ಶಿರಸಿ: ವಿವಿಧ ಸರ್ಕಾರಿ ಇಲಾಖೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ಸರ್ಕಾರಿ ಹುದ್ದೆ ಪಡೆದು ನಿಜವಾದ ದಲಿತರ ಹಕ್ಕನ್ನು ಕಸಿದು ಕೊಳ್ಳುತ್ತಿರುವವರ ವಿರುದ್ಧ ಭೀಮ ಘರ್ಜನೆ ಸಂಘಟನೆಯು ಆಕ್ಷೇಪ ವ್ಯಕ್ತಪಡಿಸಿದ್ದು, “ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ನೌಕರಿ ಪಡೆದವರು ತಾವೇ ಮುಂದಕ್ಕೆ ಬಂದು ಸತ್ಯ ಬಹಿರಂಗಪಡಿಸಬೇಕು.
ಇಲ್ಲದಿದ್ದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಭೀಮ ಘರ್ಜನೆ ಸಂಘಟನೆಯ ಅಧ್ಯಕ್ಷ ಅರ್ಜುನ ಮಿಂಟಿ ಅವರು ಎಚ್ಚರಿಸಿದರು. ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆ, ಸಹಾಯಕ ಆಯುಕ್ತರ ಕಚೇರಿ, ತಹಶೀಲ್ದಾರ ಕಚೇರಿ ಮತ್ತು ಲೋಕೋಪಯೋಗಿ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳಲ್ಲಿನ ನೌಕರರು ಸುಳ್ಳು ಪ್ರಮಾಣ ಪತ್ರದ ಆಧಾರದ ಮೇಲೆ ನೌಕರಿ ಸೇರಿರುವ ಕುರಿತು ಮಾಹಿತಿ ಲಭ್ಯವಾಗಿದೆಯೆಂದು ಹೇಳಿದರು. “ಇದು ದಲಿತರ ಅನ್ನಕ್ಕೆ ಕೈ ಹಾಕುವಂತೆಯೇ. ಸಮಾಜಕ್ಕೆ ಅನ್ಯಾಯ ಮಾಡುವ ಈ ರೀತಿಯ ನಡೆ ಸಹಿಸಲಾಗದು” ಎಂದು ಹೇಳಿದರು.
ಇದೇ ವೇಳೆ, ಶಿರಸಿ ನಗರಸಭೆಗಾಗಿ ಸರ್ಕಾರ ಈಗಾಗಲೇ ಮೀಸಲಾತಿ ಪ್ರಕಟಿಸಿರುವ ಸಂದರ್ಭದಲ್ಲೇ, ಅದನ್ನು ಬದಲಾಯಿಸಲು ಕೆಲವು ವಲಯಗಳಿಂದ ಯತ್ನ ನಡೆಯುತ್ತಿದೆ. “ಆಡಳಿತ ಜನಪ್ರತಿನಿಧಿಗಳು ಇಂತಹ ಒತ್ತಡಗಳಿಗೆ ಒಳಗಾಗಬಾರದು. ಪ್ರಕಟಿಸಿರುವ ವಾರ್ಡ್ ವಾರು ಮೀಸಲಾತಿ ತಿದ್ದುಪಡಿ ಮಾಡಬಾರದು ಹಾಗೂ ಪ್ರಕಟಿಸಿರುವ ಮಿಸಲಾತಿಯನ್ನೆ ಮುಂದುವರಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಚಾಲಕರ ಒಕ್ಕೂಟದ ಪದಾಧಿಕಾರಿಗಳಿಗೆ ಸನ್ಮಾನ
ಸಂಘಟನೆಯ ಪ್ರಮುಖರಾದ ರಾಜೇಶ್ ದೇಶಭಾಗ ಮಾತನಾಡಿ, “ಭೀಮ ಘರ್ಜನೆ ಸಂಘಟನೆಯ ಹೋರಾಟದಿಂದ ಕೆಲವು ಪ್ರಮುಖ ಹೆದ್ದಾರಿ ಕಾಮಗಾರಿಗಳು ಸರಿಯಾದ ಗತಿಯಲ್ಲಿ ಸಾಗುತ್ತಿವೆ. ಮುಂದೆ ಬರುವ ಶಿರಸಿ ನಗರಸಭೆ ಚುನಾವಣೆಯಲ್ಲಿ ಭೀಮ ಘರ್ಜನೆ ಸಂಘಟನೆ ವತಿಯಿಂದ 31 ವಾರ್ಡುಗಳಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳನ್ನು ಹಾಕಲಾಗುವುದು” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ನಾಯಕರಾದ ಅಮಿತ್ ಜೋಗಳೆಕರ್, ನವೀನ್ ಕಾನಡೆ, ರಾಜೇಶ್ ಕಲಘಟಗಿ, ಅಕ್ಷಯ ಧೋತ್ರೆ, ಗುರುರಾಜ ಮಿಂಟಿ, ಹರ್ಷ ಗೋವಿ ಉಪಸ್ಥಿತರಿದ್ದರು.





