ಶಿರಸಿ: ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಸಹಕಾರಿ (ಕೆಡಿಸಿಸಿ) ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ನಿರೀಕ್ಷೆಯಂತೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರು ಸತತವಾಗಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.
ಇನ್ನು ತೀವ್ರ ಪೈಪೋಟಿ ಏರ್ಪಟ್ಟಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜೊಯಿಡಾದ ಕೃಷ್ಣ ದೇಸಾಯಿ ಅವರು ಆಯ್ಕೆಯಾಗುವ ಮೂಲಕ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಈ ಬಾರಿಯ ಕೆಡಿಸಿಸಿ ಬ್ಯಾಂಕ್ ಚುನಾವಣೆ ಇಬ್ಬರು ಪ್ರಭಾವಿ ನಾಯಕರ ನಡುವಿನ ಪ್ರತಿಷ್ಠೆಯ ಕಣವಾಗಿತ್ತು. ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಬೆಂಬಲಿತ ತಂಡಗಳ ನಡುವೆ ನೇರ ಹಣಾಹಣಿ ನಡೆದಿತ್ತು.

ಒಟ್ಟು 16 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹೆಬ್ಬಾರ್ ತಂಡದ 11 ಅಭ್ಯರ್ಥಿಗಳು ಜಯಭೇರಿ ಬಾರಿಸಿದರೆ, ಸಚಿವರ ತಂಡ ಕೇವಲ 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಮೂಲಕ ಶಿವರಾಮ್ ಹೆಬ್ಬಾರ್ ಮತ್ತೊಮ್ಮೆ ಸಹಕಾರಿ ಕ್ಷೇತ್ರದಲ್ಲಿ ತಮ್ಮ ಪಾರುಪತ್ಯವನ್ನು ಸಾಬೀತುಪಡಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಹೆಬ್ಬಾರ್ ಅವರು ಅವಿರೋಧವಾಗಿ ಆಯ್ಕೆಯಾದರೂ, ಉಪಾಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪೈಪೋಟಿ ಕಂಡುಬಂದಿತು. ಕಾರವಾರದ ಪ್ರಕಾಶ್ ಗುನಗಿ, ಅಂಕೋಲಾದ ಬೀರಣ್ಣ ನಾಯಕ (ಸುಂಕೇರಿ ಬಾಬು) ಹಾಗೂ ಜೊಯಿಡಾದ ಕೃಷ್ಣ ದೇಸಾಯಿ ಅವರು ಉಪಾಧ್ಯಕ್ಷ ಪಟ್ಟಕ್ಕಾಗಿ ಪ್ರಬಲ ಕಸರತ್ತು ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ಮುರುಡೇಶ್ವರ | ಮಹಾಶಿವರಾತ್ರಿ ಜಾಗರಣೆ ಸಂಭ್ರಮ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಚಿವ ಮಂಕಾಳ ವೈದ್ಯ ಭರವಸೆ
ಅಂತಿಮವಾಗಿ ಕೃಷ್ಣ ದೇಸಾಯಿ ಅವರು ಜಯ ಸಾಧಿಸಿ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ಪಾಲಾಗಿವೆ.
ಆಯ್ಕೆಯ ನಂತರ ಮಾತನಾಡಿದ ನೂತನ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ಅವರು, “ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳು ರೈತರ ಪಾಲಿನ ಜೀವನಾಡಿಗಳಾಗಿವೆ. ಮಧ್ಯವರ್ತಿ ಬ್ಯಾಂಕ್ ಸದೃಢವಾಗಿ ಬೆಳೆದರೆ ಮಾತ್ರ ಅದರ ಅಡಿಯಲ್ಲಿ ಬರುವ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಮತ್ತು ರೈತರು ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯ. ಹೀಗಾಗಿ ಆಯ್ಕೆಯಾದ ಎಲ್ಲಾ ನಿರ್ದೇಶಕರು ಪಕ್ಷಭೇದ ಮರೆತು ಬ್ಯಾಂಕಿನ ಅಭಿವೃದ್ಧಿಗಾಗಿ ಶ್ರಮಿಸೋಣ. ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯೋಣ” ಎಂದು ಕರೆ ನೀಡಿದರು.
ನ್ಯಾಯಾಲಯದ ಪ್ರಕ್ರಿಯೆಗಳ ಕಾರಣದಿಂದ ಸುಮಾರು ಮೂರು ತಿಂಗಳು ವಿಳಂಬವಾಗಿದ್ದ ಈ ಚುನಾವಣಾ ಪ್ರಕ್ರಿಯೆ ಅಂತಿಮವಾಗಿ ಸುಸೂತ್ರವಾಗಿ ಮುಕ್ತಾಯಗೊಂಡಿದೆ. ಶಿರಸಿಯ ಸಹಾಯಕ ಆಯುಕ್ತರು ಚುನಾವಣಾಧಿಕಾರಿಯಾಗಿ ಇಡೀ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.





