ಸಿಂಧನೂರು ಗ್ರಾಮೀಣ, ತುರ್ವಿಹಾಳ ಠಾಣೆ ಸೇರಿ ಸಿಂಧನೂರು ತಾಲೂಕಿನಲ್ಲಿ ನಡೆದ ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 3 ತೊಲೆ ಚಿನ್ನ, 15 ತೊಲೆ ಬೆಳ್ಳಿ ಹಾಗೂ ಬೈಕ್ ಜಪ್ತಿ ಮಾಡಿದ್ದಾರೆ.
ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿ ಜಿಲಾನಿಯನ್ನು ವಶಕ್ಕೆ ಪಡೆದು ರೂ.60 ಸಾವಿರ ಮೌಲ್ಯದ 5 ಗ್ರಾಂ ಬಂಗಾರದ ನತ್ತು, 60 ಸಾವಿರ ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು, ಕಳ್ಳತನ ಮಾಡಲು ಉಪಯೋಗಿಸಿದ ಹೊಂಡಾ ಯೂನಿಕಾರ್ನ್ ಬೈಕ್ ಸೇರಿ ಒಟ್ಟು ರೂ.1.50 ಲಕ್ಷ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿ ತಾಲೂಕಿನ ಸುಂಕನೂರು ಗ್ರಾಮದ ಶಿವರಾಜ ಹನುಮಮ್ಮ ಎಂಬ ಆರೋಪಿಯನ್ನು ಬಂಧಿಸಿ, 2 ತೊಲೆ ಬಂಗಾರದ ಆಭರಣ, 15 ತೊಲೆ ಬೆಳ್ಳಿಯ ಆಭರಣ ಸೇರಿ ಒಟ್ಟು 2.50 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | 16 ವರ್ಷಗಳ ಬಾಕಿ ಬಿಲ್ ಪ್ರಕರಣ; ಜಿ.ಪಂ. ಸಿಇಒ ಕಾರು ಜಪ್ತಿ ಆದೇಶದ ಬಳಿಕ ಒಂದೇ ದಿನದಲ್ಲಿ ಪಾವತಿ
ಮೂರು ಪ್ರಕರಣಗಳಲ್ಲಿ ಒಟ್ಟು ರೂ.4 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಸಿಂಧನೂರು ಡಿವೈಎಸ್‍ಪಿ ಚಂದ್ರಶೇಖರ.ಜಿ ನೇತೃತ್ವದಲ್ಲಿ ಸಿಪಿಐ ವಿನಾಯಕ, ಗ್ರಾಮೀಣ ಠಾಣೆ ಪಿಎಸ್‌ಐ ಮೌನೇಶ ರಾಠೋಡ್, ಬಳಗಾನೂರು ಠಾಣೆ ಪಿಎಸ್‌ಐ ಎರಿಯಪ್ಪ ಅಂಗಡಿ, ತುರ್ವಿಹಾಳ ಪಿಎಸ್‌ಐ ಸುಜಾತ, ಎಎಸ್ಐ ದೌಲತ್‍ಸಾಬ್, ಗೋಪಾಲ, ಬಸವರಾಜ, ಹಫೀಜುಲ್ಲಾ, ಅಮರೇಶ, ಮಹೇಶಬಾಬು ಅವರಿದ್ದ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಈ ತಂಡದಿಂದ ವಿಶೇಷ ಕಾರ್ಯಾಚರಣೆ ನಡೆಸಿ ಫೆ.13ರಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ ಅವರು ಶ್ಲಾಘಿಸಿದ್ದಾರೆ.




