ಶಿರಸಿ: ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲನ್ನು ಕೇಂದ್ರ ಸರ್ಕಾರದಿಂದ ಕೊಡಿಸುವಲ್ಲಿ ವಿಫಲವಾಗಿರುವ ವಿರೋಧ ಪಕ್ಷದ ನಾಯಕರು, ಕೇವಲ ‘ಚೊಂಬು’ ಪ್ರದರ್ಶಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಭೀಮಣ್ಣ ನಾಯ್ಕ ತೀವ್ರವಾಗಿ ಆಕ್ಷೇಪಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಸುಮಾರು 4 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಹಣವನ್ನು ಪಾವತಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ನೀಡದೆ ವಂಚಿಸುತ್ತಿದೆ. ಅನೇಕ ಜನಪದ ಯೋಜನೆಗಳಿಗೂ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು.
ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಭದ್ರತೆ ನೀಡಲು ನರೇಗಾ ಯೋಜನೆ ಜಾರಿಗೆ ತಂದಿತ್ತು. ಆದರೆ ಪ್ರಸ್ತುತ ಕೇಂದ್ರ ಸರ್ಕಾರ ಯೋಜನೆಯ ಹೆಸರನ್ನು ಬದಲಾಯಿಸಿ, ಅನುದಾನ ಕಡಿತಗೊಳಿಸುವ ಮೂಲಕ ಬಡವರ ಹೊಟ್ಟೆಗೆ ಹೊಡೆಯುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಅತ್ಯಂತ ಅದ್ಭುತವಾಗಿದ್ದು, ಸಮಾಜದ ಎಲ್ಲಾ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ದೂರದೃಷ್ಟಿ ಹೊಂದಿದೆ. ಇಂತಹ ಜನಪರ ಬಜೆಟ್ ಅನ್ನು ವಿರೋಧಿಸುವ ಬಿಜೆಪಿ ನಾಯಕರು, ಚೊಂಬು ಹಿಡಿದು ಪ್ರತಿಭಟಿಸುವ ಬದಲು ದೊಡ್ಡ ಹಂಡೆ ಹಿಡಿದು ಕೇಂದ್ರದಿಂದ ರಾಜ್ಯದ ಪಾಲನ್ನು ತರಲು ಪ್ರಯತ್ನಿಸಲಿ ಎಂದು ಲೇವಡಿ ಮಾಡಿದರು.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಕಾಂಗ್ರೆಸ್‌ನಲ್ಲಿ ‘ಪತ್ರ ಸಮರ’: ಸಚಿವ ಮಂಕಾಳ ವೈದ್ಯಗೆ ಶಾಸಕ ಸತೀಶ್ ಸೈಲ್ ತಿರುಗೇಟು!
ರಾಜ್ಯ ಸರ್ಕಾರ ಸಾಲ ಮಾಡುತ್ತಿದೆ ಎಂಬ ವಿರೋಧ ಪಕ್ಷದ ಆರೋಪಕ್ಕೆ ತಿರುಗೇಟು ನೀಡಿದ ಅವರು, “ಮುಖ್ಯಮಂತ್ರಿಗಳು ಸಾಲದ ಹಣವನ್ನು ಮನೆಗೆ ಕೊಂಡೊಯ್ದಿಲ್ಲ. ರಾಜ್ಯದ ಅಭಿವೃದ್ಧಿಗಾಗಿ, ಕೃಷಿ ಮತ್ತು ಶಿಕ್ಷಣದ ಏಳಿಗೆಗಾಗಿ ವಿನಿಯೋಗಿಸಿದ್ದಾರೆ.
ಆರ್ಥಿಕ ಮುಗ್ಗಟ್ಟು ಬಂದಾಗ ಸಾಲ ಮಾಡುವುದು ಅನಿವಾರ್ಯ. ರಾಜ್ಯವನ್ನು ಟೀಕಿಸುವ ಮೊದಲು ಕೇಂದ್ರ ಸರ್ಕಾರ ಎಷ್ಟು ಸಾಲ ಮಾಡಿದೆ ಎಂಬುದನ್ನು ಬಿಜೆಪಿ ನಾಯಕರು ಗಮನಿಸಲಿ” ಎಂದು ತಿಳಿಸಿದರು.
ಈ ಬಜೆಟ್ ಹಳ್ಳಿ ಮತ್ತು ನಗರಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದ್ದು, ಪ್ರತಿಯೊಂದು ವರ್ಗದ ಏಳಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.





