”ಶ್ರೀರಂಗಪಟ್ಟಣವು ಎಲ್ಲ ಧರ್ಮಗಳ ಸಂಗಮ ಭೂಮಿ. ಇಲ್ಲಿನ ಐತಿಹಾಸಿಕ ಚರ್ಚ್‌ನಲ್ಲಿ ಎಲ್ಲ ಸಮುದಾಯದ ಮುಖಂಡರು ಸೇರಿ ಹಬ್ಬ ಆಚರಿಸುತ್ತಿರುವುದು ನಮ್ಮ ಮಣ್ಣಿನ ಸೌಹಾರ್ದತೆಗೆ ಸಾಕ್ಷಿ. ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಯ ಬದುಕು ಇಂದಿನ ತುರ್ತಾಗಿದೆ” ಎಂದು ಪ್ರಜ್ಞಾವಂತರ ವೇದಿಕೆಯ ಸಂಚಾಲಕ ಸಿ ಎಸ್ ವೆಂಕಟೇಶ್ ನುಡಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಐತಿಹಾಸಿಕ ಗಂಜಾಂ ಪ್ರದೇಶದ ಅಬೇ ದುಬಾ ಚರ್ಚ್‌ನಲ್ಲಿ ಅಬೇ ದುಬಾ ಚರ್ಚ್‌ನ ಧರ್ಮದರ್ಶಿ ಫಾದರ್ ಜಾನ್ ಶಗೈ ಪುಷ್ಪರಾಜರಿಗೆ ಪುಷ್ಪಗುಚ್ಛ ನೀಡಿ ಹಬ್ಬದ ಶುಭಾಶಯ ಕೋರಿ ಅವರು ಮಾತನಾಡಿದರು.
ಶ್ರೀರಂಗಪಟ್ಟಣ ಪ್ರಜ್ಞಾವಂತರ ವೇದಿಕೆ ವತಿಯಿಂದ ಕ್ರಿಸ್ಮಸ್ ಹಬ್ಬವನ್ನು ಅತ್ಯಂತ ಸೌಹಾರ್ದಯುತವಾಗಿ ಆಚರಿಸಲಾಯಿತು. ವಿವಿಧ ಧರ್ಮಗಳ ಮುಖಂಡರು ಒಂದೇ ವೇದಿಕೆಯಲ್ಲಿ ಸೇರುವ ಮೂಲಕ ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ರವಾನಿಸಿದರು.
ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್ ಮಾತನಾಡಿ, “ಮಾನವೀಯತೆಯೇ ದೊಡ್ಡ ಧರ್ಮ. ಕ್ರಿಸ್ಮಸ್ ಅಂತಹ ಪವಿತ್ರ ದಿನದಂದು ನಾವೆಲ್ಲರೂ ಒಂದಾಗಿರುವುದು ಸಮಾಜಕ್ಕೆ ಒಳ್ಳೆಯ ಮಾದರಿ” ಎಂದರು.
ಇದನ್ನೂ ಓದಿ: ಶ್ರೀರಂಗಪಟ್ಟಣ | ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಪ್ರಜ್ಞಾವಂತರ ಪ್ರತಿಭಟನೆ
ಮುಸ್ಲಿಂ ಸೌಹಾರ್ದ ವೇದಿಕೆ ಕಾರ್ಯದರ್ಶಿ ಅಬ್ದುಲ್ ಸುಕೂರ್ ಮಾತನಾಡಿ, “ಧರ್ಮಗಳು ಬೇರೆಯಾದರೂ ಮನುಷ್ಯತ್ವ ಒಂದೇ. ಸೌಹಾರ್ದತೆಯ ಮೂಲಕ ನಾವು ಭವ್ಯ ಭಾರತವನ್ನು ಕಟ್ಟಬಲ್ಲೆವು” ಎಂದು ಅಭಿಪ್ರಾಯಪಟ್ಟರು.
ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಪಾಲಹಳ್ಳಿ ಮಾತನಾಡಿ, “ಪ್ರತಿಯೊಬ್ಬರಿಗೂ ತಮ್ಮ ಧರ್ಮ ಆಚರಿಸುವ ಹಕ್ಕಿದೆ, ಅದರ ಜೊತೆಗೆ ಪರಸ್ಪರ ಗೌರವಿಸುವ ಸಂಸ್ಕೃತಿ ಬೆಳೆಯಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಮಾಜಿ ಅಧ್ಯಕ್ಷ ಕೆ ಟಿ ರಂಗಪ್ಪ, ಮುಖಂಡರಾದ ಎನ್. ಸರಸ್ವತಿ, ಚಿಕ್ಕ ತಮ್ಮೇಗೌಡ, ದಸಂಸ ನಂಜುಂಡ ಮೌರ್ಯ, ಕೆ ಶೆಟ್ಟಳ್ಳಿ ಅಪ್ಪಾಜಿ, ಶ್ರೀನಿವಾಸ್ ಸೇರಿದಂತೆ ಪ್ರಜ್ಞಾವಂತರ ವೇದಿಕೆಯ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.





