ಹದಿನಾರು ವರ್ಷಗಳಿಂದ ಗುತ್ತಿಗೆದಾರರಿಗೆ ಬಾಕಿ ಉಳಿದಿರುವ ಬಿಲ್‌ಗಳನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಪಾವತಿಸದ ಹಿನ್ನೆಲೆಯಲ್ಲಿ, ನಗರದ ಹಿರಿಯ ಶ್ರೇಣಿ ನ್ಯಾಯಾಲಯವು ಎರಡನೇ ಬಾರಿ ಇಲಾಖೆಯ ವಾಹನ ಜಪ್ತಿಗೆ ಆದೇಶಿಸಿದೆ.
ಈ ಹಿಂದೆ ಕೂಡ ನ್ಯಾಯಾಲಯ ಜಪ್ತಿಗೆ ಆದೇಶ ನೀಡಿದ್ದರೂ ಇಲಾಖೆ ಅಧಿಕಾರಿಗಳು ತಡೆಯಾಜ್ಞೆ ಪಡೆದು ತಪ್ಪಿಸಿಕೊಂಡಿದ್ದರು. ಬಳಿಕ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ, ಎರಡು ತಿಂಗಳೊಳಗೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ನಿಗದಿತ ಅವಧಿ ಮುಗಿದರೂ ಬಿಲ್ ಪಾವತಿ ನಡೆಯದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಪುನಃ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ನ್ಯಾಯಾಲಯದ ಆದೇಶದಂತೆ, ಗುರುವಾರ ಗುತ್ತಿಗೆದಾರರ ಪರ ವಕೀಲರ ಸಮ್ಮುಖದಲ್ಲಿ ನ್ಯಾಯಾಲಯದ ಅಧಿಕಾರಿಗಳು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಬುಲೆರೊ ವಾಹನವನ್ನು ಜಪ್ತಿ ಮಾಡಿದರು. ಈ ಸಂದರ್ಭದಲ್ಲಿ ಬೇರೆ ಮಾರ್ಗವಿಲ್ಲದೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅಸಹಾಯಕರಾಗಿ ವಾಹನದ ಚಾಲಕನೊಂದಿಗೆ ಮಾತನಾಡಿ ಕಚೇರಿಯಿಂದ ನಡೆದುಕೊಂಡು ಹೊರಹೋಗಿರುವ ದೃಶ್ಯ ಕಂಡುಬಂತು.
ಸಿಂಧನೂರು ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ 2009-10ನೇ ಸಾಲಿನ ನೆರೆಹಾವಳಿ ಯೋಜನೆ ಅಡಿಯಲ್ಲಿ 16 ವರ್ಷಗಳ ಹಿಂದೆ ರೂ.4 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರ ಚನ್ನಬಸಪ್ಪ ಹತ್ತಿಗುಡ್ಡ ಇಲಾಖೆಯ ಆದೇಶದಂತೆ ನಿರ್ವಹಿಸಿದ್ದರು. ಕಾಮಗಾರಿ ಪೂರ್ಣಗೊಂಡ ನಂತರ ಬಿಲ್ ಪಾವತಿಸುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸಿಂಧನೂರು ಉಪ ವಿಭಾಗದ ಅಧಿಕಾರಿಗಳ ಮೊರೆ ಹೋಗಿದ್ದರು. ಕಾಮಗಾರಿ ಬಿಲ್ ಬಿಡುಗಡೆ ಮಾಡಲು ಹಲವು ವರ್ಷಗಳ ಕಾಲ ಅಧಿಕಾರಿಗಳು ಸತಾಯಿಸಿದ ಕಾರಣ ಗುತ್ತಿಗೆದಾರರು ಕಾನೂನು ಮೊರೆ ಹೋಗಿದ್ದರು.
ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾವೆ ದಾಖಲು ಗುತ್ತಿಗೆದಾರರು ಸಿಂಧನೂರಿನ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದರು. ನ್ಯಾಯಾಲಯ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರೂ ಸಹ ಇಲಾಖೆಯ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹಾಗಾಗಿ ಪ್ರಕರಣದ ದಾಖಲಾತಿಗಳನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯ ಏಕಪಕ್ಷೀಯ ಆದೇಶದೊಂದಿಗೆ ಒಟ್ಟು ಬಿಲ್ ಬಾಕಿ ಮೊತ್ತ ರೂ.2,12,756ಗೆ 2010ರಿಂದ ಬಡ್ಡಿ ಸೇರಿ ಒಟ್ಟು ರೂ.8,22,516 ಗಳನ್ನು ಗುತ್ತಿಗೆದಾರರಿಗೆ ನೀಡಬೇಕೆಂದು ದಿ: 15-03-2025ರಂದು ಆದೇಶ ಹೊರಡಿಸಿದ್ದರೂ ಸಹ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು.
ಆದೇಶ ಜಾರಿ ಪ್ರಕರಣ ದಾಖಲು ತದನಂತರ ಗುತ್ತಿಗೆದಾರರು ನ್ಯಾಯಾಲಯದ ಆದೇಶದ ಪಾಲನೆಗೆ ಮತ್ತೊಂದು ಆದೇಶ ಜಾರಿ ಪ್ರಕರಣವನ್ನು ದಾಖಲು ಮಾಡಿದ್ದರು. ನ್ಯಾಯಾಲಯ ಆದೇಶ ಜಾರಿ ಪ್ರಕರಣದ ಮೇಲೆ ದಿ:10-06-2025ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಿಲ್ಲಾ ಪಂಚಾಯಿತಿ ರಾಯಚೂರು, ಇಇ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ರಾಯಚೂರು ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಉಪ ವಿಭಾಗ ಸಿಂಧನೂರು ಇವರ ವಾಹನಗಳ ಜಪ್ತಿಗೆ ವಾರಂಟನ್ನು ಹೊರಡಿಸಿತ್ತು.
ತಡೆಯಾಜ್ಞೆ ದಿ.15-07-2025ರಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಇವರ ಬುಲೆರೊ ವಾಹನ (ಕೆಎ36, ಜಿ0852) ವನ್ನು ನ್ಯಾಯಾಲಯದ ಸಿಬ್ಬಂದಿ ಮತ್ತು ಪ್ರಕರಣ ದಾಖಲಿಸಿದ ಗುತ್ತಿಗೆದಾರ ಮತ್ತು ಅವರ ವಕೀಲರಾದ ಮಿಥುನ್ ಕುಮಾರ್ ಅವರ ಸಮ್ಮುಖದಲ್ಲಿ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ತದನಂತರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಇವರು ಅದೇ ದಿನ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣ ನ್ಯಾಯಾಲಯವು ಈ ವಾಹನವನ್ನು ಬಿಡುಗಡೆಗೊಳಿಸಿತ್ತು.
ಮುಗಿದ ಕಾಲಾವಕಾಶ, 2ನೇ ಬಾರಿಗೆ ವಾಹನ ಜಪ್ತಿ ಆದೇಶ ಮೊದಲನೆ ಸಲ ಜಪ್ತಿ ಮಾಡಿದಾಗ ಇಲಾಖೆಯ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿ, ಖುದ್ದು ಪ್ರಮಾಣಪತ್ರ ಸಲ್ಲಿಸಿ ಹಣ ಪಾವತಿಸುವ ಬಗ್ಗೆ ಕಾಲಾವಕಾಶ ಪಡೆದಿದ್ದ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನಂತರ ತಾವು ಸಲ್ಲಿಸಿದ ಪ್ರಮಾಣಪತ್ರದಂತೆ ನ್ಯಾಯಾಲಯಕ್ಕೆ ಹಣವನ್ನು ಪಾವತಿಮಾಡದ ಕಾರಣ, ಮಾನ್ಯ ಗೌರವಾನ್ವಿತ ಹಿರಿಯ ಶ್ರೇಣಿ ನ್ಯಾಯಾಲಯ ಸಿಂಧನೂರು ನ್ಯಾಯಾಧೀಶರಾದ ಲಕ್ಷ್ಮೀಕಾಂತ ಜಾನಕೀರಾಮ್ ಮಿಸ್ಕಿನ್ ಇವರು ಪುನಃ ಎರಡನೇ ಬಾರಿಗೆ ದಿ:05-02-2026ರಂದು ಜಪ್ತಿ ವಾರಂಟ್ ಆದೇಶ ಹೊರಡಿಸಿದ್ದರು. ಅದರಂತೆ ಗುರುವಾರ ಗುತ್ತಿಗೆದಾರರ ಪರ ವಕೀಲರಾದ ಮಿಥುನ್ ಕುಮಾರ್ ಹಾಗೂ ನ್ಯಾಯಾಲಯದ ಸಿಬ್ಬಂದಿಯವರಾದ ಬೇಲಿಫ್ ಅಮರೇಗೌಡ ವಂದಲಿ, ಮಹಾಂತೇಶ ಜಪ್ತಿ ಮಾಡಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರ ಚನ್ನಬಸಪ್ಪ ಹತ್ತಿಗುಡ್ಡ, ಬಸವರಾಜ ತುರ್ವಿಹಾಳ, ಸುರೇಶ ಗೊರೇಬಾಳ ಇದ್ದರು. ಜಪ್ತಿಯಾದ ವಾಹನವನ್ನು ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಲಾಯಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿಗೆ ಸಚಿವರಿಗೆ ಘೇರಾವ್, ಕಪ್ಪುಬಾವುಟ ಪ್ರದರ್ಶನ; ಮಾದಿಗ ಮೀಸಲಾತಿ ಎಚ್ಚರಿಕೆ
ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಬಸಪ್ಪ ಹತ್ತಿಗುಡ್ಡ ಮಾತನಾಡಿ, ಕಳೆದ 16 ವರ್ಷಗಳಿಂದ ಬಿಲ್ ಪಾವತಿಗೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಿದರೂ ಇಲಾಖೆಯವರು ಇಲ್ಲಿಯವರೆಗೂ ನಾನು ಮಾಡಿದ ಕೆಲಸಕ್ಕೆ ಹಣ ಪಾವತಿಸದೇ ವಿಳಂಬ ಧೋರಣೆ ಅನುಸರಿಸಿದ್ದಾರೆ. ನಾನು ಹೊರಗಡೆ ಸಾಲ ಪಡೆದು ತುಂಡು ಕಾಮಗಾರಿ ನಿರ್ವಹಿಸಿದ್ದು, ಇದರಿಂದ ಆರ್ಥಿಕ ಸಂಕಷ್ಟಕ್ಕೀಡಾಗಿದ್ದೇನೆ. ಆದರೆ ಇಲಾಖೆಯವರು ನ್ಯಾಯಾಲಯದ ಎರಡನೇ ಬಾರಿಯ ಜಪ್ತಿ ಆದೇಶಕ್ಕೂ ಬೆಲೆ ನೀಡದೇ ವರ್ತಿಸುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ಬಹಳಷ್ಟು ನೊಂದಿದ್ದೇನೆ, ಇದು ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಗೆ ಜ್ವಲಂತ ಸಾಕ್ಷಿಯಾಗಿದೆ. ಇನ್ಯಾದರೂ ಇಲಾಖೆ ನ್ಯಾಯಾಲಯದ ಆದೇಶದಂತೆ ನನಗೆ ಬರಬೇಕಾದ ಹಣ ಪಾವತಿಸಬೇಕು.





