ಶಿರಸಿ: ವಿಶ್ವವಿದ್ಯಾಲಯಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಓಬಿಸಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಜಾತಿ ತಾರತಮ್ಯ ತಡೆಗಟ್ಟಲು ಹಾಗೂ ಸಮಾನತೆಯನ್ನು ಉತ್ತೇಜಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ರೂಪಿಸಿರುವ 2026ರ ಹೊಸ ನಿಯಮಾವಳಿಗಳನ್ನು ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ.) ಉತ್ತರ ಕನ್ನಡ ಜಿಲ್ಲಾ ಶಾಖೆಯ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಶಿರಸಿ ಉಪವಿಭಾಗಾಧಿಕಾರಿ ಚಂದ್ರಶೇಖರ ಅವರು ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯದ ಸುಳಿಯಲ್ಲಿ ಸಿಲುಕಿ ರೋಹಿತ್ ವೇಮುಲ, ಪಾಯಲ್ ತಡ್ವಿ ಮತ್ತು ದರ್ಶನ್ ಸೋಲಂಕಿಯಂತಹ ಪ್ರತಿಭಾವಂತ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದನ್ನು ಸಮಿತಿ ತೀವ್ರವಾಗಿ ಖಂಡಿಸಿದೆ.
2014 ರಿಂದ 2021ರ ಅವಧಿಯಲ್ಲಿ ಕೇಂದ್ರ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಸರ್ಕಾರದ ಅಧಿಕೃತ ದಾಖಲೆಗಳೇ ಹೇಳುತ್ತಿವೆ. ಇದು ‘ಸಾಂಸ್ಥಿಕ ಹತ್ಯೆ’ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
2012ರ ಯುಜಿಸಿ ಕರಡು ನಿಯಮಗಳಲ್ಲಿ ಜಾತಿ ದೌರ್ಜನ್ಯ ತಡೆಯಲು ಕಠಿಣ ಕ್ರಮಗಳಿದ್ದವು. ಆದರೆ ಪ್ರಸ್ತುತ 2026ರ ನಿಯಮಾವಳಿಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆತಂಕಕಾರಿ ವಿಷಯವಾಗಿದೆ.
ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಮಿತಿಯ ಪ್ರಮುಖ ಬೇಡಿಕೆಗಳು: UGC ತಂದಿರುವ 2026ರ ಸಮಾನತೆ ಉತ್ತೇಜಿಸುವ ನಿಯಮಾವಳಿಗಳ ಮೇಲಿನ ಸುಪ್ರೀಂ ಕೋರ್ಟ್ ತಡೆಯಾಜ್ಞೆಯನ್ನು ಕೂಡಲೇ ತೆರವುಗೊಳಿಸಬೇಕು, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾದ ಮತ್ತು ಕಠಿಣವಾದ ನಿಯಮಾವಳಿಗಳನ್ನು ಯುಜಿಸಿ ಹೊರಡಿಸಬೇಕು.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಹಸಿರು ಜಿಲ್ಲೆಯಲ್ಲಿ ಅನ್ನದಾತನ ಅಳಲು; ರೈತರ ಸರಣಿ ಆತ್ಮಹತ್ಯೆ ಕೇಳುವುದೇನು?
ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಜಾತಿ ಮತ್ತು ಧರ್ಮ ಆಧಾರಿತ ಕಿರುಕುಳಗಳನ್ನು ತಡೆಯಲು ಸರ್ಕಾರ ಬದ್ಧತೆ ತೋರಬೇಕು, ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ‘ರೋಹಿತ್ ವೇಮುಲ ಕಾಯ್ದೆ’ಯನ್ನು ಕೂಡಲೇ ಜಾರಿಗೆ ತರಬೇಕು. ಎಂದು ಸಮಿತಿಯು ತನ್ನ ಬೇಡಿಕೆಯನ್ನು ಸಲ್ಲಿಸಿದೆ.
ಮನವಿ ನೀಡುವ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಶಿವಾಜಿ ಬನವಾಸಿ, ಬಸವರಾಜ ಕೊಂಡ್ಲೇರ, ಚಂದ್ರಶೇಖರ ಹೊಸ ಕೊಪ್ಪ, ಮಂಜುನಾಥ ಚಲವಾದಿ. ದೇವರಾಜ ಚಲವಾದಿ, ರಮೇಶ್ ಇಸಳೂರು, ಮಂಜು ಕಾಳಂಗಿ, ಪರಶುರಾಮ ಸಿದ್ದಿ, ಸೋಮಶೇಖರ ಹಾಗೂ ಮುಂತಾದವರು ಉಪಸ್ಥಿತರಿದ್ದರು.





