ಯುವಜನರ ಹಿತಾಸಕ್ತಿಗಳ ರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಯುವ ಆಯೋಗವನ್ನು ತಕ್ಷಣ ಸ್ಥಾಪಿಸಬೇಕೆಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ಪರವಾಗಿ ಸಾಲಿಡಾರಿಟಿ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಇಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮುಖೇನ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಯುವಜನರು ವಾಸಿಸುತ್ತಿದ್ದು, ಅವರು ಶಿಕ್ಷಣ, ಉದ್ಯೋಗ, ಮಾನಸಿಕ ಆರೋಗ್ಯ, ಸಾಮಾಜಿಕ ಭದ್ರತೆ ಹಾಗೂ ನಾಗರಿಕ ಭಾಗವಹಿಸುವಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ನಿರುದ್ಯೋಗ, ಮಾನಸಿಕ ಒತ್ತಡ, ಮಾದಕ ವ್ಯಸನ, ಸೈಬರ್ ವಂಚನೆ, ಸಾಮಾಜಿಕ ಅಸುರಕ್ಷತೆ ಹಾಗೂ ನಿರ್ಧಾರ ಪ್ರಕ್ರಿಯೆಗಳಲ್ಲಿ ಪ್ರತಿನಿಧಿತ್ವದ ಕೊರತೆ ಮುಂತಾದ ಸಮಸ್ಯೆಗಳು ದಿನೇದಿನೇ ಹೆಚ್ಚುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಗೃಹ ಇಲಾಖೆ ಅಧಿಕೃತ ಅಂಕಿಅಂಶಗಳ ಪ್ರಕಾರ, 2022ರಿಂದ ನವೆಂಬರ್ 2025ರವರೆಗೆ ರಾಜ್ಯದಲ್ಲಿ 9,450 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಇದರ ಬಹುಪಾಲು ಯುವಜನರಿಗೆ ಸಂಬಂಧಿಸಿದೆ. ವಿವಿಧ ಅಧ್ಯಯನಗಳ ಪ್ರಕಾರ ಸುಮಾರು 30 ಶೇಕಡಾ ಯುವಜನರು ಮಾನಸಿಕ ಆರೋಗ್ಯ ಸಮಸ್ಯೆ ಅಥವಾ ದೀರ್ಘಕಾಲದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಅದೇ ರೀತಿ, NSSO ಸಮೀಕ್ಷೆಗಳ ಪ್ರಕಾರ ಸಾಕಷ್ಟು ಯುವಜನರು ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಲ್ಲಿ ತೊಡಗಿಸಿಕೊಳ್ಳದೇ ಇರುವ NEET (Not in Education, Employment or Training) ವರ್ಗಕ್ಕೆ ಸೇರಿದ್ದು, ಇದು ರಾಜ್ಯದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ದೀರ್ಘಕಾಲೀನ ದುಷ್ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
2022ರಲ್ಲಿ ರಾಜ್ಯ ಯುವ ನೀತಿ ಇದ್ದರೂ ಅದರ ಪರಿಣಾಮಕಾರಿ ಅನುಷ್ಠಾನ, ವಿವಿಧ ಇಲಾಖೆಗಳ ಯುವ ಕಾರ್ಯಕ್ರಮಗಳ ಸಮನ್ವಯ, ಯುವಜನರ ಅಹವಾಲುಗಳ ಪರಿಹಾರ ಹಾಗೂ ಸಾಕ್ಷಾಧಾರಿತ ನೀತಿ ಶಿಫಾರಸುಗಳನ್ನು ನೀಡುವ ಕಾನೂನುಬದ್ದ ಸಂಸ್ಥೆಯ ಕೊರತೆಯಿಂದ ಯುವ ಕಲ್ಯಾಣ ಕ್ಷೇತ್ರದಲ್ಲಿ ಗಂಭೀರ ಸಂಸ್ಥಾತ್ಮಕ ಶೂನ್ಯತೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕೇರಳ, ಅಸ್ಸಾಂ, ಮಿಜೋರಾಂ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಯುವ ಆಯೋಗಗಳು ಕಾರ್ಯನಿರ್ವಹಿಸುತ್ತಿದ್ದು, ಯುವ ಕಲ್ಯಾಣ, ಉದ್ಯೋಗ ಮಾರ್ಗದರ್ಶನ, ಮಾನಸಿಕ ಆರೋಗ್ಯ, ಮಾದಕ ವಸ್ತು ತಡೆ ಹಾಗೂ ನಾಯಕತ್ವ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಹೆಚ್ಚಿನ ಯುವಜನಸಂಖ್ಯೆ ಹೊಂದಿರುವ ಕರ್ನಾಟಕದಲ್ಲಿಯೂ ರಾಜ್ಯ ಯುವ ಆಯೋಗ ಸ್ಥಾಪನೆಯ ಅಗತ್ಯ ತೀವ್ರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಾಜ್ಯ ಯುವ ಆಯೋಗವು ಯುವ ನಾಗರಿಕರು ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿ ಪಾರದರ್ಶಕತೆ, ಭಾಗವಹಿಸುವಿಕೆ ಹಾಗೂ ಜವಾಬ್ದಾರಿಯನ್ನು ಖಚಿತಪಡಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಈ ಸಂದರ್ಭದಲ್ಲಿ ಸಾಲಿಡಾರಿಟಿ ರಾಜ್ಯ ಕಾರ್ಯದರ್ಶಿ ಅಫ್ವಾನ್ ಬಿ. ಹೂಡೆ, ಜಿಲ್ಲಾ ಸಮಿತಿ ಸದಸ್ಯರಾದ ಝಕ್ರಿಯಾ ನೇಜಾರು ಹಾಗೂ ಯಾಸೀನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.





