ ಕೊಟ್ಟರೂ ಕೂಡ ಅದನ್ನೂ ದಿಕ್ಕರಿಸಿ ತಮ್ಮದೇ ಆದ ನಿಲುವನ್ನು ತೆಗೆದುಕೊಂಡರು. ಒಳಮೀಸಲಾತಿ ಜಾರಿ ಮಾಡುವಲ್ಲಿ ಗೊಂದಲ ಮೂಡಿಸಿದ್ದಾರೆ. ಹಾಗಾಗಿ, ಆ ಎಲ್ಲ ಗೊಂದಲಗಳನ್ನು ಸರಿಪಡಿಸಿ ಒಳಮೀಸಲಾತಿ ಜಾರಿ ಮಾಡಬೇಕು, ಹನ್ನೊಂದು ಹಕ್ಕೊತ್ತಾಯ ಅಂಶಗಳನ್ನು ಈಡೇರಿಸಬೇಕು ಎಂದು ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೆವು. ಆದರೆ, ನಮ್ಮ ಹೋರಾಟವನ್ನು ಸ್ಥಳೀಯ ಪ್ರಭಾವಿಗಳು ತಮ್ಮ ಅಧಿಕಾರದ ಬಲ ಬಳಸಿ ಪೊಲೀಸರ ಮೂಲಕ ಹೋರಾಟ ಹತ್ತಿಕ್ಕಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಒಳಮೀಸಲಾತಿಗೆ ಒತ್ತಾಯಿಸಿ ಡಿ.6ರಂದು ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಕಾಲ್ನಡಿಗೆ ಜಾಥಾ: ಬಸವರಾಜ ಕೌತಾಳ್

1000201388

ಮುಖಂಡ ವೆಂಕಟೇಶ್ ಮಾತನಾಡಿ, “ಆರು ದಿನಗಳ ಕಾಲ ಕಾಲ್ನಡಿಗೆ ಜಾಥಾ ಮಾಡಿ, ನಗರದಲ್ಲಿ ಮೈಸೂರು ಚಲೋ ಬೃಹತ್ ಸಮಾವೇಶ ನಡೆಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಒಳಮೀಸಲಾತಿ ಹೋರಾಟಗಾರಾರ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಸರ್ಕಾರ ಪೊಲೀಸರನ್ನು ಬಳಸಿ ಜಾಥಾ ನಡೆಸದಂತೆ ತಡೆದಿದೆ. ಆದರೆ, ಇದಕ್ಕೆಲ್ಲ ಭಾಗುವವರು ನಾವಲ್ಲ. ಒಳಮೀಸಲಾತಿ ಜಾರಿಯಾಗಲೇಬೇಕು. ಸಮುದಾಯಗಳಿಗೆ ಇನ್ನಾದರೂ ನ್ಯಾಯ ದೊರಕಲೇಬೇಕು. ಆ ನಿಟ್ಟಿನಲ್ಲಿ ನಮ್ಮಗಳ ಹೋರಾಟ ಮುಂದುವರೆಯುತ್ತದೆ. ಚುನಾವಣೆ ಇನ್ನೂ ಎರಡೂವರೆ ವರ್ಷಗಳಷ್ಟೇ ಬಾಕಿಯಿರುವುದು. ನಮ್ಮಗಳ ಮನೆಯ ಮುಂದೆ ಬರಲೇಬೇಕು. ನಮಗೂ ಗೊತ್ತಿದೆ ಹೇಗೆ ಬುದ್ದಿ ಕಲಿಸಬೇಕೆಂದು. ಈ ಹಿಂದೆ ಅಧಿಕಾರದಿಂದ ಹೇಗೆ ದೂರ ಇರಿಸಿದ್ದೆವೋ, ಆದೇ ಪರಿಸ್ಥಿತಿ ಮತ್ತೆ ಬರುತ್ತದೆ” ಎಂದು ಎಚ್ಚರಿಕೆ ನೀಡಿದರು.

ಈ ದಮನ ದಲಿತ-ಬಹುಜನರ ಧ್ವನಿಯನ್ನು ಸದಾಕಾಲ ಮುಚ್ಚಲಾರದು. ಇಂತಹ ಪ್ರತಿಯೊಂದು ಹತ್ತಿಕ್ಕುವಿಕೆಯೂ ಹೋರಾಟವನ್ನು ಇನ್ನಷ್ಟು ಬಲಪಡಿಸುತ್ತದೆ, ಜಾಗೃತಿಯನ್ನು ಹೆಚ್ಚಿಸುತ್ತದೆ. ಸಿದ್ದರಾಮನಹುಂಡಿಯಿಂದ ಹಿಡಿದು ಭಾರತದ ಎಲ್ಲೆಡೆ ದಲಿತರ ಸಮಾನತೆಯ ಧ್ವನಿ ಏರುತ್ತಲೇ ಇರುತ್ತದೆ. ಈ ದಮನಕಾರಿ ಸರ್ಕಾರಗಳು ಎಷ್ಟೇ ಪ್ರಯತ್ನಿಸಿದರೂ, ಈ ಚಳವಳಿಯನ್ನು ತಡೆಯಲಾಗುವುದಿಲ್ಲ ಎಂಬುದು ಹೋರಾಟಗಾರರ ಮಾತಾಗಿದೆ.

ಈ ಘಟನೆಯು ಸಾಮಾಜಿಕ ನ್ಯಾಯದ ಹೋರಾಟದ ಮೇಲೆ ರಾಜ್ಯ ಸರ್ಕಾರದ ದಮನಕಾರಿ ನೀತಿ ನಡೆಯುತ್ತಿರುವುದು ಒಂದು ಸ್ಪಷ್ಟ ಉದಾಹರಣೆಯಾಗಿದೆ.

ಸಿದ್ದರಾಮನಹುಂಡಿ ಕಾಲ್ನಡಿಗೆ ಜಾಥಾವು ಕೇವಲ ಪರಿಶಿಷ್ಟ ಜಾತಿಗಳ ಹಕ್ಕುಗಳಿಗಾಗಿ, ಭೂ ಸುಧಾರಣೆಗಾಗಿ, ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧದ ಶಾಂತಿಯುತ ಪ್ರತಿಭಟನೆಯಾಗಿತ್ತು. ಆದರೆ ಮೈಸೂರಿನಲ್ಲಿ ಪೊಲೀಸರು ಅನುಮತಿಯಿಲ್ಲದೇ ಸೆಕ್ಷನ್ 144 ಜಾರಿಗೊಳಿಸಿ, ಜಾಥಾವನ್ನು ಬಲಪ್ರಯೋಗದಿಂದ ತಡೆದಿದ್ದು, ಹೋರಾಟಗಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿರುವುದು ಸ್ಪಷ್ಟವಾಗಿ ಸಂವಿಧಾನಿಕ ಹಕ್ಕುಗಳಾದ ಸಭೆ-ಸಂಘಟನೆಯ ಸ್ವಾತಂತ್ರ್ಯ(ಅನುಚ್ಛೇದ 19(1)(b)) ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ(ಅನುಚ್ಛೇದ 19(1)(a)) ಉಲ್ಲಂಘನೆಯಾಗಿದೆ.

ಈ ರೀತಿಯ ದಮನವು ಹೊಸದಲ್ಲ. ದಲಿತ-ಬಹುಜನ ಹೋರಾಟಗಳನ್ನು ʼಶಾಂತಿಭಂಗದ ಆತಂಕʼ ಎಂಬ ಸುಳ್ಳು ಕಾರಣ ನೀಡಿ ಯಾವಾಗಲೂ ಹತ್ತಿಕ್ಕುವುದು ಈ ರಾಜ್ಯದಲ್ಲಿ ಸಾಮಾನ್ಯವಾಗಿದೆ. ಆದರೆ ಗುಂಪು ವೈಷಮ್ಯ ಎಂದರೇನು? ದಲಿತರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದಾಗ ಮಾತ್ರ ಏಕಾಏಕಿ ʼವೈಷಮ್ಯʼ ಉಂಟಾಗುತ್ತದೆಯೇ? ಮೇಲ್ಜಾತಿಗಳ ಯಾತ್ರೆಗಳು, ಧಾರ್ಮಿಕ ಸಮಾವೇಶಗಳು ನಡೆದಾಗ ಪೊಲೀಸರು ಎಂದೂ 144 ಹಾಕುವುದಿಲ್ಲ. ಇದು ಸ್ಪಷ್ಟವಾದ ಜಾತಿ ಪಕ್ಷಪಾತ ಮತ್ತು ದಲಿತ ವಿರೋಧಿ ನೀತಿಯಾಗಿದೆ.

ಕಾಂಗ್ರೆಸ್ ಸರ್ಕಾರವು ಬಾಯಲ್ಲಿ ʼಅಹಿಂದʼ ಎಂದು ಹೇಳಿಕೊಂಡರೂ, ಕ್ರಿಯೆಯಲ್ಲಿ ದಲಿತರ ಹೋರಾಟವನ್ನು ಹತ್ತಿಕ್ಕುವ, ಮಣಿಸುವ ಜಾತಿ ಪ್ರಭುತ್ವದ ರಕ್ಷಣೆಯನ್ನೇ ಮಾಡುತ್ತಿದೆ. ಇದು ಕೇವಲ ಒಂದು ಜಾಥಾವನ್ನು ತಡೆದದ್ದಲ್ಲ, ದಲಿತರ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ಸಮಾನತೆಯ ಹೋರಾಟದ ಮೇಲೆ ನಡೆಸಿದ ದಾಳಿಯಾಗಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...