ಶಿರಸಿ: ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ (ಕೆ.ಎಸ್.ಪಿ.ಎಲ್) ಕ್ರಿಕೆಟ್ ಟೂರ್ನಿಯಲ್ಲಿ ಶಿರಸಿಯ ಯುವ ಪ್ರತಿಭೆ ಅಬ್ದುಲ್ ವಾಜಿದ್ ಶೇಖ್ ಅತ್ಯುತ್ತಮ ಪ್ರದರ್ಶನದೊಂದಿಗೆ ‘ಬೆಸ್ಟ್ ಬ್ಯಾಟ್ಸ್‌ಮನ್’ ಪ್ರಶಸ್ತಿಯನ್ನು ಕೈಸೇರಿಸಿಕೊಂಡಿದ್ದಾರೆ.
ವಾಜಿದ್ ಇದೀಗ **ಇಂಡಿಯನ್ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ (ISPL)**ಗೆ ಆಯ್ಕೆಯಾಗಿದ್ದು, ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಬೆಂಗಳೂರು ಕೀನಿ ಸ್ಟೇಡಿಯಂನಲ್ಲಿ ನವೆಂಬರ್ 1ರಿಂದ ನಡೆದ ಲೀಗ್‌ನಲ್ಲಿ, ಸಿದ್ದಾಪುರದ ಡೊಮಿನಿಕ್ ಫರ್ನಾಂಡಿಸ್ ಅವರ ನಾಯಕತ್ವದ ಫಾಲ್ ಉತ್ತರ ಕನ್ನಡ ತಂಡದ ಪರವಾಗಿ ವಾಜಿದ್ ಕಣಕ್ಕಿಳಿದರು. ರಾಜ್ಯದ 32 ಜಿಲ್ಲೆಗಳ ಕಿರಿಯ ಹಾಗೂ ಹಿರಿಯ ಪ್ರತಿಭಾವಂತರ ಮಧ್ಯೆಯಲ್ಲಿ ವಾಜಿದ್ ತೋರಿದ ಆಟ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
5 ಪಂದ್ಯಗಳಲ್ಲಿ 158 ರನ್ – 13 ಸಿಕ್ಸರ್‌ಗಳು ಉತ್ತರ ಕನ್ನಡ ತಂಡದ ಆರಂಭಿಕ ಆಟಗಾರನಾದ ವಾಜಿದ್, ಐದು ಪಂದ್ಯಗಳಲ್ಲಿ ಒಟ್ಟು 158 ರನ್ ಗಳಿಸಿದ್ದು, 13 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಬೌಲರ್‌ಗಳ ಬೆವರಿಳಿಸಿದರು. ಅವರ ಆಕ್ರಮಣಕಾರಿ ಪ್ರದರ್ಶನದ ನೆರವಿನಿಂದ ತಂಡವು ಕ್ವಾರ್ಟರ್ ಫೈನಲ್ ಹಂತ ತಲುಪಿತು.
ಈ ಸುದ್ದಿ ಓದಿದ್ದೀರಾ? ಶಿರಸಿ | ನಕಲಿ ಜಾತಿ ಪ್ರಮಾಣ ಪತ್ರದಿಂದ ನೌಕರಿ ಪಡೆದವರು ಸತ್ಯ ಬಹಿರಂಗಪಡಿಸಬೇಕು: ಭೀಮ ಘರ್ಜನೆ ಆಗ್ರಹ
ಕೊಹ್ಲಿಯಿಂದ ಸ್ಫೂರ್ತಿ ಶಿರಸಿಯ ಆರೆಕೊಪ್ಪದ ಸರಳ ಕುಟುಂಬದಿಂದ ಬಂದಿರುವ ವಾಜಿದ್, ಬಾಲ್ಯದಲ್ಲೇ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟವರು. ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯವರ ಆಟದಿಂದ ಸ್ಫೂರ್ತಿ ಪಡೆದಿರುವ ವಾಜಿದ್, ಟೆನ್ನಿಸ್ ಬಾಲ್ ಕ್ರಿಕೆಟ್ ವಲಯದಲ್ಲಿ ಈಗಾಗಲೇ ಶ್ರೇಷ್ಟ ಬ್ಯಾಟ್ಸ್‌ಮನ್ ಎನ್ನಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಐಎಸ್‌ಪಿಎಲ್ ಸ್ಪರ್ಧೆಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಉತ್ತರ ಕನ್ನಡ ಜಿಲ್ಲೆಯ ಆಟಗಾರ ಎಂಬ ಕೀರ್ತಿಗೆ ವಾಜಿದ್ ಪಾತ್ರರಾಗಿದ್ದು, ಮಂಗಳವಾರದಿಂದ ಆರಂಭವಾಗಿರುವ ಟೂರ್ನಿಯಲ್ಲಿ ವಾಜಿದ್ ರಾಜ್ಯ ತಂಡದ ಪರ ಬ್ಯಾಟ್ ಬೀಸಲಿದ್ದಾರೆ.





