ನಗರದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಯುವಜನರು ದುಶ್ಚಟಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟದಿಂದ ಬುಧವಾರ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ನಗರದಲ್ಲಿನ ವಿವಿಧ ವಾರ್ಡುಗಳು, ನಗರಕ್ಕೆ ಹೊಂದಿಕೊಂಡ ನಿರ್ಜನ ಪ್ರದೇಶಗಳು ಹಾಗೂ ಇತರೆಡೆಗಳಲ್ಲಿ ಗಾಂಜಾ ಪ್ಯಾಕೆಟ್‌ಗಳನ್ನು ತಯಾರಿಸಿ, ಅಕ್ರಮವಾಗಿ ವ್ಯಸನಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಯುವಕರು ಗಾಂಜಾ ಹಾಗೂ ಮಾದಕ ವಸ್ತು ಸೇವಿಸಿದ ನಶೆಯಲ್ಲಿ ಸಾರ್ವಜನಿಕರಿಗೆ ಬಹಿರಂಗವಾಗಿ ಬೆದರಿಕೆ ಹಾಕುವುದು ಮತ್ತು ಬೈಕ್ ಗಳನ್ನು ಮನಬಂದಂತೆ ಚಲಾಯಿಸಿ ಅಪಘಾತಗಳು ಸಂಭವಿಸಿವೆ ಎಂದು ಕಳವಳ ವ್ಯಕ್ತಪಡಿಸಿದರು.
ನಗರದ ಕೆಲವು ಕಾಲೋನಿಗಳಾದ ಮಹೆಬೂಬಿಯಾ ಕಾಲೋನಿ, ಶರಣಬಸವೇಶ್ವರ ಕಾಲೋನಿ, ಇಂದಿರಾನಗರ, ಪ್ರಶಾಂತನಗರ, ಖದರಿಯಾ ಕಾಲೋನಿ, ಜವಳಗೇರಾ ಹಾಗೂ ಕೆಲ ಪುನರ್ವಸತಿ ಕ್ಯಾಂಪ್‌ಗಳಲ್ಲಿ ಗಾಂಜಾ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಚಾಕೂಲೇಟ್‌ನಲ್ಲಿ ಮಾದಕ ವಸ್ತುವನ್ನು ಸೇರಿಸಿ ಮಾರಾಟ, ಡ್ರಗ್ಸ್ ಒಳಗೊಂಡ ಇಂಜೆಕ್ಷನ್ ಮಾರಾಟ ಮಾಡಲಾಗುತ್ತಿದೆ ಎಂದು ನಾಗರಿಕರಿಂದ ತಿಳಿದುಬಂದಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಇದನ್ನು ತಡೆಯಲು ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ನಾಗರಿಕರು ದೂರಿದರು.
ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಲು ತಾಲ್ಲೂಕಿನ ಅಧಿಕಾರಿಗಳ ಜೊತೆ ಚರ್ಚಿಸಿ ಕಡಿವಾಣಕ್ಕೆ ಮುಂದಾಗಬೇಕು ಎಂದು ಒಕ್ಕೂಟದ ಸಂಚಾಲಕರು ಆಗ್ರಹಿಸಿದರು.
ಈ ಬಗ್ಗೆ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಮಾತನಾಡಿ, ಜನವರಿ ಮೊದಲ ವಾರದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದು ವಿಸ್ತೃತವಾಗಿ ಚರ್ಚಿಸಿ ಕ್ರಮ ಜರುಗಿಸಲಾಗುವುದು ಎಂದು ಒಕ್ಕೂಟದ ಸಂಚಾಲಕರಿಗೆ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿಬಿಜಿ- ರಾಮಜಿ ಮಸೂದೆ ವಿರೋಧಿಸಿ ಸಂಸದರ ಕಚೇರಿ ಮುಂದೆ ಕೂಲಿಕಾರರ ಪ್ರತಿಭಟನೆ
ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕರಾದ ಚಂದ್ರಶೇಖರ ಗೊರಬಾಳ, ಬಾಬರ್‌ಪಾಷಾ ವಕೀಲರು, ಹುಸೇನ್‌ಸಾಬ್, ಖಾದರ್‌ಸುಬಾನಿ, ಬಸವರಾಜ ಬಾದರ್ಲಿ, ಜಿಲಾನಿಪಾಷಾ, ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಶಂಕರ ಗುರಿಕಾರ, ಬಸವಂತರಾಯಗೌಡ ಕಲ್ಲೂರು, ರೆಹಮಾನ್‌ಸಾಬ್, ಬಸವರಾಜ ಹಳ್ಳಿ, ಸರ್ಪರಾಜ್‌ಖಾನ್ ಸೇರಿದಂತೆ ಇನ್ನಿತರರು ಇದ್ದರು.





