ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ, ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೊಂಬೆಟ್ಟು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ ಸುಮಾರು 13 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.
ದೀಪಾವಳಿ ಹಿನ್ನಲೆ ರೈ ಎಸ್ಟೇಟ್ ಎಜುಕೇಶನ್ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ತಟ್ಟೆ ಮತ್ತು ವಸ್ತ್ರ ವಿತರಿಸುವ ‘ಅಶೋಕ ಜನಮನ – 2025’ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.
ಇದನ್ನು ಓದಿದ್ದೀರಾ? ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿ ಮೂಲದ ಮಹಿಳೆ ಸಾವು: ಮೃತರ ಸಂಖ್ಯೆ 6ಕ್ಕೆ ಏರಿಕೆ
ಮೈದಾನದಲ್ಲಿ ಹೆಚ್ಚು ಮಂದಿ ಸೇರಿದ್ದ ಕಾರಣ ನೂಕುನುಗ್ಗಲು ಉಂಟಾಗಿದ್ದು, ಮಹಿಳೆಯರು ಹಾಗೂ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಯಾವುದೇ ಗಂಭೀರ ಜೀವಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಸಿಲಿನ ತಾಪದ ನಡುವೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಸುಮಾರು ಒಂದು ಲಕ್ಷ ಜನರು ಮೈದಾನದಲ್ಲಿ ಸೇರಿದ್ದರು. ಇದರಿಂದಾಗಿ ಹಲವು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.





