ಶಿರಸಿ: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದೆಂದು ಆಮಿಷವೊಡ್ಡಿ ಶಿರಸಿ ತಾಲ್ಲೂಕಿನ ವ್ಯಾಪರಿ ಅತೀಖ ಅಹ್ಮದ್ ಅತ್ತಾರ ಎಂಬುವವರಿಗೆ ಬರೋಬ್ಬರಿ ₹5.70 ಲಕ್ಷ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಹಣ ಹಿಂದಿರುಗಿಸುವಂತೆ ಕೇಳಿದಾಗ ಆರೋಪಿಗಳು ಜೀವಬೆದರಿಕೆ ಹಾಕಿದ್ದಾರೆ ಎಂದು ವಂಚನೆಗೆ ಒಳಗಾದ ವ್ಯಕ್ತಿ ಶಿರಸಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅತೀಖ ಅಹ್ಮದ್ ಅವರು ನೀಡಿದ ದೂರಿನ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ವ್ಯಾಪಾರ ನಿಮಿತ್ತ ಉತ್ತರ ಪ್ರದೇಶದ ಕಾನ್ಪುರಕ್ಕೆ ತೆರಳಿದ್ದಾಗ, ಅಲ್ಲಿ ಮೊಹಮ್ಮದ್ ರಿಜ್ವಾನ್ ಎಂಬಾತನ ಪರಿಚಯವಾಯಿತು ಎಂದು ತಿಳಿಸಿದ್ದಾರೆ. ರಿಜ್ವಾನ್ ತಾನು ಗಿಡಮೂಲಿಕೆ ಔಷಧಿ, ಸುಗಂಧ ದ್ರವ್ಯ ವ್ಯಾಪಾರಸ್ಥ ಹಾಗೂ ಮುಸ್ಲಿಂ ಧರ್ಮ ಗುರು ಎಂದು ಪರಿಚಯಿಸಿಕೊಂಡಿದ್ದಾನೆ.
2025 ರ ಜನವರಿ ತಿಂಗಳ ಕೊನೆಯ ವಾರದಲ್ಲಿ, ಮೊಹಮ್ಮದ್ ರಿಜ್ವಾನ್ ದೂರುದಾರರಿಗೆ ಕರೆ ಮಾಡಿ ತಾನು ಕ್ರಿಪ್ಟೋ ಕರೆನ್ಸಿಯಲ್ಲಿ ವ್ಯವಹಾರ ಮಾಡುವುದಾಗಿ, ಇದರಲ್ಲಿ ದೊಡ್ಡ ಮಟ್ಟದ ಲಾಭ ಗಳಿಸಿರುವುದಾಗಿ ನಂಬಿಸಿದನು. ₹5 ರಿಂದ 6 ಲಕ್ಷ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ಒತ್ತಾಯಿಸಿದಾಗ, ದೂರುದಾರರು ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಆಗ ಮೊಹಮ್ಮದ್ ರಿಜ್ವಾನ್, ತಾನೇ ವ್ಯವಹಾರದ ಬಗ್ಗೆ ತಿಳಿಸಿಕೊಡುವುದಾಗಿ ಮತ್ತು ಒಮ್ಮೆಲೇ ಹಣ ಇಲ್ಲದಿದ್ದರೆ ಹಂತ ಹಂತವಾಗಿ ತನ್ನ ಖಾತೆಗಳಿಗೆ ಜಮಾ ಮಾಡಿದರೆ ಕ್ರಿಪ್ಟೋ ಖರೀದಿಸಿಕೊಡುವುದಾಗಿ ನಂಬಿಸಿದ್ದಾನೆ. ಅವನ ಮಾತನ್ನು ನಂಬಿ ದಿನಾಂಕ 4-2-2025 ರಂದು ₹95,000/- ಸೇರಿದಂತೆ ಅವರು ಹೇಳಿದಾಗೆಲ್ಲಾ ಫೋನ್ ಪೇ ಮೂಲಕ ಲಕ್ಷಾಂತರ ಹಣವನ್ನು ಆರೋಪಿ ಮೊಹಮ್ಮದ್ ರಿಜ್ವಾನ್‌ನ ಖಾತೆಗೆ ಜಮಾ ಮಾಡಿದ್ದಾರೆ.
ಇದರ ಜೊತೆಗೆ, ರಿಜ್ವಾನ್‌ನ ಸೂಚನೆಯ ಮೇರೆಗೆ, ದೂರುದಾರರು ದಿನಾಂಕ 8-2-2025 ರಂದು ರಿಜ್ವಾನ್‌ನ ಪಾಲುದಾರನಾದ ಎರಡನೇ ಆರೋಪಿ ಶಹನವಾಜ್ ಹುಸೇನ್ ಇವರಿಗೆ ₹40,000/- ಹಣವನ್ನು ಸಹ ಪಾವತಿಸಿದ್ದಾರೆ. ಹೀಗೆ ಒಟ್ಟಾರೆಯಾಗಿ ದೂರುದಾರರು ಆರೋಪಿಗಳಿಗೆ ₹5,70,000/- (ಐದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ) ಹಣವನ್ನು ವರ್ಗಾಯಿಸಿದ್ದಾರೆ.
ಹಣ ಪಾವತಿಸಿದ ನಂತರ ದೂರುದಾರರು ಕ್ರಿಪ್ಟೋ ಕರೆನ್ಸಿ ನೀಡುವಂತೆ ಕೇಳಿದಾಗ, ಆರೋಪಿಗಳು ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಷೇರು ಮಾರುಕಟ್ಟೆ ಕುಸಿದಿದೆ ಎಂದು ಸಬೂಬು ನೀಡಿ, 2-3 ತಿಂಗಳುಗಳ ಕಾಲ ಕಾಯುವಂತೆ ತಿಳಿಸಿದ್ದಾರೆ. ಆದರೆ, 2025 ರ ಜೂನ್ ತಿಂಗಳ ಕೊನೆಯ ವಾರದಲ್ಲಿ ಕರೆ ಮಾಡಿ ವಿಚಾರಿಸಿದಾಗ, ಆರೋಪಿಗಳು ತಾವು ಬೇರೆ ಊರಿಗೆ ಹೋಗಿರುವುದಾಗಿ ಹೇಳಿ ದಿನ ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ನನಸಾಗದ ʼಸ್ವಂತ ಮನೆʼ ಕನಸು; ಸಂಗ್ರಹಿಸಿದ ಶುಲ್ಕಕ್ಕೆ ಲೆಕ್ಕ ಕೊಡುವುದೇ ಗೃಹ ಮಂಡಳಿ?
ಅವರು ನಡುವಳಿಕೆ ಯಿಂದ ಅನುಮಾನ ಬಂದು ದಿನಾಂಕ 3-9-2025 ರಂದು ಶಹನವಾಜ್ ಹುಸೇನ್‌ಗೆ ಕರೆ ಮಾಡಿ ಹಣ ಹಿಂತಿರುಗಿಸುವಂತೆ ಕೇಳಿದಾಗ, ಆತ “ಇನ್ನು ಮುಂದೆ ನನಗೆ ಫೋನ್ ಮಾಡಬೇಡ, ನಾನು ಹಣ ವಾಪಸ್ ಕೊಡುವುದಿಲ್ಲ” ಎಂದು ನಿರಾಕರಿಸಿದ್ದಾನೆ. ಮರುದಿನ, ದಿನಾಂಕ 4-9-2025 ರಂದು ಮೊಹಮ್ಮದ್ ರಿಜ್ವಾನ್‌ಗೆ ಕರೆ ಮಾಡಿ ಹಣ ಕೇಳಿದಾಗ, ಆತ “ನಾನು ಹಣವನ್ನು ಕೊಡುವುದಿಲ್ಲ, ನಮಗೆ ಮತ್ತೆ ಫೋನ್ ಮಾಡಿದರೆ ನಿನಗೆ ಏನು ಮಾಡಬೇಕು ಅಂತಾ ಗೊತ್ತಿದೆ, ಇಲ್ಲಿಂದಲೇ ಜನರಿಗೆ ಕಳುಹಿಸಿ ನಿನ್ನನ್ನು ಮುಗಿಸಿ ಬಿಡುತ್ತೆವೆ” ಎಂದು ಜೀವ ಬೆದರಿಕೆ ಹಾಕಿದ್ದಾರೆ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕ್ರಿಪ್ಟೋ ಕರೆನ್ಸಿ ಕೊಡಿಸುವ ನೆಪದಲ್ಲಿ ವಂಚನೆ ನಡೆಸಿ, ಜೀವಬೆದರಿಕೆ ಹಾಕಿರುವ ಕಾರಣಕ್ಕೆ ಅತೀಖ ಅಹ್ಮದ್ ಅವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





