ಶಿರಸಿ: ಪ್ರಕೃತಿಯ ಮಡಿಲಲ್ಲಿ ಅಚ್ಚರಿಗಳಿಗೇನೂ ಕೊರತೆಯಿಲ್ಲ. ಈ ಮಾತಿಗೆ ಪೂರಕವೆಂಬಂತೆ, ತಾಲೂಕಿನ ಪಟ್ಟಣ ಹೊಳೆಯಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಅಪರೂಪದ ‘ನೀರು ನಾಯಿ’ (Smooth-coated Otter) ಪತ್ತೆಯಾಗಿದೆ.
ಜಾಗತಿಕವಾಗಿ ವಿನಾಶದ ಅಂಚಿನಲ್ಲಿರುವ ಈ ಜೀವಿ ಪತ್ತೆಯಾಗಿರುವುದು ಪರಿಸರ ಪ್ರೇಮಿಗಳಲ್ಲಿ ಮತ್ತು ಜೀವ ವಿಜ್ಞಾನಿಗಳಲ್ಲಿ ಸಂತಸ ಮೂಡಿಸಿದೆ. ಪರಿಸರ ಅಧ್ಯಯನಕಾರರಾದ ಡಾ. ನರಸಿಂಹ ಹೆಗಡೆ ವಾನಳ್ಳಿ ಅವರ ನೇತೃತ್ವದಲ್ಲಿ ನಡೆದ ‘ಹೊಳೆ ಹರಿವು-ಅರಿವು’ ಕಾಲ್ನಡಿಗೆಯ ಸಂದರ್ಭದಲ್ಲಿ ಈ ಮಹತ್ವದ ಶೋಧ ನಡೆದಿದೆ.
ಪಟ್ಟಣದ ಹೊಳೆಯು ತನ್ನ ನೈಸರ್ಗಿಕ ಹರಿವನ್ನು ಉಳಿಸಿಕೊಂಡಿರುವುದು ಮತ್ತು ಇಲ್ಲಿನ ನೀರು ಕಲುಷಿತಗೊಳ್ಳದಿರುವುದೇ ಈ ಜೀವಿಯ ಅಸ್ತಿತ್ವಕ್ಕೆ ಮೂಲ ಕಾರಣ ಎಂದು ವಿಶ್ಲೇಷಿಸಲಾಗಿದೆ. ಪಟ್ಟಣದ ಹೊಳೆ ಜಲಾನಯನ ಪ್ರದೇಶದ ಒಟ್ಟು 170 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಇಂಗಾಲದ ಶೇಖರಣೆ, ಜಾಗತಿಕ ತಾಪಮಾನ ಏರಿಕೆ ತಡೆಗೆ ಇಲ್ಲಿನ ಕಾಡುಗಳ ಕೊಡುಗೆ ಮತ್ತು ಜೀವವೈವಿಧ್ಯದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲು 50 ಕಿಲೋಮೀಟರ್ ದೂರದ ಕಾಲ್ನಡಿಗೆಯನ್ನು ಆಯೋಜಿಸಲಾಗಿತ್ತು.
ಮೂರು ದಿನಗಳ ಕಾಲ ನಡೆದ ಈ ನಡಿಗೆಯಲ್ಲಿ ದೇವನಳ್ಳಿ, ಬಿಕ್ಕೇಗದ್ದೆ, ಗಣೇಶಪಾಲ್ ಸೇರಿದಂತೆ ಹಲವು ಗ್ರಾಮಗಳಲ್ಲಿ ಸ್ಥಳೀಯರೊಂದಿಗೆ ಸಂವಾದ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ನೀರು ನಾಯಿಗಳ ವಾಸವಿರುವುದು ದೃಢಪಟ್ಟಿದೆ.

ಮಂಜಗುಣಿ ಸಮೀಪದ ಕಣಿವೆ ಕಾಡಿನಿಂದ ಗಣೇಶ್ ಪಾಲ್ಸ್ ವರೆಗಿನ ಹೊಳೆ ಪಾತ್ರದಲ್ಲಿ ಸುಮಾರು 200 ರಿಂದ 250 ನೀರು ನಾಯಿಗಳು ಇರಬಹುದು ಎಂದು ಸ್ಥಳೀಯ ನಿವಾಸಿಗಳಾದ ಕರೆ ಒಕ್ಕಲು, ಮರಾಠಿ ಮತ್ತು ಕುಣಬಿ ಸಮುದಾಯದವರು ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಮಾನವ ಹಸ್ತಕ್ಷೇಪ ಕಡಿಮೆ ಇರುವುದು ಮತ್ತು ದಟ್ಟ ಕಾಡು ಇರುವುದು ಈ ಜೀವಿಗಳಿಗೆ ಸುರಕ್ಷಿತ ತಾಣವಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಕಳಚಿದ ಕಬ್ಬಿನ ಟ್ರೈಲರ್ ಕೊಂಡಿ – ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ದುರಂತ!
ಅಂತರಾಷ್ಟ್ರೀಯ ಸಂರಕ್ಷಣಾ ಒಕ್ಕೂಟ (IUCN) ತನ್ನ ಕೆಂಪು ಪಟ್ಟಿಯಲ್ಲಿ ನೀರು ನಾಯಿಯನ್ನು ‘ವಿನಾಶೋನ್ಮುಖ’ ಜೀವಿಯೆಂದು ಗುರುತಿಸಿದೆ. ಅಣೆಕಟ್ಟುಗಳ ನಿರ್ಮಾಣ, ರಾಸಾಯನಿಕಗಳಿಂದ ನದಿ ನೀರು ಕಲುಷಿತಗೊಳ್ಳುವುದು, ಆವಾಸಸ್ಥಾನಗಳ ನಾಶ ಮತ್ತು ಬೇಟೆಯಾಡುವಿಕೆಯಿಂದಾಗಿ ಇವುಗಳ ಸಂಖ್ಯೆ ಜಾಗತಿಕವಾಗಿ ಕುಸಿಯುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಪಟ್ಟಣ ಹೊಳೆಯಲ್ಲಿ ಇವುಗಳ ಪತ್ತೆಯಾಗಿರುವುದು ಆಶಾದಾಯಕ ಸಂಗತಿಯಾಗಿದ್ದು, ಇಲ್ಲಿ ವೈಜ್ಞಾನಿಕ ಸಂರಕ್ಷಣಾ ಕ್ರಮಗಳ ಅಗತ್ಯವಿದೆ ಎಂದು ಡಾ. ನರಸಿಂಹ ಹೆಗಡೆ ತಿಳಿಸಿದ್ದಾರೆ.
ಶತಮಾನಗಳಿಂದ ಹೊಳೆಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಜನಸಮುದಾಯದ ಬದುಕು ಮತ್ತು ಈ ಜೀವವೈವಿಧ್ಯದ ನಡುವಿನ ಸಂಬಂಧವನ್ನು ದಾಖಲಿಸುವುದು ಈ ಅಧ್ಯಯನದ ಪ್ರಮುಖ ಉದ್ದೇಶವಾಗಿತ್ತು. ಸದ್ಯ ಪತ್ತೆಯಾಗಿರುವ ನೀರು ನಾಯಿಗಳ ಕುರಿತು ಹೆಚ್ಚಿನ ಸಂಶೋಧನೆಗಳು ನಡೆದರೆ, ಈ ಭಾಗವು ಜಾಗತಿಕ ಮಟ್ಟದ ಜೀವವೈವಿಧ್ಯ ನಕ್ಷೆಯಲ್ಲಿ ಪ್ರಮುಖ ಸ್ಥಾನ ಪಡೆಯಲಿದೆ.





