ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೆನರಾ ಡಿಸಿಸಿ ಬ್ಯಾಂಕ್ (ಕೆಡಿಸಿಸಿ) ನಿರ್ದೇಶಕ ಸ್ಥಾನಗಳಿಗಾಗಿ ನಡೆಯಲಿರುವ ಚುನಾವಣೆ ಪ್ರಕ್ರಿಯೆ ಸೋಮವಾರದಿಂದ ಆರಂಭಗೊಂಡಿದೆ. ಅಕ್ಟೋಬರ್ 25ರಂದು ನಡೆಯಲಿರುವ ಈ ಚುನಾವಣೆಗೆ ಮೊದಲ ದಿನವೇ ವಿವಿಧ ಕ್ಷೇತ್ರಗಳಿಂದ 16 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ. ಒಟ್ಟು 16 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಅದರಲ್ಲಿ 11 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಯಾಗಿದೆ.
ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 ಅಂತಿಮ ದಿನಾಂಕವಾಗಿದ್ದು, ಸಮಯದ ಅಭಾವದ ಹಿನ್ನೆಲೆಯಲ್ಲಿ ಸಚಿವ ಮಂಕಾಳ ವೈದ್ಯ ಅವರ ಬಣದಿಂದ ಇಂದು ಆರು ಮಂದಿ ನಾಮಪತ್ರ ಸಲ್ಲಿಸಿದರು. ಸಚಿವ ಮಂಕಾಳ ವೈದ್ಯ, ಉಪಾಧ್ಯಕ್ಷ ಮೋಹನದಾಸ ನಾಯ್ಕ, ಮಾಜಿ ನಿರ್ದೇಶಕರಾದ ಸುರೇಶ ಚಂದ್ರ ಹೆಗಡೆ, ವಿಶ್ವನಾಥ ಭಟ್ಟ, ಟಿಎಸ್ಸೆಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗೂ ನಿರಂಜನ ಭಟ್ಟ (ಸಿದ್ದಾಪುರ) ಅವರುಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಇದೇ ವೇಳೆ, ಶಾಸಕ ಶಿವರಾಮ ಹೆಬ್ಬಾರ ಅವರ ಬಣದಿಂದಲೂ ನಾಮಪತ್ರ ಸಲ್ಲಿಕೆ ನಡೆಯುವ ಸಾಧ್ಯತೆಗಳಿದ್ದು, ಹೆಬ್ಬಾರ ಅವರು ಅಕ್ಟೋಬರ್ 15ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಚುನಾವಣಾಧಿಕಾರಿಯಾಗಿ ಸಹಾಯಕ ಆಯುಕ್ತ ಕಾವ್ಯರಾಣಿ ಅವರು ಕಾರ್ಯನಿರ್ವಹಿಸಲಿದ್ದು, ಕೆಡಿಸಿಸಿ ಬ್ಯಾಂಕ್ ಕಚೇರಿಯಲ್ಲೇ ಚುನಾವಣಾ ಕಚೇರಿ ಸ್ಥಾಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಅಂಕೋಲಾ | ಅಡುಗೆ ಎಣ್ಣೆ ಸಾಗಿಸುತ್ತಿದ್ದ ಲಾರಿ ಪಲ್ಟಿ; ನೂರಾರು ಲೀಟರ್ ಎಣ್ಣೆ ರಸ್ತೆ ಪಾಲು
ಅಂತಿಮ ಮತದಾರರ ಪಟ್ಟಿ ಪ್ರಕಟ – 633 ಮಂದಿ ಅರ್ಹರ ಮತದಾರರ ಪಟ್ಟಿ ಪ್ರಕಟ : ಈ ನಡುವೆ, ಕೆನರಾ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಶುಕ್ರವಾರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಮೊದಲು ಪ್ರಕಟಿಸಲಾಗಿದ್ದ 763 ಕರಡು ಮತದಾರರ ಪಟ್ಟಿಗೆ ಹಲವು ಆಕ್ಷೇಪಣೆಗಳು ಬಂದ ಹಿನ್ನೆಲೆಯಲ್ಲಿ, ಅಂತಿಮ ಪರಿಶೀಲನೆ ನಡೆಸಿದ ಬಳಿಕ 633 ಮತದಾರರನ್ನು ಅರ್ಹರೆಂದು ಘೋಷಿಸಲಾಗಿದೆ.
ಒಟ್ಟು 130 ಮತದಾರರನ್ನು ಅನರ್ಹರೆಂದು ಪರಿಗಣಿಸಲಾಗಿದೆ. ಇವರಲ್ಲಿ —ಕಾರವಾರದ 4, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲೂಕುಗಳಿಂದ ತಲಾ 1, ಹೊನ್ನಾವರ ಮತ್ತು ಜೊಯಿಡಾದಿಂದ ತಲಾ 2, ಕನ್‌ಜ್ಯೂಮರ್ ಅಂಡ್ ಪ್ರೊಸೆಸಿಂಗ್ ವಿಭಾಗದಿಂದ 16, ಇಂಡಸ್ಟ್ರಿಯಲ್ ವಿಭಾಗದಿಂದ 7, ಕ್ರೆಡಿಟ್ ಬ್ಯಾಂಕ್ ಹಾಗೂ ಅರ್ಬನ್ ಬ್ಯಾಂಕ್ ವಿಭಾಗಗಳಿಂದ 62, ಇತರೆ ವಿಭಾಗಗಳಿಂದ 33 ಮತದಾರರನ್ನು ಅನರ್ಹರನ್ನಾಗಿ ಗುರುತಿಸಲಾಗಿದೆ.





