ದೀಪಾವಳಿ ಬೆಳಕಿನ ಹಬ್ಬ ಮಾತ್ರವಲ್ಲ, ಅದು ಅಂಧಕಾರದ ಮೇಲೆ ಬೆಳಕಿನ ಜಯ, ದುಷ್ಕೃತ್ಯದ ಮೇಲೆ ಸತ್ಕೃತ್ಯದ ಜಯ ನೀಡುವ ಸಂಕೇತ. ಧರ್ಮಾಂತರದ ಗಡಿಗಳನ್ನು ಮೀರಿ ಮಾನವೀಯತೆ ಬೆಳಗಬೇಕಾಗಿದೆ ಎಂದು ಶಾಂತಗಂಗಾಧರ ಶ್ರೀ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಂಗಮ ಸಮಗ್ರ ಅಭಿವೃದ್ಧಿ ಕೇಂದ್ರ ಹಾಗೂ ಯುವಕ ಸಂಘ ಕನ್ನೊಳ್ಳಯ ದೊಡ್ಡಪ್ಪ ಮಹಾರಾಜ್ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅಂತರ್‌ಧರ್ಮೀಯ ಸ್ನೇಹ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಅವರು ಶಾಂತಿಯ ಸಂದೇಶ ಹಂಚಿಕೊಂಡರು.
ಇಸ್ಲಾಂ ಧರ್ಮ ಗುರುಗಳಾದ ಹಾಜಿ ಕೋಟ್ಯಾಳ ಅವರು ಮಾತನಾಡಿ, “ಎಲ್ಲರೂ ಒಟ್ಟಾಗಿ ಬಾಳಬೇಕು. ಶಾಂತಿಯುತವಾಗಿ ಬಾಳುವುದೇ ಎಲ್ಲ ಧರ್ಮಗಳ ಸಂದೇಶವಾಗಿದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಲ್ಲರೂ ಸೇರಿ ದೀಪ ಹಚ್ಚಿ ಶಾಂತಿ ಮತ್ತು ಸಹಕಾರದ ಸಂಕೇತವನ್ನು ಪ್ರದರ್ಶಿಸಿದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಂತರ್‌ಧರ್ಮೀಯ ಏಕತೆಗೆ ಮಾದರಿಯಾಗಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದಲ್ಲಿ 11200 ನಕಲಿ ಮತದಾರರು: ಸಚಿವ ದಿನೇಶ್ ಗುಂಡೂರಾವ್
ಈ ಕಾರ್ಯಕ್ರಮದಲ್ಲಿ ಲೋಯೋಲಾ ಶಾಲೆಯ ಪ್ರಾಂಶುಪಾಲರು ಮತ್ತು ಆಡಳಿತ ನಿರ್ವಹಣೆಗಾರರಾದ ಫಾದರ್ ಜೀವನ ಅವರು ಮಾತನಾಡಿ, ದೀಪಾವಳಿ ಹಬ್ಬವು ಬೆಳಕಿನ ಹಬ್ಬ ನಾವೆಲ್ಲರೂ ಸೇರಿ ಆಚರಿಸಿ ಜಗತ್ತಿಗೆ ಶಾಂತಿಯನ್ನು ಸಾರೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗುರಿ ಹಿರಿಯರು ಹಾಗೂ ಯುವಕ ಸಂಘಟನೆಯ ಕಾರ್ಯಕರ್ತರು, ಸಂಗಮ ಸಂಸ್ಥೆಯ ಸಿಬ್ಬಂದಿಗಳು ಇದ್ದರು.





