ಸಿರಾ ತಾಲ್ಲೂಕಿನ ಅಮಲಗೊಂದಿಯ ಚಿಗುರು ಯುವಜನ ಸಂಘ ದಿಂದ ಶ್ರೀಬೊಮ್ಮಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶಾಲೆಯ ಮಕ್ಕಳಿಗೆ ಪ್ರಶಾಂತ ಸಾಗರ ರವರ ನಿರ್ಮಿಸಿರುವ ಕೌತುಕ ಡಾಕ್ಯುಮೆಂಟರಿ ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಮಂಜುನಾಥ್ ಅಮಲಗೊಂದಿ ಮಾತನಾಡಿ, ಮಕ್ಕಳಿಗೆ ಮೂಲಭೂತವಾಗಿ ಉತ್ತಮ ಪರಿಸರವನ್ನು ಉಳಿಸಿಕೊಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಪ್ರಸ್ತುತವಾಗಿ ನಮ್ಮ ದೇಶದಲ್ಲಿ 42 ಕೋಟಿ ಮಕ್ಕಳಿದ್ದಾರೆ. ಅವರ ಭವಿಷ್ಯದ ಬಗ್ಗೆಯೂ ನಾವೆಲ್ಲರೂ ಆಲೋಚಿಸಬೇಕಿದೆ. ಇಂದಿನ ಮತ್ತು ಮುಂದಿನ ಪೀಳಿಗೆಯ ಮಕ್ಕಳಿಗೆ ಶುದ್ಧ ಗಾಳಿ, ನೀರು, ಪೌಷ್ಟಿಕಾಂಶವುಳ್ಳ ಆಹಾರ, ಮಾಲಿನ್ಯ ಮುಕ್ತ ಪರಿಸರವನ್ನು ನಾವೆಲ್ಲರೂ ಬಿಟ್ಟು ಹೋಗಬೇಕಿದೆ. ಆಗಾಗಿ ನಮ್ಮೊಂದಿಗೆ ಮಕ್ಕಳಿಗೂ ಪರಿಸರದ ಬಗ್ಗೆ ಸಂವೇದನಾಶೀಲರನ್ನಾಗಿಸುವ ತುರ್ತಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಶಾಲೆಯ ಶಿಕ್ಷಕರಾದ ಶ್ರೀನಿವಾಸ್ ರವರು ಮಾತನಾಡಿ, ಮಕ್ಕಳು ದೇಶವನ್ನು ಪ್ರತಿನಿಧಿಸುವ ಹೂವುಗಳಂತೆ. ಅವರ ಆರೋಗ್ಯ, ರಕ್ಷಣೆ, ಭಾಗವಹಿಸುವಿಕೆ, ಶಿಕ್ಷಣವನ್ನೂ ಒಳಗೊಂಡಂತೆ ಸರ್ವಾಂಗೀಣ ಅಭಿವೃದ್ಧಿ ಮಾಡುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಹಾಗೆಯೇ ಮಕ್ಕಳಿಗೆ ತಮ್ಮ ಹಕ್ಕುಗಳ ಜೊತೆ ಜೊತೆ ಕರ್ತವ್ಯಗಳನ್ನು ಸಹ ಅರ್ಥಮಾಡಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗಭೂಷಣ್, ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.





