ಶಿರಸಿ: ತಾಲೂಕಿನ ಹುಲೇಕಲ್‌ನ (ಗಾಂಧಿನಗರ) ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ ಅವ್ಯವಸ್ಥೆಯ ಕುರಿತು ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಶಿರಸಿ ಉಪ ವಿಭಾಗಾಧಿಕಾರಿಗಳಾದ ಕುಮಾರಿ ಕಾವ್ಯರಾಣಿ ಕೆ.ವಿ ಅವರು ಶುಕ್ರವಾರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಸತಿ ಶಾಲೆಯಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಬಂದಿದ್ದ ದೂರಿನ ಗಂಭೀರತೆಯನ್ನು ಅರಿತ ಎಸಿ ಅವರು, ಪ್ರತಿಯೊಂದು ವಿಭಾಗಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಕುಂದುಕೊರತೆಗಳನ್ನು ಆಲಿಸಿದರು. ಮಕ್ಕಳ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಕಠಿಣವಾಗಿ ಎಚ್ಚರಿಸಿದರು.
ಅಧಿಕಾರಿಗಳ ದಂಡು: ಪರಿಶೀಲನೆಯ ಸಂದರ್ಭದಲ್ಲಿ ಎಸಿ ಅವರೊಂದಿಗೆ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾರತಿ ಹಿರೆಮಠ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ನಗರಸಭೆ ಪೌರಾಯುಕ್ತ ಪ್ರಕಾಶ ಎಂ ಚನ್ನಪ್ಪನವರ ಅವರಿಗೆ ವಸತಿ ಶಾಲೆಯ ಪರಿಸರದ ಸ್ವಚ್ಛತೆ ಕಾಪಾಡುವ ಬಗ್ಗೆ ಸೂಚನೆ ನೀಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ (ಗ್ರೇಡ್-2) ಬಸವರಾಜ ಐ ಬಂಡೇರ್ ಅವರಿಗೆ ವಸತಿ ಶಾಲೆಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಾವ್ಯರಾಣಿ ಅವರು ತಾಕೀತು ಮಾಡಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅಂಗನವಾಡಿಗಳಿಗೆ ಹೈಟೆಕ್ ಸ್ಪರ್ಶ: ಖಾಸಗಿ ಶಾಲೆಗಳ ಮಾದರಿಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ
ವಸತಿ ಶಾಲೆಯ ಪ್ರಾಂಶುಪಾಲರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಾಧ್ಯಮಗಳ ವರದಿಯ ಬೆನ್ನಲ್ಲೇ ಎಸಿ ಅವರು ತೋರಿದ ಈ ತ್ವರಿತ ಪ್ರತಿಕ್ರಿಯೆ ಮತ್ತು ಅಧಿಕಾರಿಗಳ ತಂಡದೊಂದಿಗೆ ನಡೆಸಿದ ಸಮೀಕ್ಷೆಯು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.





