ಶಿರಸಿ: ಇಡೀ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಕೇಂದ್ರ (ಕೆಡಿಸಿಸಿ) ಬ್ಯಾಂಕ್‌ನ ನಿರ್ದೇಶಕ ಸ್ಥಾನದ ಚುನಾವಣಾ ಫಲಿತಾಂಶ ಅಂತಿಮವಾಗಿ ಹೊರಬಿದ್ದಿದೆ.
ಧಾರವಾಡ ಹೈಕೋರ್ಟ್ ನಿರ್ದೇಶನದಂತೆ ಸೋಮವಾರ ನಡೆದ ಸಿದ್ದಾಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್) ಕ್ಷೇತ್ರದ ಮತ ಎಣಿಕೆಯಲ್ಲಿ ಹಾಲಿ ನಿರ್ದೇಶಕ ರಾಘವೇಂದ್ರ ಪ್ರಭಾಕರ ಶಾಸ್ತ್ರಿ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.
ಈ ಗೆಲುವಿನ ಮೂಲಕ ರಾಘವೇಂದ್ರ ಶಾಸ್ತ್ರಿ ಅವರು ಸತತ ಎರಡನೇ ಬಾರಿಗೆ ಬ್ಯಾಂಕ್‌ನ ಆಡಳಿತ ಮಂಡಳಿ ಪ್ರವೇಶಿಸಿದ್ದು, ಬ್ಯಾಂಕ್‌ನ ಹಾಲಿ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ನೇತೃತ್ವದ ಬಣಕ್ಕೆ ಈ ಜಯ ದೊಡ್ಡ ಬಲ ತಂದಿದೆ.

ನಗರದ ಕೆಡಿಸಿಸಿ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಶಂಕರ ಗೌಂಡಿ ಅವರ ಸಮ್ಮುಖದಲ್ಲಿ ಬಿಗಿ ಭದ್ರತೆಯ ನಡುವೆ ಮತ ಎಣಿಕೆ ನಡೆಯಿತು. ಅಂತಿಮವಾಗಿ ರಾಘವೇಂದ್ರ ಶಾಸ್ತ್ರಿ ಅವರು 12 ಮತಗಳನ್ನು ಪಡೆಯುವ ಮೂಲಕ ವಿಜಯಮಾಲೆ ಧರಿಸಿದರು.
ಇವರ ವಿರುದ್ಧ ಸ್ಪರ್ಧಿಸಿದ್ದ ಬಾಲಚಂದ್ರ ಚಂದ್ರಶೇಖರ ಹೆಗಡೆ ಅವರು 9 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು. ವಿಜೇತ ಅಭ್ಯರ್ಥಿಗೆ ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಮಾಣಪತ್ರ ವಿತರಿಸಿದರು. ಬ್ಯಾಂಕ್‌ನ ಒಟ್ಟು 16 ನಿರ್ದೇಶಕ ಸ್ಥಾನಗಳ ಪೈಕಿ ಈವರೆಗೆ 15 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ.
ಸಿದ್ದಾಪುರ ಕ್ಷೇತ್ರದ ಗೆಲುವಿನೊಂದಿಗೆ ಶಿವರಾಮ್ ಹೆಬ್ಬಾರ್ ಬೆಂಬಲಿತ ನಿರ್ದೇಶಕರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ಆಡಳಿತ ಮಂಡಳಿಯಲ್ಲಿ ಅವರ ಪಾರುಪತ್ಯ ಸಾಬೀತಾದಂತಾಗಿದೆ. ಇನ್ನುಳಿದಂತೆ ಮಂಕಾಳು ವೈದ್ಯ ಬೆಂಬಲಿತ ಬಣ 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಜೊಯಿಡಾ | ಹುಡಸಾ ಝರಿಯಲ್ಲಿ ಕಾಡು ಪ್ರಾಣಿ ಶವ ಪತ್ತೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನ ಆಕ್ರೋಶ
ಕಳೆದ ಅಕ್ಟೋಬರ್ 25 ರಂದೇ ಬಹುತೇಕ ಚುನಾವಣೆ ಮುಗಿದಿದ್ದರೂ, ಕಾನೂನು ಹೋರಾಟದ ಹಿನ್ನೆಲೆಯಲ್ಲಿ ಸಿದ್ದಾಪುರ ಕ್ಷೇತ್ರದ ಫಲಿತಾಂಶ ತಡೆಹಿಡಿಯಲಾಗಿತ್ತು. ಇದೀಗ ಆ ಕ್ಷೇತ್ರ ಕ್ಲಿಯರ್ ಆಗಿದ್ದು, ಇನ್ನು ಕೇವಲ ‘ಗ್ರಾಹಕರ ಸಹಕಾರಿ ಸಂಘಗಳ ಮತ್ತು ಸಂಸ್ಕರಣಾ ಸಹಕಾರಿ ಸಂಘಗಳ’ ಕ್ಷೇತ್ರದ ಫಲಿತಾಂಶ ಮಾತ್ರ ಬಾಕಿ ಉಳಿದಿದೆ.
ಹೈಕೋರ್ಟ್‌ನ ಮುಂದಿನ ಆದೇಶದ ನಂತರವಷ್ಟೇ ಈ ಅಂತಿಮ ಕ್ಷೇತ್ರದ ಮತ ಎಣಿಕೆ ನಡೆಯಲಿದ್ದು, ಆ ಬಳಿಕವಷ್ಟೇ ನೂತನ ಆಡಳಿತ ಮಂಡಳಿಯ ಪೂರ್ಣ ಪ್ರಮಾಣದ ಅಧಿಕಾರ ಸ್ವೀಕಾರ ಪ್ರಕ್ರಿಯೆ ನಡೆಯಲಿದೆ.





