ಶಿರಸಿ ನಗರದ ದೀನದಯಾಳ್ ಭವನದಲ್ಲಿ ಶುದ್ಧೀಕರಣದ ನೆಪದಲ್ಲಿ ಅಸ್ಪೃಶ್ಯತೆ ಆಚರಿಸಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ, ಈಗ ಸಮಾಜ ಕಲ್ಯಾಣ ಇಲಾಖೆಯು ಅಧಿಕೃತವಾಗಿ ಮಧ್ಯಪ್ರವೇಶಿಸಿದೆ.
ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಿಗೆ (DYSP) ಲಿಖಿತ ಪತ್ರ ಬರೆದಿದ್ದಾರೆ.
ಪ್ರಕರಣದ ಹಿನ್ನೆಲೆ: ಇತ್ತೀಚೆಗೆ ಶಿರಸಿಯಲ್ಲಿ ರಾಜಕೀಯ ಪಕ್ಷವೊಂದರ ಪ್ರತಿಭಟನೆ ನಡೆದ ಬೆನ್ನಲ್ಲೇ, ದೀನದಯಾಳ್ ಭವನವು ಅಪವಿತ್ರಗೊಂಡಿದೆ ಎಂಬ ನೆಪದಲ್ಲಿ ಗೋಮೂತ್ರ ಮತ್ತು ಗೋಮಯದೊಂದಿಗೆ ಭವನವನ್ನು ಸ್ವಚ್ಛಗೊಳಿಸಿ ಶುದ್ಧೀಕರಣ ಮಾಡಲಾಗಿತ್ತು.

ಈ ಕೃತ್ಯವು ಅಸ್ಪೃಶ್ಯತೆಯನ್ನು ಇಂದಿಗೂ ಆಚರಿಸಲಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಭೀಮಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅರ್ಜುನ್ ಮಿಂಟಿ ಅವರು ಜನವರಿ 1, 2026 ರಂದು ಸಮಾಜ ಕಲ್ಯಾಣ ಇಲಾಖೆಗೆ ಮೌಖಿಕವಾಗಿ ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ | ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ವರದಿಯಾದರೂ ಅಲುಗಾಡದ ಆಡಳಿತ: ಅಧಿಕಾರಿಗಳ ‘ಮೌನ’ಕ್ಕೆ ಕಾರಣವೇನು?
ಅರ್ಜುನ್ ಮಿಂಟಿ ಅವರ ದೂರು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಸಮಾಜ ಕಲ್ಯಾಣ ಇಲಾಖೆಯು ಈ ಕ್ರಮ ಕೈಗೊಂಡಿದೆ. “ನಾಗರಿಕ ಹಕ್ಕುಗಳ ಸಂರಕ್ಷಣಾ ಅಧಿನಿಯಮ 1955 ಹಾಗೂ ಸಂವಿಧಾನದ 17ನೇ ಅನುಚ್ಛೇದದ ಮೂಲಕ ಅಸ್ಪೃಶ್ಯತೆಯನ್ನು ಆಚರಿಸುವುದು ನಿಷೇಧಿತವಾಗಿದೆ.
ಈ ಹಿನ್ನೆಲೆಯಲ್ಲಿ ದೀನದಯಾಳ್ ಭವನದಲ್ಲಿ ನಡೆದಿದೆ ಎನ್ನಲಾದ ಘಟನೆಯ ಕುರಿತು ನಿಯಮಾನುಸಾರ ಪರಿಶೀಲನೆ ನಡೆಸಬೇಕು” ಎಂದು ಇಲಾಖೆಯು ಪತ್ರದಲ್ಲಿ ಪೊಲೀಸ್ ಇಲಾಖೆಗೆ ಸೂಚಿಸಿದೆ. ಈಗಾಗಲೇ ಭೀಮಘರ್ಜನೆ ಸಂಘಟನೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಕ್ರಮಕ್ಕೆ ಆಗ್ರಹಿಸಿತ್ತು.
ಈಗ ಸಮಾಜ ಕಲ್ಯಾಣ ಇಲಾಖೆಯೂ ಪತ್ರ ಬರೆದಿರುವುದರಿಂದ ಪ್ರಕರಣವು ಮತ್ತಷ್ಟು ಚುರುಕುಗೊಂಡಿದ್ದು, ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಯಾವ ರೀತಿಯ ಕಾನೂನು ಕ್ರಮ ಜರುಗಲಿದೆ ಎಂಬುದು ಕುತೂಹಲ ಮೂಡಿಸಿದೆ.





