ದಕ್ಷಿಣ ಭಾರತದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾ ಜಾತ್ರೆಗೆ ಹರಿದುಬರುತ್ತಿರುವ ಜನಸಾಗರ ಒಂದು ಕಡೆ ಆಗಿದ್ದರೆ, ಅಷ್ಟೇ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ನಗರಸಭೆಗೆ ದೊಡ್ಡ ಸವಾಲಾಗಿತ್ತು.
ಆದರೆ ಈ ಸವಾಲನ್ನು ಮೆಟ್ಟಿ ನಿಂತಿರುವ ಶಿರಸಿ ನಗರಸಭೆಯ ಪೌರಕಾರ್ಮಿಕರು, ಹಗಲಿನಲ್ಲಿ ರಾಶಿಯಾಗುವ ಕಸವನ್ನು ಬೆಳಗ್ಗಾಗುವಷ್ಟರಲ್ಲಿ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಒಂಬತ್ತು ದಿನಗಳ ಕಾಲ ನಡೆಯುವ ಈ ವೈಭವದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿದಿನ ಟನ್‌ಗಟ್ಟಲೆ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳು ಸಂಗ್ರಹವಾಗುತ್ತಿವೆ. ಸಾಮಾನ್ಯವಾಗಿ ಇಂತಹ ಬೃಹತ್ ಕಾರ್ಯಕ್ರಮಗಳಲ್ಲಿ ಜಾತ್ರೆ ಮುಗಿದ ಬಳಿಕವೇ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ವಾಡಿಕೆ.
ಆದರೆ ರಾಷ್ಟ್ರಮಟ್ಟದಲ್ಲಿ ಸ್ವಚ್ಛತೆಗೆ ಹೆಸರಾಗಿರುವ ಶಿರಸಿ ನಗರಸಭೆ, ಜಾತ್ರೆಯ ಪ್ರತಿದಿನವೂ ದೈನಂದಿನ ನೈರ್ಮಲ್ಯಕ್ಕೆ ಆದ್ಯತೆ ನೀಡುವ ಮೂಲಕ ಮಾದರಿಯಾಗಿದೆ.
ಮಧ್ಯರಾತ್ರಿ ಒಂದು ಗಂಟೆ ಹೊತ್ತಿಗೆ ಪೌರಕಾರ್ಮಿಕರ ತಂಡ ಕಾರ್ಯಪ್ರವೃತ್ತವಾಗುತ್ತದೆ. ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಕೇವಲ ಒಂದು ಗಂಟೆಯೊಳಗೆ ಗುಡಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಬಳಿಕ ನಸುಕಿನ ವೇಳೆಗೆ ರಸ್ತೆಗಳಿಗೆ ನೀರು ಸಿಂಪಡಿಸಿ, ಭಕ್ತರ ದರ್ಶನಕ್ಕೆ ಸುಗಮ ವಾತಾವರಣ ಸೃಷ್ಟಿಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ | ಕ್ಷುಲ್ಲಕ ಕಾರಣಕ್ಕೆ ಪರಿಶಿಷ್ಟ ಜಾತಿ ವ್ಯಕ್ತಿ ಮೇಲೆ ಹಲ್ಲೆ; ನಾಲ್ವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು
ವಿಶೇಷವಾಗಿ ಚಳಿಯನ್ನು ಲೆಕ್ಕಿಸದೆ ಕಡುರಾತ್ರಿಯಲ್ಲೂ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳ ಕಾರ್ಯದಕ್ಷತೆ ಗಮನ ಸೆಳೆಯುತ್ತಿದೆ. ಜಾತ್ರೆಯ ಆರಂಭದ ದಿನಗಳಲ್ಲಿ ಪ್ರತಿದಿನ ಸುಮಾರು 30 ಟನ್ ಕಸ ಸಂಗ್ರಹವಾಗುತ್ತಿತ್ತು. ವಾರಾಂತ್ಯದ ರಜೆಗಳ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಾದಂತೆ, ಕಸದ ಪ್ರಮಾಣವೂ ದಿನಕ್ಕೆ ಸುಮಾರು 40 ಟನ್‌ಗೆ ಏರಿಕೆಯಾಗಿದೆ ಎಂದು ನಗರಸಭೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಗ್ರಹವಾದ ತ್ಯಾಜ್ಯವನ್ನು ಜೆಸಿಬಿ ಹಾಗೂ ಲಾರಿಗಳ ಮೂಲಕ ತಕ್ಷಣವೇ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತಿದೆ. ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್ ಅವರ ನೇತೃತ್ವದಲ್ಲಿ ಅಧಿಕಾರಿಗಳಾದ ಶಿವರಾಜ್ ಮತ್ತು ಮಧುಕೇಶ್ವರ ಇಡೀ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಅಧಿಕಾರಿಗಳ ಮಾರ್ಗದರ್ಶನ ಮತ್ತು ಪೌರಕಾರ್ಮಿಕರ ಅವಿರತ ಶ್ರಮದ ಫಲವಾಗಿ, ಲಕ್ಷಾಂತರ ಜನ ಸೇರುವ ಜಾತ್ರೆಯ ಸಂದರ್ಭದಲ್ಲಿಯೂ ಶಿರಸಿ ನಗರ ತನ್ನ ಸ್ವಚ್ಛತೆ ಮತ್ತು ಅಂದವನ್ನು ಕಾಪಾಡಿಕೊಳ್ಳುತ್ತಿದೆ.





