ಶಿರಸಿ: ಕಳೆದ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಗರದಲ್ಲಿ ಸಂಚಲನ ಮೂಡಿಸಿದ್ದ ಬಿಜೆಪಿ ಮುಖಂಡನ ಮೇಲಿನ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿರಸಿಯ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಒಟ್ಟು 23 ಆರೋಪಿಗಳ ಪೈಕಿ 16 ಮಂದಿಯನ್ನು ಆರೋಪಮುಕ್ತಗೊಳಿಸಿ (ಖುಲಾಸೆ) ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ: 2019ರ ಏಪ್ರಿಲ್ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದ ಸಮಯದಲ್ಲಿ ಶಿರಸಿಯ ಬಿಜೆಪಿ ಮುಖಂಡರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಒಟ್ಟು 23 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು (ಚಾರ್ಜ್ ಶೀಟ್) ಸಲ್ಲಿಸಿದ್ದರು.
ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಶಿರಸಿಯ ಒಂದನೇ ಹೆಚ್ಚುವರಿ ನ್ಯಾಯಾಲಯವು, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು. ವಿಚಾರಣೆಯ ಅಂತ್ಯದಲ್ಲಿ 23 ಆರೋಪಿಗಳ ಪೈಕಿ 16 ಮಂದಿಯ ಮೇಲಿನ ಆರೋಪಗಳು ಸಾಬೀತಾಗದ ಹಿನ್ನೆಲೆಯಲ್ಲಿ, ಅವರನ್ನು ದೋಷಮುಕ್ತಗೊಳಿಸಿ ಗೌರವಪೂರ್ವಕವಾಗಿ ಬಿಡುಗಡೆ ಮಾಡಿದೆ. ಉಳಿದ ಆರೋಪಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ತೀರ್ಪು ಹೊರಬಿದ್ದಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಕೊಲೆ ಯತ್ನ ಹಾಗೂ ಕೊಲೆ ಪ್ರಕರಣ: ಆರು ಆರೋಪಿಗಳಿಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
ಖುಲಾಸೆಗೊಂಡ ಆರೋಪಿಗಳ ಪರವಾಗಿ ಮಂಗಳೂರಿನ ಪ್ರಖ್ಯಾತ ‘ಲೆಕ್ಸ್ ಜ್ಯೂರಿಸ್ ಲಾ ಚೇಂಬರ್’ ನ ವಕೀಲರಾದ ಆಸಿಫ್ ಬೈಕಾಡಿ, ಒಮರ್ ಫಾರೂಕ್ ಮುಲ್ಕಿ ಹಾಗೂ ಇಜಾಜ್ ಅಹಮದ್ ಉಳ್ಳಾಲ ಅವರು ನ್ಯಾಯಾಲಯದಲ್ಲಿ ಪ್ರಬಲವಾಗಿ ವಾದ ಮಂಡಿಸಿದ್ದರು. ಸಾಕ್ಷ್ಯಗಳ ಕೊರತೆ ಮತ್ತು ತಾಂತ್ರಿಕ ಅಂಶಗಳನ್ನು ಎತ್ತಿ ತೋರಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.





