ಕ್ರೀಡಾಪಟುಗಳು ಸಮಯ ಪಾಲನೆಗೆ ಹೆಚ್ಚು ಒತ್ತು ಕೊಡಬೇಕು. ಜೀವನದಲ್ಲಿ ನಗರ ಯುವಕರಿಗಿಂತಲೂ ಹಳ್ಳಿ ಯುವಕರಲ್ಲಿ ಬಹಳಷ್ಟು ಪ್ರತಿಭೆ ಇರುತ್ತದೆ. ನಿಮಗೆ ಅತ್ಯುತ್ತಮವಾದ ಉಚಿತ ಆಟದ ಮೈದಾನಗಳು ಸಿಗುತ್ತೆ ಮತ್ತು ಹಲವಾರು ಅವಕಾಶಗಳು ಗ್ರಾಮೀಣ ಮಟ್ಟದಲ್ಲಿ ಸಿಗುತ್ತೆ. ಆ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಬೆಂಗಳೂರಿನ ಸಂತ ಜೋಸೆಫ್ ಕಾಲೇಜಿನ ದೈಹಿಕ ಶಿಕ್ಷಕ ಶಿವಪ್ರಕಾಶ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಸಂಗಮ ಸಮಗ್ರ ಗ್ರಾಮೀಣಾಭಿವೃದ್ಧಿ ಕೇಂದ್ರ ಹಾಗೂ ಯುವ ಸಂಗಮ ಒಕ್ಕೂಟದ ವತಿಯಿಂದ ದೀಪಾವಳಿಯ ಅಂಗವಾಗಿ ಆಯೋಜಿಸಿದ್ದ ಸೌಹಾರ್ದತೆಯ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಂದ್ಯದಲ್ಲಿ ಏಳು ತಂಡಗಳನ್ನು ಭಾಗವಹಿಸಿದ್ದವು. ಈ ಪೈಕಿ ಯರಗಲ್ ಬಿಕೆ ತಂಡವು ಪ್ರಥಮ ಸ್ಥಾನವನ್ನು ಹಾಗೂ ಮಲಘಾಣ ಯುವಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ವಿಜಯಪುರ | ಕಬ್ಬು ದರ ನಿಗದಿ ಕೇಂದ್ರದ ಅಧಿಕಾರ; ರಾಜ್ಯದ್ದು ಜಾರಿಯ ಕೆಲಸ: ಸಚಿವ ಎಂ ಬಿ ಪಾಟೀಲ್
ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಮಾತನಾಡಿ, “ಸಂಗಮ ಸಂಸ್ಥೆ ದೀಪಾವಳಿ ಅಂಗವಾಗಿ ಪ್ರತಿವರ್ಷ ಯುವ ಸಂಗಮ ಕ್ರೀಡಾಕೂಟ ಏರ್ಪಡಿಸುತ್ತದೆ. ಸ್ಪರ್ಧೆಗಳಲ್ಲಿ ಎಲ್ಲರೂ ಅತ್ಯುತ್ತಮವಾಗಿ ಭಾಗವಹಿಸಿದ್ದೀರಿ” ಎಂದು ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 77 ಯುವಕರು ಭಾಗವಹಿಸಿದ್ದರು. ಲೊಯಲ್ ಶಾಲೆಯ ಪ್ರಾಚಾರ್ಯ ವಿಶಾಲ್ ಫಾದರ್, ಆರೀಫ್, ಮಾಂತೇಶ್ ಮತ್ತು ಸಂಗಮ ಸಂಸ್ಥೆಯ ಕಾರ್ಯಕರ್ತರು ಹಾಜರಿದ್ದರು.





