ರಾಜ್ಯ ಬಜೆಟ್ | ಸಾಂಸ್ಕೃತಿಕ ನಗರಿ ಮೈಸೂರಿನ ನಿರೀಕ್ಷೆಗಳೇನು? ಕಳೆದ ಬಜೆಟ್ ಕಡತದಲ್ಲೇ ಉಳಿಯಿತೇ?

Date:

ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು. ಸಹಜವಾಗಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಯ ದೂರದೃಷ್ಟಿ ಹೊಂದಿದ ಯೋಜನೆಗಳು ದಕ್ಕಬಹುದು ಎನ್ನುವ ಲೆಕ್ಕಾಚಾರ ಎಲ್ಲರಲ್ಲೂ ಮೂಡಿದೆ. ಮೈಸೂರು ಜನತೆ ತಮ್ಮದೇ ಜಿಲ್ಲೆಯ ಮುಖ್ಯಮಂತ್ರಿಗಳು ದಾಖಲೆಯ 17ನೇ ರಾಜ್ಯ ಬಜೆಟ್ ಮಂಡಿಸುತ್ತಿರುವುದರತ್ತ ಚಿತ್ತಹರಿಸಿದ್ದಾರೆ. ಈಗಾಗಲೇ, ಸಿಎಂ ನೇತೃತ್ವದಲ್ಲಿ ಮೊದಲನೇ ಸಭೆ ನಡೆದು ‘ಗ್ರೇಟರ್ ಮೈಸೂರು’ ಘೋಷಣೆಯ ಜತೆಗೆ ಆದೇಶವಾದ ಬೆನ್ನಲ್ಲೇ ನಿರೀಕ್ಷೆಗಳ ಪಟ್ಟಿಯೂ ಕೂಡ ಸಹಜವಾಗಿ ದೊಡ್ಡ ಮಟ್ಟದಲ್ಲಿದೆ. ರೈತಪರ ಬಜೆಟ್ ನಿರೀಕ್ಷೆಯಲ್ಲಿರುವ ಹೋರಾಟಗಾರರ ಸಫಲತೆ ಕಾಣುವುದೇ ಕಾದು ನೋಡಬೇಕಿದೆ. ಅಲ್ಲದೆ, ಕಳೆದ ಬಾರಿಯ ಘೋಷಣೆಗಳು ಕಡತದಲ್ಲಿಯೇ ಉಳಿದಿದ್ದರ ಅವಲೋಕನವನ್ನೂ ಕೂಡ ಈ ಸಂದರ್ಭದಲ್ಲಿ ಮನಗಾಣಬೇಕಿದೆ.

ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2026-27ನೇ ಸಾಲಿನ ಬಜೆಟ್ ಅಧಿವೇಶನ ಇದೇ ಮಾರ್ಚ್ 6ರಂದು ಮಂಡನೆಯಾಗಲಿದ್ದು, ಮಾರ್ಚ್ 27ರ ತನಕ 14 ದಿನಗಳ ಕಾಲ ಚರ್ಚೆ ನಡೆಯಲಿದೆ. ರಾಜ್ಯ ಸರ್ಕಾರದ ಮಹತ್ವಪೂರ್ಣ ಪಂಚಗ್ಯಾರೆಂಟಿ ಯೋಜನೆ ರಾಜ್ಯದಲ್ಲಿ ಜಾರಿಮಾಡುವ ಮೂಲಕ ರಾಜ್ಯದ ಮನೆ ಮನೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಆರ್ಥಿಕ ದಿವಾಳಿ, ಬಿಟ್ಟಿ ಭಾಗ್ಯ, ಜನರನ್ನು ಸೋಮಾರಿಗಳನ್ನಾಗಿಸುವ ಯೋಜನೆ, ಸರ್ಕಾರ ಸಾಲದ ಸುಳಿಯಲ್ಲಿದೆ ಎಂಬ ಆರೋಪಗಳ ನಡುವೆ ಜಿಡಿಪಿ ಹಾಗೂ ಜಿಎಸ್‌ಟಿ ಪಾವತಿಯಲ್ಲಿ ಮುಂದಿರುವುದು ಈ ಬಾರಿಯ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿಸಲು ಸಹಜ ಕಾರಣವಾಗಿದೆ.

ವಿರೋಧ ಪಕ್ಷದ ನಾಯಕರು ರಾಜ್ಯ ಸರ್ಕಾರ ಆರ್ಥಿಕ ದಿವಾಳಿತನ ಅನುಭವಿಸುತ್ತಿದೆ. ಸಾಲದ ಸುಳಿಗೆ ಸಿಲುಕಿದೆ, ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿದೆ ಎನ್ನುವ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಇದನ್ನೆಲ್ಲ ಅಲ್ಲಗಳೆಯುತ್ತ ಸಮರ್ಥವಾಗಿ ಬೃಹತ್ ಬಜೆಟ್ ಮಂಡನೆಗೆ ಸಿದ್ಧರಾದಂತಿದೆ. ಬಜೆಟ್ ಮೂಲಕವೇ ವಿರೋಧಿಗಳಿಗೆ ಉತ್ತರ ನೀಡುವ ಸಾಧ್ಯತೆಯೂ ಹೆಚ್ಚಿದೆ. ಸರ್ಕಾರದ ಸಾಧನೆಗಳ ಜತೆಗೆ ಭೂ ಗ್ಯಾರೆಂಟಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಮುಂದಿಟ್ಟು ಸರ್ಕಾರ ಆರ್ಥಿಕವಾಗಿ ತನ್ನ ಸದೃಢತೆಯನ್ನು ಸಾರಿ ಹೇಳುವುದು ಸೇರಿದಂತಿದೆ. ಸುದೀರ್ಘ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರು ಆರ್ಥಿಕ ತಜ್ಞರಂತೆ ಪಳಗಿದವರಾಗಿದ್ದು, ತಮ್ಮ ಸ್ವಕ್ಷೇತ್ರ ಮೈಸೂರಿನ ಅಭಿವೃದ್ಧಿಗೆ ಏನೆಲ್ಲಾ ಯೋಜನೆ ಹೊತ್ತು ತರಲಿದ್ದಾರೆ ಎನ್ನುವುದೇ ಕುತೂಹಲದ ಸಂಗತಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಬಾರಿ ₹4,09,549 ಕೋಟಿ ರೂಪಾಯಿಗಳ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಅದರಲ್ಲಿ ಕಂದಾಯ ಸಿಂಹ ಪಾಲನ್ನು ಹೊಂದಿರುವಂತಿದೆ. ಕಂದಾಯ ವೆಚ್ಚ ₹3,11,739 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಬಂಡವಾಳ ವೆಚ್ಚ ₹71,034 ಕೋಟಿ ರೂಪಾಯಿಯಾಗಿದ್ದು, ನಿರೀಕ್ಷಿತ ಯೋಜನೆ ಪಂಚ ಗ್ಯಾರೆಂಟಿಗೆ ಸಹಜವಾಗಿ ₹51,034 ಕೋಟಿ ರೂಪಾಯಿ ಮೀಸಲಿರಿಸಿದೆ.

ಮೈಸೂರು ಈಗ ‘ಗ್ರೇಟರ್ ಮೈಸೂರು’. ತನ್ನ ಪರಿಮಿತಿಯನ್ನು ಹೆಚ್ಚಿಸಿಕೊಂಡಿದೆ. 86.31 ಚದರ ಕಿಮೀ ಹೊಂದಿದ್ದ ಮಹಾನಗರ ಪಾಲಿಕೆ ಇದೀಗ ‘ಗ್ರೇಟರ್ ಮೈಸೂರು’ ಮೇಲ್ದರ್ಜೆ ಮೂಲಕ 341.44 ಚದರ ಕಿಮೀ ವ್ಯಾಪ್ತಿ ವಿಸ್ತರಿಸಿಕೊಳ್ಳಲಿದೆ. ಇದರೊಟ್ಟಿಗೆ ಅಭಿವೃದ್ಧಿ ವಿಚಾರವಾಗಿ ಸವಾಲಿನ ಕೆಲಸವಾಗಿದ್ದು, ಆರ್ಥಿಕವಾಗಿ ಕ್ರೋಢಿಕರಣ ಕೂಡ ಅಷ್ಟೇ ಮಹತ್ವ ಪಡೆದಿದೆ. ಹಾಗೆಯೇ, ಮುಖ್ಯಮಂತ್ರಿಗಳ ಕನಸಿನ ಕೂಸು ಗ್ರೇಟರ್ ಮೈಸೂರಿಗೆ ಏನೆಲ್ಲ ಯೋಜನೆಗಳು ಲಭಿಸುತ್ತವೆ ಎನ್ನುವುದು ಸಹಜವಾಗಿ ಎಲ್ಲರ ಕಣ್ಣೋಟ ಬಜೆಟ್‌ನತ್ತ ದಿಟ್ಟಿಸುವಂತೆ ಮಾಡಿದೆ. ಅದರಲ್ಲಿ, ಪ್ರಮುಖವಾಗಿ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಟ್ರ್ಯಾಫಿಕ್ ಸಮಸ್ಯೆಗಳು, ಒಳಚರಂಡಿ ನಿರ್ಮಾಣ-ನಿರ್ವಹಣೆ, ಫುಟ್‌ಪಾತ್ ಕಲ್ಪಿಸುವುದು -ನಿರ್ವಹಿಸುವುದು, ಕುಡಿಯುವ ನೀರಿನ ವಿಚಾರವಾಗಿ ಕಾವೇರಿ, ಕಬಿನಿ ನೀರಿನ ನಿರ್ವಹಣೆ, ತ್ಯಾಜ್ಯ ನೀರು ಸಂಸ್ಕರಣೆಗೆ ಒತ್ತು ನೀಡುವುದು, ಉದ್ಯಾನವನಗಳ ಸಂರಕ್ಷಣೆ, ರಸ್ತೆ ಗುಣಮಟ್ಟ ಕಾಯ್ದಿರಿಸುವುದು, ಹೊರ ವರ್ತುಲ ರಸ್ತೆ ನಿರ್ಮಾಣದಿಂದ ಭಾರೀ ವಾಹನಗಳ ಓಡಾಟ ತಡೆಗಟ್ಟುವುದರ ಜತೆಗೆ ಟ್ರ್ಯಾಫಿಕ್ ಕಿರಿಕಿರಿ ತಪ್ಪಿಸುವುದು, ನಗರದ ಬೆಳವಣಿಗೆಯ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡುವ ಸಲುವಾಗಿ ಪೌರಕಾರ್ಮಿಕರ ಒಳಗೊಳ್ಳುವಿಕೆ ಇದೆಲ್ಲದರ ಜತೆಗೆ ಉದ್ಯೋಗ ಸೃಷ್ಟಿ ಮಹತ್ವದ್ದು.

ಜಿಲ್ಲೆ ಪ್ರಧಾನವಾಗಿ ಕೃಷಿ ಆಧಾರಿತವಾಗಿದ್ದು, ವಾಣಿಜ್ಯ ಬೆಳೆಗಳಿಗೆ ಆದ್ಯತೆ ಹೊಂದಿದೆ. ಅದರಲ್ಲೂ ತಂಬಾಕು, ಶುಂಠಿ ಅತ್ಯಧಿಕವಾಗಿ ಬೆಳೆಯುವ ಜಿಲ್ಲೆ. ಜತೆಗೆ ರಾಗಿ, ಭತ್ತ, ಜೋಳ ಇನ್ನಿತರೆ ಬೆಳೆಗಳನ್ನು ಬೆಳೆಯುವ ಕೃಷಿಕರಿದ್ದಾರೆ. ಸಧ್ಯದ ಪರಿಸ್ಥಿತಿ ಅವಲೋಕಿಸುವುದಾದರೆ ತಂಬಾಕು ಬೆಳೆಗಾರರು ಸೂಕ್ತ ಬೆಲೆ ಕಾಣದೆ ಆತಂಕದಲ್ಲಿದ್ದಾರೆ. ಸರ್ಕಾರದ ನೆರವಿನ ನಿರೀಕ್ಷೆಯಿಂದ ಮುಖ ಮಾಡಿದ್ದಾರೆ. ಕೇಂದ್ರ ಸರ್ಕಾರ ಅಂದುಕೊಂಡಂತೆ ರೈತಪರವಾದ ಬಜೆಟ್ ಮಂಡಿಸುವಲ್ಲಿ ವಿಫಲವಾಗಿದೆ. ಆದರೆ, ರಾಜ್ಯ ಸರ್ಕಾರವಾದರೂ ರೈತರತ್ತ ಚಿತ್ತ ಹರಿಸುವುದೇನೋ ಎಂಬ ನಿರೀಕ್ಷೆ ಹೊಂದಿದ್ದಾರೆ. ರೈತರ ರಕ್ಷಣೆಗೆ ತವರು ಜಿಲ್ಲೆಯ ಸಿಎಂ ಮುಂದು ಬರುವರೆ ಕಾದು ನೋಡಬೇಕಷ್ಟೆ.

ಜಿಲ್ಲೆಯಾದ್ಯಂತ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿದೆ. ಅದರ ನಡುವೆ ರೆಸಾರ್ಟ್ ಮಾಲೀಕರ ಲಾಬಿಗೆ ಸಫಾರಿ ಪುನರಾರಂಭ ಮಾಡಲಾಗಿದೆ. ಇದೆಲ್ಲದರ ಪರಿಣಾಮದ ಕುರಿತಾಗಿಯೂ ಸರ್ಕಾರ ಯಾವ ರೀತಿಯಲ್ಲಿ ವರ್ತಿಸಲಿದೆ, ಕ್ರಮ ಕೈಗೊಳ್ಳಲಿದೆ ಎಂಬುದು ಬಹು ಮುಖ್ಯವಾದದ್ದೆ. ಜಿಲ್ಲೆಯ ನಿರೀಕ್ಷೆಯ ಭಾಗವಾಗಿ ಕೃಷಿಕರು ಅಭದ್ರತೆಯಿಂದ ಸಂಕಷ್ಟದಲ್ಲಿರುವಾಗ ಸರ್ಕಾರ ಮೊದಲ ಆದ್ಯತೆಯಾಗಿ ದೂರದೃಷ್ಟಿ ಹೊಂದಿದ ಕಾರ್ಯಕ್ರಮ ರೂಪಿಸಬೇಕು. ರೈತರ ಆರ್ಥಿಕ ಮಟ್ಟ ಉತ್ತೇಜನಕ್ಕೆ ಕೃಷಿ ಉತ್ಪನ್ನಗಳ ಉತ್ಪಾದನೋತ್ತರ ಮೌಲ್ಯವರ್ಧನೆ. ಯುವ ಜನರಲ್ಲಿ ಕೌಶಲ್ಯ ತರಬೇತಿ, ಹಣಕಾಸು ನೆರವು, ಮಾರುಕಟ್ಟೆ ಸೃಷ್ಟಿಗೆ ಒತ್ತು ನೀಡುವುದು, ಕೃಷಿ ಪಂಪ್‌ಸೆಟ್‌ಗಳಿಗೆ 12 ಗಂಟೆ 3 ಫೇಸ್ ವಿದ್ಯುತ್ ಸಂಪರ್ಕ, ಅಳವಡಿಕೆಗೆ ಸರ್ಕಾರ ನಿಗದಿ ಮಾಡಿರುವ ಶುಲ್ಕ ತೆರವು, ಸೌರಶಕ್ತಿಗೆ ಆದ್ಯತೆ, ಕೃಷಿ ಉಪಕರಣಗಳ ಮೇಲಿನ ಶೇ.18ರಷ್ಟು ಹೇರಿಕೆಯ ಜಿಎಸ್‌ಟಿ ವಿಧಿಸುವುದನ್ನು ತೆರವುಗೊಳಿಸಿ ವಿನಾಯಿತಿ ನೀಡುವುದು, ಸರ್ವೇ ವೆಚ್ಚ ಕಡಿತಗೊಳಿಸುವುದು, ಹದ್ದುಬಸ್ತ್, ಪೋಡಿ ದುರಸ್ಥಿ, ಸ್ಕೆಚ್, ಹೌಸಿಂಗ್ ಇ-ಸ್ವತ್ತು ಸೇರಿದಂತೆ ಸರ್ಕಾರಿ ಸೇವೆಗಳಿಗೆ ದುಬಾರಿ ಶುಲ್ಕ ವಿಧಿಸುವುದನ್ನು ತಪ್ಪಿಸಿ, ಕನಿಷ್ಠ ದರಕ್ಕೆ ಇಳಿಸಬೇಕೆಂಬುದು ರೈತರ ಆಗ್ರಹವಾಗಿದೆ.

ನೀರಾವರಿಗೆ ಪ್ರಾಮುಖ್ಯತೆ ನೀಡಿ ಜಲಾಶಯಗಳ ನೀರು ಪೋಲಾಗದಂತೆ ಹಿಡಿದಿಟ್ಟುಕೊಳ್ಳುವ, ಸದ್ಭಳಕೆ ಮಾಡುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿ, ಕೆರೆಕಟ್ಟೆಗಳಿಗೆ ನೀರು ತುಂಬಿಸಬೇಕು. ಇದರ ಜತೆಗೆ ಕಿರು ನೀರಾವರಿ ಯೋಜನೆಗಳಿಗೆ ಅನುದಾನ ಹೆಚ್ಚಿಸಬೇಕು. ಕಬಿನಿ ನೀರು ತಮಿಳುನಾಡಿಗೆ ಹೆಚ್ಚಾಗಿ ಹರಿಸುವುದನ್ನು ತಪ್ಪಿಸಿ ಏತ ನೀರಾವರಿ ಮೂಲಕ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆ ರೂಪಿಸಬೇಕು. ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ ಅಯವ್ಯಯದಲ್ಲಿ ಹೆಚ್ಚಿನ ಹಣ ಮೀಸಲಿಡಬೇಕು. ‘ನಮ್ಮ ಹೊಲ-ನಮ್ಮ ರಸ್ತೆ’ ಯೋಜನೆಯಡಿ ಎಲ್ಲ ರೈತರು ತಮ್ಮ ತಮ್ಮ ಜಮೀನುಗಳಿಗೆ ತೆರಳಲು ರಸ್ತೆ ಆದ್ಯತೆ, ಮೈಕ್ರೋ ಫೈನಾನ್ಸ್ ಹಾವಳಿ ತಡೆಗಟ್ಟುವುದು, ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಹಣಕಾಸು ಸಂಸ್ಥೆಗಳ ಮೂಲಕ ಮಹಿಳೆಯರಿಗೆ ಸಾಲ ಸಿಗುವ ವ್ಯವಸ್ಥೆ, ಸಹಕಾರಿ ಸಂಸ್ಥೆಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಬೆಳೆಸಾಲ ಕಲ್ಪಿಸುವುದು ಅತ್ಯಗತ್ಯವಾಗಿದೆ.

ತುಂತುರು, ಹನಿ ನೀರಾವರಿ ಸೌಲಭ್ಯ ಸರಳಿಕರಣ, ಸಹಾಯಧನ 7 ವರ್ಷದ ಮಿತಿಯಿಂದ 4 ವರ್ಷದ ಮಿತಿಗೆ ಇಳಿಕೆ ಮಾಡುವುದು, ಭೂಮಿಯ ಫಲವತ್ತತೆ ಹೆಚ್ಚಿಸುವ ದೃಷ್ಟಿಯಿಂದ ಡಯಾಂಚ್ ಮತ್ತು ಸೆಣಬು ಬೆಳೆಯಲು ಪ್ರೋತ್ಸಾಹ, ಅಡಕೆ-ತೆಂಗಿನ ಮರಗಳಿಗೆ ಬರುವ ರೋಗಗಳನ್ನು ತಡೆಗಟ್ಟಲು ವಿಶೇಷ ಅನುದಾನ, ತಂಬಾಕು ಬೆಳೆಗಾರರ ರಕ್ಷಣೆಗೆ ಅಗತ್ಯ ಕಾರ್ಯಕ್ರಮ ರೂಪಿಸಬೇಕು ಎನ್ನುವುದು ಮೈಸೂರು ಜಿಲ್ಲೆಯ ಪ್ರಮುಖ ನಿರೀಕ್ಷೆಗಳಾಗಿವೆ.

ಕಳೆದ ಬಜೆಟ್‌ನ ಘೋಷಣೆಗಳು ಕಡತದಲ್ಲಿಯೇ ಸೀಮಿತವಾಗಿ ಅನುಷ್ಠಾನಕ್ಕೆ ಬಾರದಿರುವುದು ನಮ್ಮ ಕಣ್ಣ ಮುಂದಿದೆ. ಸ್ವತಃ ಸಿಎಂ ಸಿದ್ದರಾಮಯ್ಯನವರೇ ‘ನೈಟ್ ಲೈಫ್’ ಘೋಷಣೆ ಮಾಡಿದ್ದರು. ಆದರೆ, ಈವರೆಗೆ ಅನುಷ್ಠಾನ ಆಗಲೇ ಇಲ್ಲ. 150 ಎಕರೆ ಪ್ರದೇಶದಲ್ಲಿ ‘ಪ್ರಿಂಟೆಡ್ ಸರ್ಕಿಟ್ ಬೋರ್ಡ್’ ಸ್ಥಾಪಿಸುವ ಮೂಲಕ ಅತ್ಯಾಧುನಿಕವಾಗಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಘೋಷಿತ ಯೋಜನೆ ಕೈಗೊಂಡಿಲ್ಲ. ಈ ಮೂಲಕ ಮೈಸೂರಿನ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಸಿಗಬೇಕಿದ್ದ ವೇಗ ಕೈತಪ್ಪಿದೆ. ಕಿಯೋನಿಕ್ಸ್ ಮೂಲಕ ‘ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ಟ್‌ʼ ಅಭಿವೃದ್ಧಿ ಘೋಷಣೆಯಾಗಿಯೇ ಉಳಿದುಕೊಂಡಿದೆ.

ಪ್ರತಿಷ್ಟಿತ ‘ಚಿತ್ರನಗರಿ’ ಯೋಜನೆ ಕಳೆಗುಂದಿದೆ. ಸರಿ ಸುಮಾರು ₹500 ಕೋಟಿ ರೂಪಾಯಿಯ ಯೋಜನೆ ನಂಜನಗೂಡು ತಾಲೂಕು, ಕಡಕೊಳ ಹೋಬಳಿಯ, ಇಮ್ಮಾವು ಗ್ರಾಮದ 150 ಎಕರೆಯಲ್ಲಿ ನಿರ್ಮಾಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಮಾತ್ರ ತೆವಳುವ ಹಂತದಲ್ಲಿಯೇ ಮುಂದುವರೆದಿದೆ. ಹೊರ ವರ್ತುಲದ ದಟ್ಟಗಳ್ಳಿಯಲ್ಲಿರುವ ಬುಡಕಟ್ಟು ಸಂಶೋಧನಾ ಕೇಂದ್ರದ ಆವರಣದಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯ ಸ್ಥಾಪಿಸುವ ಉದ್ದೇಶ ಈಡೇರಿಲ್ಲ. ಹಳೇ ಜಿಲ್ಲಾಧಿಕಾರಿ ಕಚೇರಿ ಬಳಸಿ ಪ್ರವಾಸಿಗರಿಗೆ ಕರಾವಳಿ ಮೀನುಖಾದ್ಯ ಸವಿಯುವ ನಿಟ್ಟಿನಲ್ಲಿ ಸರಿ ಸುಮಾರು ₹50 ಲಕ್ಷ ರೂಪಾಯಿ ವೆಚ್ಚದ ಹೈಟೆಕ್ ‘ಮರ್ತ್ಸ್ಯ ದರ್ಶಿನಿ’ ಯೋಜನೆಯನ್ನು ಈವರೆಗೂ ಕೈಗೆತ್ತಿಕೊಂಡಿಲ್ಲ.

ಈಗಿರುವ ಸಬ್‌ ಅರ್ಬನ್‌ ಬಸ್ ನಿಲ್ದಾಣ ಇಕ್ಕಟ್ಟಿನಿಂದ ಕೂಡಿದ್ದು, ₹120 ಕೋಟಿ ರೂಪಾಯಿಗಳ ಅಂದಾಜಿನಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಿಸುವ ಗುರಿ ಹೊಂದಿತ್ತು. ಆದರೆ ಇನ್ನೂ ಬನ್ನಿಮಂಟಪದಲ್ಲಿಯೇ ಈ ಕಾಮಗಾರಿ ಹಂತದಲ್ಲಿದೆ. ₹319 ಕೋಟಿ ರೂಪಾಯಿ ಅನುದಾನದಡಿ ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ಸಂಬಂಧಿಸಿದಂತೆ ಭೂ ಸ್ವಾಧೀನಕ್ಕಾಗಿ ಹಣ ಬಿಡುಗಡೆಯಾಗಿದೆ. ಆದರೆ, ಉನ್ನತೀಕರಣದ ಕಾಮಗಾರಿಗೆ ಈವರೆಗೆ ಚಾಲನೆ ನೀಡಿಲ್ಲ. ಕ್ರೀಡಾ ವಿಜ್ಞಾನ ಕೇಂದ್ರ, ಕುಸ್ತಿ, ವಾಲಿಬಾಲ್, ಖೋಖೊ ಅಕಾಡೆಮಿ, ವಿಶೇಷಚೇತನ ಮಕ್ಕಳ ವಸತಿ ಶಾಲೆ ಉನ್ನತೀಕರಣ ಘೋಷಣೆಯಾಗಿಯೇ ಉಳಿದುಕೊಂಡಿವೆ.

ನಿರ್ನಾಳ ಗ್ರಂಥಿ ವಿಜ್ಞಾನ(ಎಂಡೋಕ್ರೆನಾಲಜಿ) ಸ್ಥಾಪನೆಗೆ ಕೆಆರ್‌ಎಸ್ ರಸ್ತೆಯಲ್ಲಿ ಮೂರು ಎಕರೆ ಭೂಮಿ ಮಂಜೂರಾಗಿ, ₹50 ಕೋಟಿ ರೂಪಾಯಿ ನಿಗದಿಪಡಿಸಿದ್ದರೂ ಕಾಮಗಾರಿ ಆರಂಭವಾಗಿಲ್ಲ. ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡುಮಾದನಹಳ್ಳಿಯಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ಆರಂಭಿಸಲು 20 ಎಕರೆ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ಥಳೀಯ ರೈತರ ನಡುವೆ ವಿವಾದ ಸೃಷ್ಟಿಯಾಗಿ ಪ್ರತಿಭಟನೆ, ಹೋರಾಟ ಹಂತದಲ್ಲಿ ಗಮನ ಸೆಳೆದಿದ್ದು, ರೈತರಿಗೆ ಪರಿಹಾರ ಕಲ್ಪಿಸುವಲ್ಲಿ ಅನ್ಯಾಯವಾಗಿದೆ ಎನ್ನುವುದು ಸದ್ಯದ ವಿಚಾರವಾದರೆ, ಯೋಜನೆ ಆರಂಭಗೊಂಡಿಲ್ಲ.

ಇನ್ನು ಹೊಸ ತಾಲೂಕುಗಳಾಗಿ ಮಾರ್ಪಟ್ಟ ಸಾಲಿಗ್ರಾಮ, ಸರಗೂರು ಪಟ್ಟಣಗಳಲ್ಲಿ ಈವರೆಗೆ ಪ್ರಜಾಸೌಧ ನಿರ್ಮಾಣವಾಗಿಲ್ಲ. ಸರಸ್ವತಿಪುರಂನ ಅಗ್ನಿಶಾಮಕ ಠಾಣೆಯಿರುವ ಪಾರಂಪರಿಕ ಕಟ್ಟಡ ಕುಸಿದಿದೆ. ಅದರ ಹೊಸ ಕಟ್ಟಡ ನಿರ್ಮಾಣಕ್ಕೆ ₹3 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿಲ್ಲ, ಈವರೆಗೆ ಕಟ್ಟಡ ಕಾಮಗಾರಿಗೆ ಚಾಲನೆಯೂ ದೊರೆತಿಲ್ಲ. ಹೀಗೆ ಕಳೆದ ಬಜೆಟ್‌ನಲ್ಲಿ ಘೋಷಣೆಯಾದ ಹತ್ತಾರು ಯೋಜನೆಗಳು ಕಡತದಲ್ಲಿ ಉಳಿದಿವೆಯಷ್ಟೇ. ಹೂಟಗಳ್ಳಿ(ಮಡಿಕೇರಿ ರಸ್ತೆ), ಮಣಿಪಾಲ ಆಸ್ಪತ್ರೆ ವೃತ್ತ(ಬೆಂಗಳೂರು ರಸ್ತೆ) ಮೇಲ್ಸೇತುವೆ ನಿರ್ಮಾಣ ವಿಚಾರ ಜಟಾಪಟಿಯಲ್ಲಿಯೇ ಮುಂದುವರೆದಿದೆ.

ಈ ಸುದ್ದಿ ಓದಿದ್ದೀರಾ? ಇರಾನ್ ಇತಿಹಾಸ, ಕಚ್ಚಾತೈಲ ಮತ್ತು ಅಮೆರಿಕದ ಆಟ!

ಈಗಲಾದರೂ ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯನವರು ಈ ಬಾರಿಯ ಬಜೆಟ್‌ನಲ್ಲಿ ಹೊಸ ಯೋಜನೆಗಳ ಘೋಷಣೆಯೊಂದಿಗೆ, ಈ ಹಿಂದೆ ಘೋಷಣೆಯಾಗಿರುವ ಯೋಜನೆಗಳಿಗೆ ಜೀವ ತುಂಬುವರೇ ಎಂಬುದನ್ನು ಕಾದುನೋಡಬೇಕಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆ.ಸಿ ವ್ಯಾಲಿ ನೀರು ಸುರಕ್ಷಿತ: ಮಣ್ಣಿನ ಗುಣಮಟ್ಟವೂ ವೃದ್ಧಿ  

'ಕೆ.ಸಿ ವ್ಯಾಲಿ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಅಂತರ್ಜಲ...

ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಹೆಚ್ಚಳ

ಹಣದುಬ್ಬರಕ್ಕೆ ಅನುಗುಣವಾಗಿ ನಡೆಯುವ ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿ ಏಪ್ರಿಲ್ 1ರಿಂದ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಮೈಸೂರು | ನಂಜನಗೂಡಿನಲ್ಲಿ ಮರಗಳ ಹನನ; ಸಂಘಟನೆಗಳಿಂದ ಪ್ರತಿಭಟನೆ

ದಿನಾಂಕ-07-03-2026ರಂದು ಮೈಸೂರು ಜಿಲ್ಲೆ, ನಂಜನಗೂಡಿನ ಹೆಜ್ಜಿಗೆ ಗ್ರಾಮದ ಬಳಿ ಕಪಿಲಾ ನದಿ...