ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಕರೆದು ಎಸ್‌ಐಟಿ ಅಧಿಕಾರಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ಬೆದರಿಕೆ ಹಾಕಿದ್ದಾರೆ ಎಂದು ಸೌಜನ್ಯ ಪರ ಹೋರಾಟಗಾರ ಜಯಂತ್ ಟಿ, ರಾಜ್ಯಪಾಲ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣದ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಇತ್ತೀಚೆಗೆ ಹೈಕೋರ್ಟ್ ತೆರವುಗೊಳಿಸಿದೆ. ಈ ಹಿನ್ನೆಲೆ ಇದೀಗ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ ಜಯಂತ್ ಮತ್ತು ವಿಠಲ್‌ಗೌಡ ಮೊದಲಾದವರ ವಿಚಾರಣೆ ನಡೆಯಲಿದೆ. ಇದೀಗ ವಿಚಾರಣೆ ವೇಳೆ ಹಲ್ಲೆಯ ಆರೋಪವನ್ನು ಜಯಂತ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್
“ಎಸ್ಐಟಿ ಅಧಿಕಾರಿಗಳಾದ ಜಿತೇಂದ್ರ ದಯಾಮ, ಸೈಮನ್, ಮಂಜುನಾಥ್ ಆರ್.ಜೆ., ಮಂಜುನಾಥ ಗೌಡ, ಹಾಗೂ ಗುಣಪಾಲ ಬೆದರಿಕೆ ಹಾಕಿದ್ದಾರೆ. ದೂರುದಾರ ಚಿನ್ನಯ್ಯನ ಮೂಲಕ ಹಲ್ಲೆ ಮಾಡಿಸಿದ್ದಾರೆ. ಇದರಿಂದಾಗಿ ಗಾಯಗೊಂಡ ನಾನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.
“ಇದೇ ರೀತಿ ಚಿನ್ನಯ್ಯನ ಮೇಲೆಯೂ ಹಲ್ಲೆ ನಡೆಸಲಾಗಿದೆ. ಬೆದರಿಕೆ ಹಾಕಿ ಸುಳ್ಳು ಹೇಳಿಕೆ ಪಡೆಯುವ ಯತ್ನ ನಡೆಸಲಾಗಿದೆ. ನಾನೂ ಸುಳ್ಳು ಹೇಳಿಕೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಅದಕ್ಕೆ ಒಪ್ಪದಿದ್ದಾಗ ‘ದೊಡ್ಡವರ ವಿರುದ್ಧ ದೂರು ನೀಡುತ್ತಿಯಾ? ನಿನ್ನನ್ನು ಜೈಲಿಗೆ ಹಾಕದೆ ಬಿಡಲ್ಲ’ ಎಂದು ಹಲ್ಲೆ ನಡೆಸಿದ್ದಾರೆ. ನನ್ನಿಂದ ಹೇಳಿಕೆ ಪಡೆಯದೆ ಅವರೇ ಹೇಳಿಕೆಯನ್ನು ಟೈಪ್ ಮಾಡಿದ್ದಾರೆ” ಎಂದೂ ದೂರಿನಲ್ಲಿ ಹೇಳಿದ್ದಾರೆ.
“ಪ್ರತಿ ದಿನ ಎಸ್‌ಐಟಿ ಕಚೇರಿಗೆ ಕರೆಸಿ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ. ಬೆದರಿಕೆ ಇದ್ದ ಕಾರಣ ಇದೀಗ ದೂರು ನೀಡುತ್ತಿದ್ದೇನೆ. ದೌರ್ಜನ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಜಯಂತ್ ಒತ್ತಾಯಿಸಿದ್ದಾರೆ.





