ಶ್ರೀನಿವಾಸಪುರ : ರಾಜ್ಯ ಸರ್ಕಾರ ಮಂಡಿಸಿರುವ 2026–27ನೇ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಶಿಕ್ಷಣ ಹಾಗೂ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿರುವುದು ಶ್ಲಾಘನೀಯ ಎಂದು ಪ್ರಧಾನ ಮಂತ್ರಿಯ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮಿತಿ (DLC) ಸದಸ್ಯ ಶಬ್ಬೀರ್ ಅಹ್ಮದ್ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಈ ಬಜೆಟ್ ಸರ್ವರ ಸಬಲೀಕರಣ ಅವಕಾಶಗಳ ಅನಾವರಣ ಹಾಗೂ ನವ ಕರ್ನಾಟಕದ ನಿರ್ಮಾಣ ಎಂಬ ಉದ್ದೇಶದೊಂದಿಗೆ ರೂಪುಗೊಂಡಿದ್ದು ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ಸಹಾಯಕವಾಗುವ ಹಲವು ಮಹತ್ವದ ಯೋಜನೆಗಳನ್ನು ಒಳಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಗಮನಾರ್ಹ. ಹೊಸ ವಿದ್ಯಾರ್ಥಿನಿಲಯಗಳ ಸ್ಥಾಪನೆ, ವಸತಿ ಶಾಲೆಗಳ ಆರಂಭ ಹಾಗೂ ಹಳೆಯ ಶಾಲೆಗಳ ಉನ್ನತೀಕರಣದ ಮೂಲಕ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದರಿಂದ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ಶಬ್ಬೀರ್ ಅಹ್ಮದ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ 150 ಸಂಖ್ಯಾಬಲದ 25 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಆರಂಭಿಸುವುದಾಗಿ ಘೋಷಿಸಿದೆ. ಜೊತೆಗೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 25 ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯಾಬಲವನ್ನು 50ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಈ ಕ್ರಮಗಳಿಂದ ದೂರದ ಗ್ರಾಮಗಳಿಂದ ನಗರಗಳಿಗೆ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ. ಸುರಕ್ಷಿತ ಹಾಗೂ ಸಮರ್ಪಕ ವಸತಿ ಸೌಲಭ್ಯ ದೊರೆತರೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಅದರ ಜೊತೆಗೆ ಸಂತ ಶಿಶುನಾಳ ಶರೀಫರವರ ಹೆಸರಿನಲ್ಲಿ 10 ಹೊಸ ವಸತಿ ಶಾಲೆಗಳನ್ನು ಸಿಬಿಎಸ್‌ಇ (CBSE) ಪಠ್ಯಕ್ರಮದಡಿಯಲ್ಲಿ ಪ್ರಾರಂಭಿಸುವ ಘೋಷಣೆಯೂ ಬಜೆಟ್‌ನಲ್ಲಿ ಮಾಡಲಾಗಿದೆ ಈ ಯೋಜನೆಗಾಗಿ ಪ್ರಸ್ತುತ ಸಾಲಿನಲ್ಲಿ ರೂ.10 ಕೋಟಿ ಅನುದಾನ ಮೀಸಲಿಡಲಾಗಿದೆ. ಇದರ ಮೂಲಕ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಲಿದೆ. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣದ ಅವಕಾಶ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ರಾಜ್ಯ ಸರ್ಕಾರ 100 ಮೌಲಾನಾ ಆಜಾದ್ ಮಾದರಿ ಶಾಲೆಗಳು ಹಾಗೂ ಉರ್ದು ಶಾಲೆಗಳನ್ನು ರೂ.400 ಕೋಟಿ ವೆಚ್ಚದಲ್ಲಿ ಕೆಪಿಎಸ್ (KPS) ಮಾದರಿ ಶಾಲೆಗಳಾಗಿ ಉನ್ನತೀಕರಿಸುವ ಯೋಜನೆಯನ್ನು ಘೋಷಿಸಿದೆ. ಈ ಕ್ರಮದಿಂದ ಶಾಲೆಗಳ ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳು ಇನ್ನಷ್ಟು ಉತ್ತಮವಾಗಲಿವೆ. ಉರ್ದು ಮಾಧ್ಯಮ ಶಾಲೆಗಳ ಅಭಿವೃದ್ಧಿಯಿಂದ ಉರ್ದು ಭಾಷೆ ಹಾಗೂ ಸಂಸ್ಕೃತಿಯ ಸಂರಕ್ಷಣೆಗೆ ಸಹ ಇದು ನೆರವಾಗಲಿದೆ ಎಂದು ಶಬ್ಬೀರ್ ಅಹ್ಮದ್ ಹೇಳಿದರು.
ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಜೈನ, ಬೌದ್ಧ ಹಾಗೂ ಸಿಖ್ ಸಮುದಾಯಗಳ ಅಭಿವೃದ್ಧಿಗಾಗಿ ರೂ.100 ಕೋಟಿ ಅನುದಾನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಅನುದಾನದಿಂದ ಆ ಸಮುದಾಯಗಳ ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಅವರು ತಿಳಿಸಿದರು.
ಬೌದ್ಧ ಧರ್ಮದ ಧಮ್ಮಾಚಾರಿಗಳಿಗೆ ಮಾಸಿಕ ರೂ.6,000 ಗೌರವಧನ ನೀಡುವ ಯೋಜನೆಯೂ ಈ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದ ಬೌದ್ಧ ಧರ್ಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದ್ದು, ಸಮಾಜದಲ್ಲಿ ಧಾರ್ಮಿಕ ಸಹಿಷ್ಣುತೆ ಹಾಗೂ ಪರಸ್ಪರ ಗೌರವವನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಿವಿಧ ಕ್ಷೇತ್ರಗಳಲ್ಲಿ ಯೋಜನೆಗಳನ್ನು ರೂಪಿಸಿರುವುದು ಸಂತೋಷಕರವಾಗಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಳ್ಳುತ್ತಿರುವ ಕ್ರಮಗಳು ಭವಿಷ್ಯದ ಪೀಳಿಗೆಗೆ ಉತ್ತಮ ಅವಕಾಶಗಳನ್ನು ಕಲ್ಪಿಸಲಿದೆ. ಅಲ್ಪಸಂಖ್ಯಾತ ಸಮುದಾಯಗಳ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಶಿಕ್ಷಣವೇ ಪ್ರಮುಖ ಸಾಧನವಾಗಿದ್ದು, ಈ ದಿಕ್ಕಿನಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರಗಳು ಶ್ಲಾಘನೀಯವಾಗಿವೆ ಎಂದು ಶಬ್ಬೀರ್ ಅಹ್ಮದ್ ಹೇಳಿದರು.
ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ನೀಡಿರುವ ಆದ್ಯತೆ ಸಮಾಜದಲ್ಲಿ ಸಮಾನತೆ ಹಾಗೂ ಸಮಗ್ರ ಅಭಿವೃದ್ಧಿಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾದರೆ ಅಲ್ಪಸಂಖ್ಯಾತ ಸಮುದಾಯದ ಯುವಕರು ಶಿಕ್ಷಣ, ಉದ್ಯೋಗ ಮತ್ತು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯಲು ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ..? ಗೊಬ್ಬರ ಕಾಳಸಂತೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಅಧಿಕಾರಿಗಳಿಗೆ ಸಚಿವರಿಂದ ಖಡಕ್ ಸೂಚನೆ
ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ನೀಡಿರುವ ಈ ಬಜೆಟ್ ಘೋಷಣೆಗಳು ಶ್ಲಾಘನೀಯವಾಗಿದ್ದು, ರಾಜ್ಯದಲ್ಲಿ ಸಮಾನ ಅವಕಾಶಗಳ ಸಮಾಜ ನಿರ್ಮಾಣಕ್ಕೆ ಬಲ ನೀಡಲಿವೆ ಎಂದು ಶಬ್ಬೀರ್ ಅಹ್ಮದ್ ತಿಳಿಸಿದ್ದಾರೆ.





