ಸೈನಿಕರು, ರೈತರು, ಸಂತರು ದೇಶದ ಅಮೂಲ್ಯ ಆಸ್ತಿ. ಕಲ್ಯಾಣ ಕೇವಲ ಭಾರತ ಕಲ್ಯಾಣವಾಗಬಾರದು ಜಗತ್ತಿನ ಮಾನವೀಯತೆಯ ಕಲ್ಯಾಣವಾಗಬೇಕು ಎಂದು ವಿಕಾಸ ಅಕಾಡೆಮಿಯ ಮುಖ್ಯ ಸಂಯೋಜಕ ಬಸವರಾಜ ಪಾಟೀಲ ಸೇಡಂ ಹೇಳಿದರು.
ಬಸವಕಲ್ಯಾಣದ ಹರಳಯ್ಯ ಗವಿಯಲ್ಲಿ ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಲ್ಲಿ ನಡೆಯುತ್ತಿರುವ ʼಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆʼ ಕಾರ್ಯಕ್ರಮದ ಎರಡನೇ ದಿನ ಮಾಚಿದೇವ – ಮಲ್ಲಿಬೊಮ್ಮ ವೀರ ಸೈನಿಕರ ವೇದಿಕೆ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ʼಸೈನಿಕರ, ರೈತರ ಗೌರವ ಹೆಚ್ಚಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ದೇಶದ ನಾಯಕ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ʼಜೈ ಜವಾನ್ ಜೈ ಕಿಸಾನ್ʼ ಎಂಬ ಘೋಷ ವಾಕ್ಯ ನುಡಿದಿದ್ದರು. ಸೈನಿಕರು ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ದೇಶದ ಜನರು ಶಾಂತಿ, ನೆಮ್ಮದಿಯಿಂದ ಬದುಕಲು ಸೈನಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆʼ ಎಂದರು
ಸಾನಿಧ್ಯ ವಹಿಸಿದ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಮಾತನಾಡಿ, ʼಅನ್ಯಾಯ ವಿರುದ್ಧ ಹೋರಾಡಿದ ವೀರಭೂಮಿ ಬಸವಕಲ್ಯಾಣ. ದೇಶಕ್ಕಾಗಿ ನಾವೆಲ್ಲರೂ ಒಂದೇ ಎಂಬ ಭಾವನೆ ಬಂದಾಗ ದೇಶ ಗಟ್ಟಿಗೊಳ್ಳುತ್ತದೆ. ಮಕ್ಕಳಿಗೆ ದೇಶದ ವೀರರ ಚರಿತ್ರೆಯ ಇತಿಹಾಸ ತಿಳಿಸಬೇಕು. ಜಗತ್ತಿನ ರಕ್ಷಣೆಗೆ ಸಜ್ಜಾಗುವಂತೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಲು ತಾಯಂದಿರು ಮುಂದಾಗಬೇಕುʼ ಎಂದರು.

ನಿವೃತ್ತ ಕರ್ನಲ್ ವೆಂಕಟರೆಡ್ಡಿ ಬೆಂಗಳೂರು ಅನುಭಾವ ನೀಡಿ, ʼವಿಶ್ವಕ್ಕೆ ಕಾಯಕದ ಪರಿಕಲ್ಪನೆ ಸಂದೇಶ ನೀಡಿದ ಬಸವಕಲ್ಯಾಣ ನೆಲ ಅತ್ಯಂತ ಪವಿತ್ರವಾದದ್ದು, ಇಂತಹ ನೆಲದಲ್ಲಿ ಸೈನಿಕರ ಸೇವೆಯನ್ನು ಗುರುತಿಸಿ ಗೌರವಿಸಲು ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ. ದೇಶಕ್ಕಾಗಿ ಸೇವೆಗೈಯಲು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಪದವಿಗಿಂತ ಸಂಸ್ಕಾರ ಮುಖ್ಯ, ಇಂದಿನ ದಿನಗಳಲ್ಲಿ ದೇಶದ ರಕ್ಷಣೆಗಾಗಿ ಸೈನಿಕ ಸೇವಾ ವೃತ್ತಿಗೆ ಸೇರಬಹುದಾಗಿದೆʼ ಎಂದರು.
ಇದೇ ಸಂದರ್ಭದಲ್ಲಿ ಸಾಹಿತಿ ಸಂಗಮೇಶ ಜವಾದಿ ಅವರ ವಿರಚಿತ ʼಸೇವೆಯೇ ಶ್ರೇಷ್ಠ ಜೀವನʼ ಎಂಬ ಕೃತಿ ಬಿಡುಗಡೆಗೊಳಿಸಲಾಯಿತು. ನಿವೃತ್ತ ಸೈನಿಕರನ್ನು ಗೌರವಿಸಲಾಯಿತು.
ಕು. ಶೃದ್ಧಾ ಮತ್ತು ಶ್ರೀಕಾಂತ ಸೀತಾರ ದೇಶಭಕ್ತಿ ಗೀತೆ ಗಾಯನ ನಡೆಸಿಕೊಟ್ಟರು. ಜ್ಞಾನ ಭಾರತಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ನಡೆದ ಕಾರ್ಗಿಲ್ ವಿಜಯ ನೃತ್ಯ ರೂಪಕ ಜನಮನ ಸೆಳೆಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ ವಿಶ್ವವಿದ್ಯಾಲಯ : ಸ್ನಾತಕೋತ್ತರ ಪದವಿ ಫಲಿತಾಂಶ ಘೋಷಣೆ
ಸಮಾರಂಭದಲ್ಲಿ ಮಾಜಿ ಸೈನಿಕರ ಸಂಘ ಬಸವಕಲ್ಯಾಣದ ಗೌರವಾಧ್ಯಕ್ಷ ಸೂರ್ಯಕಾಂತ ಮೇತ್ರೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಆಲ್ ಇಂಡಿಯಾ ಮಾಜಿ ಸೈನಿಕರ ಸಂಘದ ಸದಸ್ಯ ಡಾ. ವಿ.ಕೆ.ತೆಲಂಗ, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಕದ್ದೆ, ಮಾಜಿ ಸೈನಿಕರ ಸಂಘದ ತಾಲೂಕ ಅಧ್ಯಕ್ಷ ಬಾಬುರಾವ ಗೋರ್ಟೆ ಹಾಗೂ ಮಾಜಿ ಸೈನಿಕರಾದ ಸಿದ್ರಾಮಪ್ಪಾ ಬೇಲೂರೆ, ಓಂಕಾರ ಬಿರಾದಾರ, ರಾಮಲಿಂಗ ಜೋಕಾರೆ ಸೇರಿದಂತೆ ಇತರೆ ಮಾಜಿ ಸೈನಿಕರು ಉಪಸ್ಥಿತರಿದ್ದರು.ನಿವೃತ್ತ ಪ್ರಾಂಶುಪಾಲ ಸಿದ್ದಣ್ಣಾ ಮರಪಳ್ಳೆ ಸ್ವಾಗತಿಸಿದರು. ಮಲ್ಲಿಕಾರ್ಜುನ, ಸಂಗಮಕರ್ ನಿರೂಪಿಸಿದರು. ವಿದ್ಯಾವತಿ ಸಿದ್ದಣ್ಣಾ ಮರಪಳ್ಳೆ ಭಕ್ತಿ ದಾಸೋಹಗೈದರು.





