ರಾಜ್ಯ ಬಜೆಟ್ | ಕೊಡಗಿನ ಆದಿವಾಸಿ, ದಲಿತ, ಶೋಷಿತರ ಬದುಕು ಹಸನಾಗಲಿಲ್ಲ; ನಿರೀಕ್ಷೆ ತಪ್ಪಲಿಲ್ಲ!

Date:

ಕೊಡಗು ನೋಡುಗರ ಸ್ವರ್ಗ. ಕಾಫಿ ತೋಟಗಳ ಸಾಲು, ಬೆಟ್ಟಗುಡ್ಡ, ಮಂಜಿನ ಮುಸುಕು, ತಂಪನೆಯ ವಾತಾವರಣ, ಜಿಟಿ ಜಿಟಿ ಮಳೆ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುವ ಪ್ರವಾಸಿ ತಾಣ. ಆದರೆ, ಹೆಚ್ಚಿದ ವನ್ಯಜೀವಿ-ಮಾನವ ಸಂಘರ್ಷ ಪ್ರಾಣಹಾನಿ ಜೊತೆಗೆ ಬೆಳೆದ ಬೆಳೆ ಕೈಸೇರದಂತೆ ಮಾಡಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ನೆಲಮೂಲ ವಾಸಿಗಳ ಅಭ್ಯುದಯಕ್ಕೆ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಎಡವುತ್ತಿವೆ. ಸರ್ಕಾರದ ಬಜೆಟ್ ಯೋಜನೆಗಳು ಕಡತದ ಅಕ್ಷರಗಳಾಚೆ ಕೊಡಗಿನ ಆದಿವಾಸಿ, ದಲಿತ, ಶೋಷಿತರ ಬದುಕನ್ನು ಇನ್ನೂ ಹಾಸನಾಗಿಸಿಲ್ಲ, ನಿರೀಕ್ಷೆಗಳು ತಪ್ಪಲಿಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ಕೊಡವರ ನಿರೀಕ್ಷೆಗಳು ಕಾರ್ಯರೂಪಕ್ಕೆ ಬರುತ್ತವೆಯೇ?

ಸರ್ಕಾರದ ಪ್ರತಿ ಬಾರಿಯ ಬಜೆಟ್ ಮಂಡನೆಯಲ್ಲಿ ಭೂಹೀನರು, ನಿವೇಶನ ರಹಿತರು, ಮನೆ ಇಲ್ಲದವರಿಗೆ, ಸತ್ತರೆ ಹೂಳಲು ಜಾಗವಿಲ್ಲದವರ ಅಗತ್ಯ ಸವಲತ್ತು ಕಲ್ಪಿಸುವಲ್ಲಿ ವಿಫಲವಾಗಿವೆ. ಕೊಡಗಿನಲ್ಲಿ ರಸ್ತೆಗಳು ಅಭಿವೃದ್ಧಿ ಕಾಣುತ್ತಿರಬಹುದು. ಅದು ಕಾರಿನಲ್ಲಿ ಓಡಾಡುವವರ ಪಾಲಿಗೆ ಮಾತ್ರ. ಅಭಿವೃದ್ಧಿ ಎಂಬುದು ಉಳ್ಳವರ ಸೌಲಭ್ಯಕ್ಕೆ ಸೀಮಿತವಾಗದೆ; ಆರ್ಥಿಕವಾಗಿ ಹಿಂದುಳಿದಿರುವವರ ಬದುಕಿಗೆ ಬಲ ತುಂಬಬೇಕು. ಅದು ಯಾವಾಗ? ಎನ್ನುತ್ತಿದೆ ಜನತೆ.

ಗ್ಯಾರೆಂಟಿ ಮೇಲೆ ಗ್ಯಾರೆಂಟಿ ಕೊಡುವ ಸರ್ಕಾರಕ್ಕೆ ಆದಿವಾಸಿಗಳಿಗೆ ಮನೆ, ಶೌಚಾಲಯ, ವಿದ್ಯುತ್, ಕುಡಿಯುವ ನೀರು, ಶಿಕ್ಷಣ ಸೇರಿದಂತೆ ಅವಶ್ಯಕ ಮೂಲಭೂತ ಸೌಕರ್ಯ ಕಲ್ಪಿಸುವ ಆಸಕ್ತಿ ಇಲ್ಲ. ಇದ್ಯಾವುದನ್ನು ಇದುವರೆಗೂ ತಲುಪಿಸಲಾಗಿಲ್ಲ. ನೆಲದ ಮೂಲ ವಾಸಿಗಳಾದ ಆದಿವಾಸಿಗಳು, ಅರಣ್ಯ ಹಕ್ಕುಗಳಿಂದ ಅತಂತ್ರರಾಗಿ ಕಾಡಿಂದ ಆಚೆಗೆ ದಬ್ಬಲ್ಪಟ್ಟವರು. ನಾಗರಿಕತೆ ಅರಿವಿಲ್ಲ, ವಿದ್ಯಾಭ್ಯಾಸ ಇಲ್ಲವೇ ಇಲ್ಲ. ಇತರರೊಡನೆ ಸೇರುವ, ಬದುಕುವ ರೂಢಿ ಗೊತ್ತಿಲ್ಲ. ಇರೋದು ‘ಲೈನ್ ಮನೆ’ಯಲ್ಲಿ. ಇಲ್ಲಿಯೇ ದುಡಿದು ದುಡಿದು ಮಣ್ಣಲ್ಲಿ ಮಣ್ಣಾಗುತ್ತಿರುವ ಜೀವಗಳಿವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದುವರೆಗೆ ಯಾವುದೇ ಸರ್ಕಾರ, ಜಿಲ್ಲಾಡಳಿತ ಆರ್ಥಿಕ ಪರಿಸ್ಥಿತಿಯ ವರದಿ ನೀಡಿಲ್ಲ. ಇದೇ ಆದಿವಾಸಿ ಸಮುದಾಯಗಳಿಗೆ ತಲುಪಿರುವ, ತಲುಪಿಸುತ್ತಿರುವ ಸವಲತ್ತುಗಳ ಮಾಹಿತಿ ಅಧಿಕಾರಿಗಳಲ್ಲಿ ಇಲ್ಲವೇ ಇಲ್ಲ. ಜನಪ್ರತಿನಿಧಿಗಳು ಯೋಜನೆಗಳ ಮೂಲಕ ಕಟ್ಟಿಸಿದ ಮನೆ, ಸ್ಮಶಾನ, ಕುಡಿಯುವ ನೀರಿನ ಘಟಕ, ಅಂಗನವಾಡಿ, ಪ್ರಾಥಮಿಕ ಚಿಕಿತ್ಸಾ ಕೇಂದ್ರ, ರಸ್ತೆ, ವಿದ್ಯುತ್ ಹೀಗೆ ಪಟ್ಟಿ ಮಾಡಿಕೊಡಲಿ. ಒಂದಷ್ಟು ಜನರ ಮೂತಿಗೆ ತುಪ್ಪ ಸವರಿದಂತೆ ಮಾಡಿ ಅದನ್ನೇ ಬೊಟ್ಟು ಮಾಡುತ್ತಾ, ಎಲ್ಲಾ ತಲುಪಿಸಿದ್ದೇವೆ ಎನ್ನುತ್ತಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ತಿರುಗುತ್ತಾರೆ.

ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ ಬಜೆಟ್‌ ಮಂಡನೆ ಮಾಡಲಿದ್ದಾರೆ. ಮಂಡನೆಗೆ ದಿನಗಣನೆ ಶುರುವಾಗಿದೆ. ಈ ಬಾರಿಯಾದರೂ ಆದಿವಾಸಿಗಳ ಸಂಕಟ ಅರಿತು, ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಅನುದಾನ ಮೀಸಲಿರಿಸಬೇಕು. ಅಧಿಕಾರಿಗಳು ಆ ಯೋಜನೆಗಳನ್ನು ಕಾರ್ಯರೂಪದಕ್ಕೆ ತರುವ ಬದ್ಧತೆ ತೋರಬೇಕು ಎನ್ನುವುದು ನೆಲವಾಸಿಗಳ ಅಳಲು.

ಸರ್ಕಾರ ಪ್ರತಿ ಬಾರಿಯ ಬಜೆಟ್ನಲ್ಲಿ ಆದಿವಾಸಿ, ದಲಿತ, ಶೋಷಿತ ಸಮುದಾಯಕ್ಕೆ ಭೂಮಿ, ಉದ್ಯೋಗ, ಆರೋಗ್ಯ, ಶಿಕ್ಷಣ ಕೊಡುವ ಗೋಜಿಗೇ ಹೋಗಿಲ್ಲ. ಬಜೆಟ್ ನಲ್ಲಿ ಕೊಡಗಿಗೆ ಕೆಲ ಯೋಜನೆಗಳು ಘೋಷಣೆ ಆಗಬಹುದು. ಅವು ಸಾಮಾನ್ಯವಾಗಿ ಸಾರ್ವತ್ರಿಕವಾಗಿ ಜಿಲ್ಲಾವಾರು ಯೋಜನೆಗಳಷ್ಟೆ. ಅದರ ಹೊರತು, ಏನೂ ಇಲ್ಲದಿರುವ ಸಮುದಾಯಗಳಿಗೆ ಯೋಜನೆಯೂ ಇಲ್ಲ, ಅಭಿವೃದ್ಧಿಯೂ ಇಲ್ಲ. ಲೈನ್ ಮನೆ ಜೀತದಲ್ಲಿ ಜೀವ ತೇಯುತ್ತಿರುವವರ ಅಂಕಿ ಅಂಶ ಎಲ್ಲಿದೆ? ಭೂ ಮಾಲೀಕರ ಕಪಿ ಮುಷ್ಟಿಯಲ್ಲಿ ಕೊಡಗು ನಿಂತಿದೆ! ‘ಲೈನ್ ಮನೆ’ ಜೀತದ ಕುಟುಂಬಗಳ ಕುರಿತಾಗಿ ಒಮ್ಮೆ ಸರ್ಕಾರ ಕಣ್ಣು ಬಿಟ್ಟು ನೋಡಲಿ, ಸ್ಥಿತಿಯ ಅನಾವರಣ ಆದೀತು. ಅವರ ಸ್ಥಿತಿಗತಿ ತಿಳಿಯುತ್ತೆ. ಶಕ್ತಿ ಇರುವವರೆಗೆ ಭೂ ಮಾಲೀಕರು ದುಡಿಸಿಕೊಳ್ಳುವುದಷ್ಟೇ, ಉಳಿದದ್ದು ಕಾಫಿ ಬೊಡ್ಡೆಗೆ ಗೊಬ್ಬರವಾದವರೇ ಹೆಚ್ಚು.

ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಶಂಕುಸ್ಥಾಪನೆ ಎಂದಲ್ಲ. ಆರ್ಥಿಕವಾಗಿ ಬಳಲಿರುವ ಸಮುದಾಯಗಳಿಗೆ ಆರ್ಥಿಕ ಬಲ ತುಂಬುವುದು. ಬಜೆಟ್ ಕೇವಲ ಘೋಷಣೆಯಲ್ಲ ಎಲ್ಲರಿಗೂ ತಲುಪಬೇಕಾದ ಜನಪರ ಯೋಜನೆಗಳು. ಆದರೆ, ಕೊಡಗಿನ ವಿಚಾರದಲ್ಲಿ ತದ್ವಿರುದ್ಧ ಪರಿಸ್ಥಿತಿ. ಸಂಪೂರ್ಣ ಅನುಷ್ಠಾನ ವಿಚಾರದಲ್ಲಿ ತೀರ ಹಿಂದುಳಿದಿದೆ. ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನ ಆಗುವಲ್ಲಿ ವಿಫಲವಾಗಿದ್ದು, ಹಿಂದುಳಿದ ಸಮುದಾಯಗಳು ಪರಿಪರಿಯಾಗಿ ಚಡಪಡಿಸುವಂತಿದೆ.

ಕೊಡಗಿನ ಮಟ್ಟಕ್ಕೆ ಸಾಕಷ್ಟು ನಿರೀಕ್ಷೆಗಳಿವೆ. ಅದರಲ್ಲಿ ಪ್ರಮುಖವಾಗಿ ಆದಿವಾಸಿ ಪರಂಪರೆ, ಸಂಸ್ಕೃತಿ ಉಳಿಸಿಕೊಳ್ಳುವುದು, ಅರಣ್ಯ ಕಿರು ಉತ್ಪನ್ನಗಳಿಗೆ ಸ್ವತಃ ಮೌಲ್ಯವರ್ಧನೆ ಮಾಡಿ ನೇರವಾಗಿ ಮಾರಾಟ ಮಾಡುವಂತಹ ಮಾರುಕಟ್ಟೆ ಸೃಷ್ಟಿ, ಲೈನ್ ಮನೆ ಜೀತದಿಂದ ಹೊರತಂದು ತಮ್ಮದೇ ಉದ್ಯೋಗ ಮಾಡಿಕೊಂಡು ಸ್ವತಂತ್ರರಾಗಿ ಘನತೆಯ ಬದುಕು ಕಟ್ಟಿಕೊಳ್ಳುವುದು, ಆದಿವಾಸಿ, ದಲಿತ, ಶೋಷಿತ ಕುಟುಂಬಗಳಿಗೆ ಭೂಮಿ, ನಿವೇಶನ, ಶೌಚಾಲಯ, ವಿದ್ಯುತ್, ರಸ್ತೆ, ಶಿಕ್ಷಣ, ಆರೋಗ್ಯ, ಕುಡಿಯುವ ನೀರಿನ ಗ್ಯಾರೆಂಟಿ ಕಲ್ಪಿಸುವುದು. ಭೂ ಗುತ್ತಿಗೆ ಅನುಸಾರ ಸರ್ವರಿಗೂ ಅನ್ವಯವಾಗುವ ಮಾದರಿಯಲ್ಲಿ ಭೂ ರಹಿತರಿಗೆ ಸರ್ಕಾರ ಸಮೀಕ್ಷೆ ನಡೆಸಿ, ವರದಿ ಆಧರಿಸಿ ಭೂಮಿ ಹಂಚಿಕೆ ಮಾಡಿ ಸ್ವಾವಲಂಬಿಗಳನ್ನಾಗಿಸುವುದು ಸಾಂದರ್ಭಿಕವಾಗಿ ಸಿಎಂ ಸಿದ್ದರಾಮಯ್ಯನವರ ಮುಂದಿರುವ ಬಹುಮುಖ್ಯ ನಿರೀಕ್ಷೆಗಳು. ಸಮಾಜವಾದಿ ಹಿನ್ನಲೆಯ ಸಿದ್ದರಾಮಯ್ಯನವರು ಕೊಡಗಿನ ಬಡಜನರ ಕಷ್ಟ ಅರಿತು ಕ್ರಮ ಕೈಗೊಳ್ಳುವ ನಿರೀಕ್ಷೆ ಮೂಡಿದೆ. ಭೂಮಿ, ಉದ್ಯೋಗ, ಆರೋಗ್ಯ, ಶಿಕ್ಷಣ ಘೋಷಣೆಗಳಾಗದೆ ಬದುಕಿನ ಹಕ್ಕುಗಳಾಗಬೇಕು ಎನ್ನುವುದು ಬಹುತೇಕ ಕೊಡವರ ನಿರೀಕ್ಷೆ, ಆಶಯ.

ಇತ್ತೀಚೆಗೆ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿ ಆನೆ ದಾಳಿಗೆ ಬಲಿಯಾದ ಘಟನೆ ಮನಕಲಕುವಂತಿದೆ. ಅರಣ್ಯ ಇಲಾಖೆ ಬೇಜವಾಬ್ದಾರಿ ತೋರದೆ ಮೊನ್ನೆಚ್ಚರಿಕೆ ಕ್ರಮ ವಹಿಸಿ, ಕಾಡು ಪ್ರಾಣಿ ಹಾವಳಿ ತಡೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಂತ್ರಜ್ಞಾನ ವ್ಯವಸ್ಥೆ ಬಳಕೆ ಮಾಡಿಕೊಂಡು ಸರಿಪಡಿಸುವ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಬೇಕು. ಕೇವಲ ಸಾಂತ್ವನ, ಪರಿಹಾರ ಧನ ನೀಡಿ ಕೈತೊಳೆದುಕೊಳ್ಳುವುದು ಶಾಶ್ವತ ಪರಿಹಾರವಲ್ಲ.

ಪ್ರವಾಸಿಗರ ಸ್ವರ್ಗವೆಂಬ ಹೆಸರಿನೊಂದಿಗೇ ಬೆಸೆದುಕೊಂಡಂತೆ ಬಂದಿರುವ ಸುಲಿಗೆ, ದೌರ್ಜನ್ಯಗಳ ಆರೋಪಗಳು ಜಿಲ್ಲೆಗೆ ಕಪ್ಪು ಚುಕ್ಕಿಯಾಗುತ್ತಿವೆ. ಪ್ರವಾಸೋದ್ಯಮದಿಂದ ಲಾಭ ಪಡೆಯಬೇಕಿದ್ದ ಸ್ಥಳೀಯ ಕುಟುಂಬಗಳಿಗೆ ನೇರ ಪ್ರಯೋಜನ ತಲುಪುವಂತೆ ವಿಶೇಷ ಯೋಜನೆಗಳು ಅತ್ಯಗತ್ಯ. ನಿಯಂತ್ರಿತ, ಹೊಣೆಗಾರಿಕೆಯ ಪ್ರವಾಸೋದ್ಯಮವೇ ಜಿಲ್ಲೆಯ ಸಮತೋಲನದ ಬೆಳವಣಿಗೆಗೆ ದಾರಿ. ಇನ್ನಷ್ಟು ಪ್ರವಾಸಿ ಸ್ಥಳಗಳು ಅಜ್ಞಾತವಾಗಿವೆ. ಕೆಲವೆಡೆ ಮೂಲ ಸೌಕರ್ಯವಿರದೆ ಸೊರಗಿವೆ. ಇನ್ನೂ ಹಲವೆಡೆಗೆ ತೆರಳಲು ರಸ್ತೆ, ವಾಸ್ತವ್ಯದ ವ್ಯವಸ್ಥೆಗಳ ಕೊರತೆಯೂ ಪ್ರವಾಸೋದ್ಯಮದ ಹಿನ್ನಡೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸಮರ್ಪಕ ಯೋಜನೆ ರೂಪಿಸಬೇಕು.

ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ, ಆರೋಗ್ಯ ಕ್ಷೇತ್ರ ರೋಗಗ್ರಸ್ತವಾಗಿದೆ. ಉತ್ತಮವಾದ, ಸುಸಜ್ಜಿತವಾದ ಸರ್ಕಾರಿ ಆಸ್ಪತ್ರೆಗಳ ಕೊರತೆ, ತಜ್ಞ ವೈದ್ಯರಿಲ್ಲದಿರುವುದು, ಆಂಬುಲೆನ್ಸ್ ಕೊರತೆ, ಸಿಬ್ಬಂದಿಗಳಿಲ್ಲದಿರುವುದು ದಿನೇ ದಿನೇ ತಲೆ ನೋವಾಗಿ ಪರಿಣಮಿಸಿದೆ. ಆಡಳಿತ ಪಕ್ಷದ ಶಾಸಕರು ಎರಡು ಕ್ಷೇತ್ರಗಳ ಶಾಸಕರಾಗಿದ್ದು, ಒಂದು ಕ್ಷೇತ್ರದಲ್ಲಿ ವೈದ್ಯರೇ ಶಾಸಕರಾಗಿದ್ದಾರೆ. ಪ್ರಸ್ತುತ ಸನ್ನಿವೇಶ ಅವಲೋಕಿಸಿ ಜಿಲ್ಲೆಗೆ ಉತ್ತಮ ಆರೋಗ್ಯ ಲಭಿಸುವಂತೆ ಗಮನ ಸೆಳೆಯಬೇಕಿದೆ.

ರಸ್ತೆ ಅಭಿವೃದ್ಧಿ ಕಾಮಗಾರಿಗಳು ಇತ್ತೀಚಿಗೆ ಜಿಲ್ಲೆಯಾದ್ಯಂತ ಸುಧಾರಣೆಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಕೊಡಗು ಹೇಳಿಕೇಳಿ ವಿಪರೀತ ಮಳೆಯಿಂದ, ಬೆಟ್ಟ ಗುಡ್ಡಗಳಿಂದ ಕೂಡಿರುವುದರಿಂದ ಡಾಂಬರ್ ರಸ್ತೆ ಭವಿಷ್ಯದಲ್ಲಿ ಬಹುಬಾಳಿಕೆ ಬರುವ ಪರಿಸ್ಥಿತಿಯಲ್ಲಿಲ್ಲ. ಇದನ್ನೆಲ್ಲಾ ವೈಜ್ಞಾನಿಕವಾಗಿ ಪರಿಶೀಲಿಸಿ ಪ್ರಮುಖ ರಸ್ತೆಗಳನ್ನಾದರೂ ಕಾಂಕ್ರಿಟ್ ರಸ್ತೆಗಳನ್ನಾಗಿಸಲು ಮುಂದಾಗಬೇಕು. ರಸ್ತೆಯನ್ನೇ ಕಾಣದ ಆದಿವಾಸಿಗಳ ಹಾಡಿ ಕಡೆಗೆ ಗಮನ ಹರಿಸಿ ರಸ್ತೆ ಕಾಯಕಲ್ಪ ಕಲ್ಪಿಸಬೇಕು. ಕೊಡಗಿನ ಮಟ್ಟಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದ್ದು ಶಾಸಕದ್ವಯರು ಮುಖ್ಯಮಂತ್ರಿಗಳ ಗಮನ ಸೆಳೆಯುವರೇ ಕಾದುನೋಡಬೇಕಿದೆ.

ಕೊಡಗಿನಾದ್ಯಂತ ಮೂಲ ಸೌಕರ್ಯ, ಅಭಿವೃದ್ಧಿ ಮುನ್ನೋಟದಲ್ಲಿ ಮಡಿಕೇರಿ, ಪೊನ್ನಂಪೇಟೆ, ವಿರಾಜಪೇಟೆ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸೂಕ್ತವಾದ ನಿರ್ವಹಣೆಯೊಂದಿಗೆ ಕಲ್ಪಿಸಬೇಕಿದೆ. ಭೂ ಕುಸಿತ ಪ್ರದೇಶಗಳಲ್ಲಿ ಹಾನಿಗೊಂಡ ಸೇತುವೆ, ರಸ್ತೆಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕಿದೆ. ಭೂ ಕುಸಿತ, ಮಳೆಯಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಇದುವರೆಗೆ ಮನೆ ಹಂಚಿಕೆಯಾಗಿಲ್ಲ, ಕೆಲವರಿಗೆ ಸಿಕ್ಕಿಲ್ಲ, ಜಿಲ್ಲಾಡಳಿತ ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಪುನರ್ವಸತಿ ಕಲ್ಪಿಸಬೇಕು.

ಇದನ್ನೂ ಓದಿ: ಕೊಡಗು | ‘ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕೊಡಗು ಜಿಲ್ಲೆಯ ಅಭಿವೃದ್ಧಿ ಕೇವಲ ಪ್ರವಾಸಿಗರ ದೃಷ್ಟಿಗೆ ಕಾಣುವ ಸೌಂದರ್ಯವಲ್ಲ; ಅದು ನೆಲಮೂಲ ವಾಸಿಗಳ ಘನತೆಯ ಬದುಕಿನಲ್ಲಿ ಪ್ರತಿಫಲಿಸಬೇಕು. ಅಭಿವೃದ್ಧಿ ಎನ್ನುವುದು ಬಜೆಟ್ನ ಅಕ್ಷರಗಳಲ್ಲಿ ಮಾತ್ರ ಉಳಿಯದೇ ಜನತೆಯ ಬದುಕಾಗಬೇಕು. ಶೋಷಿತ ಸಮುದಾಯಗಳ ಮನೆ ಕದ ತಟ್ಟಿ, ಸಂಕಷ್ಟ ಕೇಳಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಸರ್ಕಾರ, ಅಧಿಕಾರಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸುವರೇ ಕಾದುನೋಡಬೇಕಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...