ಗೊಬ್ಬರ ಕಾಳಸಂತೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಅಧಿಕಾರಿಗಳಿಗೆ ಸಚಿವರಿಂದ ಖಡಕ್ ಸೂಚನೆ

Date:

ಕೋಲಾರ: ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ಕಾಳಸಂತೆ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಯೋಜನೆಗಳ ಕೆ.ಡಿ.ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಮುಳಬಾಗಿಲು ಭಾಗದಲ್ಲಿ ಅಕ್ರಮವಾಗಿ ಆಂಧ್ರಪ್ರದೇಶಕ್ಕೆ ರಸಗೊಬ್ಬರ ಸಾಗಿಸುತ್ತಿದ್ದ ಪ್ರಕರಣದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕೋಲಾರ ತಾಲ್ಲೂಕಿನ ‘ಶೆಟ್ಟಿ ಅಂಡ್ ಸನ್ಸ್’ ಮಳಿಗೆಯಿಂದ ಅಕ್ರಮವಾಗಿ ಗೊಬ್ಬರ ಸಾಗಾಟವಾಗುತ್ತಿರುವುದನ್ನು ಪತ್ತೆಹಚ್ಚಿ ಎಫ್.ಐ.ಆರ್ ದಾಖಲಿಸಿರುವುದಾಗಿ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ಕೇವಲ ಲೈಸೆನ್ಸ್ ಅಮಾನತು ಮಾಡುವುದರಿಂದ ಪ್ರಯೋಜನವಿಲ್ಲ ತಪ್ಪು ಮಾಡಿದವರ ಪರವಾನಗಿಯನ್ನು ಪೂರ್ಣವಾಗಿ ರದ್ದುಗೊಳಿಸಬೇಕು ಮತ್ತು ಇಲಾಖೆಯ ವತಿಯಿಂದ ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಿ ಕಠಿಣ ಕ್ರಮ ಜರುಗಿಸಬೇಕು ಎಂದು ಸಚಿವರು ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಎಚ್ಚರಿಕೆ ವಹಿಸಲು ಸಚಿವರು ಅಧಿಕಾರಿಗಳಿಗೆ ತಿಳಿಸಿದರು ಪ್ರಸ್ತುತ ಜಿಲ್ಲೆಯ ಸುಮಾರು ೭೯ ಹಳ್ಳಿಗಳಲ್ಲಿ ನೀರಿನ ಅಭಾವ ಕಂಡುಬಂದಿದ್ದು ಅಗತ್ಯವಿರುವ ಕಡೆ ಹೊಸ ಬೋರ್‌ವೆಲ್ ಕೊರೆಸಲು ಹಾಗೂ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ ಜಲಜೀವನ್ ಮಿಷನ್ ಅಡಿಯಲ್ಲಿ ಕೊರೆದ ಸುಮಾರು ೨೬೬ ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಬಾಕಿ ಇರುವುದಕ್ಕೆ ಸಚಿವರು ಅತೃಪ್ತಿ ವ್ಯಕ್ತಪಡಿಸಿದರು. ಕೂಡಲೇ ಠೇವಣಿ ಪಾವತಿಸಿ ಕನೆಕ್ಷನ್ ಪಡೆಯಲು ಹಾಗೂ ಬಾಕಿ ಬಿಲ್ ಪಾವತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಮಾರ್ಕಂಡೇಯ ಜಲಾಶಯದಿಂದ ೧೫೬ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ೪೫ ಕೋಟಿ ರೂ. ಮೊತ್ತದ ಯೋಜನೆಯು ಅರ್ಧಕ್ಕೆ ನಿಂತಿರುವುದರ ಬಗ್ಗೆ ಸಚಿವರು ಗಂಭೀರವಾಗಿ ಪರಿಗಣಿಸಿದರು ಗುತ್ತಿಗೆದಾರರಿಗೆ ಶೇ. ೯೮ ರಷ್ಟು ಬಿಲ್ ಪಾವತಿಯಾಗಿದ್ದರೂ ಕೆಲಸ ಪೂರ್ಣಗೊಂಡಿಲ್ಲದಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಈ ಯೋಜನೆಯಲ್ಲಿನ ಹಣಕಾಸು ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡಲು ಹಿರಿಯ ಅಧಿಕಾರಿಗಳಿಗೆ ಆದೇಶಿಸಿದರು.

ಪ್ರತಿ ಶನಿವಾರ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಶಾಸಕರನ್ನು ಒಳಗೊಂಡ ಕುಡಿಯುವ ನೀರಿನ ಸಮಿತಿ ಸಭೆ ನಡೆಸಿ ವರದಿ ನೀಡಲು ಸೂಚಿಸಲಾಯಿತು ಆರ್.ಒ (ಖಔ) ಪ್ಲಾಂಟ್‌ಗಳ ನಿರ್ವಹಣೆ ಮತ್ತು ಸರ್ಕಾರಿ ಜಾಗದ ಅತಿಕ್ರಮಣಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಅಧಿಕಾರಿಗಳಿಗೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು ಎರಗೊಳ ಅಣೆಕಟ್ಟಿನಲ್ಲಿ ಪ್ರಸ್ತುತ ನೀರು ಲಭ್ಯವಿದ್ದು ಮುಂದಿನ ಹತ್ತು ತಿಂಗಳವರೆಗೆ ಕೋಲಾರ ಬಂಗಾರಪೇಟೆ ಮತ್ತು ಮಾಲೂರು ನಗರಗಳಿಗೆ ನೀರಿನ ತೊಂದರೆಯಾಗುವುದಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಸ್ಥಗಿತಗೊಂಡಿರುವ ೧೪೪ ಆರ್.ಒ ಪ್ಲಾಂಟ್‌ಗಳನ್ನು ತಕ್ಷಣವೇ ದುರಸ್ತಿ ಮಾಡುವಂತೆ ಸಚಿವರು ಸೂಚಿಸಿದರು. ಇದಕ್ಕಾಗಿ ಸರ್ಕಾರದ ಅನುದಾನಕ್ಕೆ ಕಾಯದೆ ಗ್ರಾಮ ಪಂಚಾಯತ್ ನಿಧಿಯನ್ನು ಬಳಸಿಕೊಳ್ಳಲು ನಿರ್ದೇಶನ ನೀಡಲಾಯಿತು.
ಕೋಲಾರ ಬಸ್ ನಿಲ್ದಾಣದ ಹಿಂಭಾಗವಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಸರ್ಕಾರಿ ಜಾಗ ಸೇರಿದಂತೆ ವಿವಿಧೆಡೆ ನಡೆದಿರುವ ಅಕ್ರಮ ಖಾತೆಗಳನ್ನು ರದ್ದುಪಡಿಸಲು ಮತ್ತು ಸಂಬAಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು

ಕೆ.ಜಿ.ಎಫ್‌ನ ಬಿಜಿಎಂಎಲ್ ಸಂಸ್ಥೆಯು ಕಳೆದ ೨೫ ವರ್ಷಗಳಿಂದ ಸುಮಾರು ೨೦೦ ಕೋಟಿ ರೂಪಾಯಿಗಳಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿರುವುದರ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಬಾಕಿ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಅಗತ್ಯಬಿದ್ದಲ್ಲಿ ಸೌಲಭ್ಯಗಳನ್ನು ಕಡಿತಗೊಳಿಸುವಂತೆ ಸಚಿವರು ಸೂಚಿಸಿದರು ನಗರದ ವ್ಯಾಪ್ತಿಯಲ್ಲಿ ನೀರಿನ ಸೋರಿಕೆ ತಡೆಗಟ್ಟಲು ಮತ್ತು ಹೊಸ ಪೈಪ್‌ಲೈನ್ ಅಳವಡಿಸಲು ಎಸ್‌ಎಫ್‌ಸಿ ಅನುದಾನವನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು. ಸಚಿವರು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಆರೋಗ್ಯ ಇಲಾಖೆಯ ಅಂಕಿ ಅಂಶಗಳನ್ನು ವಿಶ್ಲೇಷಿಸಿದ ಅಧಿಕಾರಿಗಳು ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣವು ರಾಷ್ಟ್ರೀಯ ಮತ್ತು ರಾಜ್ಯ ಸರಾಸರಿಗಿಂತ ಕಡಿಮೆ ಇರುವುದನ್ನು ಖಚಿತಪಡಿಸಿದರು.ಪ್ರತಿ ೧,೦೦೦ ಜೀವಂತ ಜನನಗಳಿಗೆ ೨೩ ಮರಣಗಳು. ರಾಜ್ಯ ಸಾರಾಸರಿ ೧೯ ಮರಣಗಳು. ಜಿಲ್ಲೆಯಲ್ಲಿ ಈ ಪ್ರಮಾಣವು ಕೇವಲ ೯.೪೨ ರಷ್ಟಿದ್ದು, ಇದು ರಾಜ್ಯದ ಉತ್ತಮ ಸಾಧನೆಗಳಲ್ಲಿ ಒಂದಾಗಿದೆ.
ಪತ್ರಿಕೆಗಳಲ್ಲಿ ವರದಿಯಾದ ಮರಣಗಳ ಬಗ್ಗೆ ಸ್ಪಷ್ಟನೆ ನೀಡಿದ ಅಧಿಕಾರಿಗಳು ಕೆಲವು ಸಾವುಗಳು ತಡೆಗಟ್ಟಲಾಗದ ಜನ್ಮಜಾತ ದೋಷಗಳಿಂದ ಸಂಭವಿಸಿವೆ ಎಂದು ತಿಳಿಸಿದರು.

ಎಲ್ಲಾ ಗ್ರಾಮಗಳಲ್ಲಿ ನೀರಿನ ಮೂಲಗಳಲ್ಲಿ ನಿಯಮಿತವಾಗಿ ಕ್ಲೋರಿನೇಶನ್ ಮಾಡಿಸಲು ಕ್ರಮ ವಹಿಸುವಂತೆ ಸಚಿವರು ಆದೇಶಿಸಿದರು.
ಸರ್ಕಾರಿ ವೈದ್ಯರು ಖಾಸಗಿ ಪ್ರಾಕ್ಟೀಸ್‌ನಲ್ಲಿ ತೊಡಗುವುದನ್ನು ತಡೆಗಟ್ಟಲು ಮತ್ತು ಆಸ್ಪತ್ರೆಯ ಸಮಯದಲ್ಲಿ ಕಡ್ಡಾಯವಾಗಿ ಲಭ್ಯವಿರಲು ಬಯೋಮೆಟ್ರಿಕ್ ಮತ್ತು ಜಿಪಿಎಸ್ ಆಧಾರಿತ ನಿಗಾ ವಹಿಸಲು ಸೂಚಿಸಲಾಯಿತು. ಸ್ಥಗಿತಗೊಂಡಿದ್ದ ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸೇವೆಗಳನ್ನು ಪುನರಾರಂಭಿಸಲಾಗಿದ್ದು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದAತೆ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಶಿಕ್ಷಣ ಇಲಾಖೆಯ ಕಾರ್ಯವೈಖರಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ಕುರಿತು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಡಿಡಿಪಿಐ ಅವರನ್ನು ಕಟುವಾಗಿ ಪ್ರಶ್ನಿಸಿದರು ಕಳೆದ ಕೆಲವು ವರ್ಷಗಳಲ್ಲಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಗಣನೀಯವಾಗಿ ಕುಸಿದಿರುವ ಬಗ್ಗೆ ಸಚಿವರು ಅಂಕಿಅಂಶಗಳ ಸಮೇತ ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಈ ಬಾರಿ ೧೦೦% ಫಲಿತಾಂಶ ತರುವುದಾಗಿ ಭರವಸೆ ನೀಡಿದಾಗ ಸಚಿವರು ಅದನ್ನು ಪ್ರಶ್ನಿಸಿದರು ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಕೇವಲ ೭೫% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸುಮಾರು ೪,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವಾಗ ೧೦೦% ಫಲಿತಾಂಶ ಹೇಗೆ ಸಾಧ್ಯ ಎಂದು ಸಚಿವರು ಪ್ರಶ್ನಿಸಿದರು.

ಖಾಸಗಿ ಮತ್ತು ಅನುದಾನಿತ ಶಾಲೆಗಳ ಫಲಿತಾಂಶದ ಜೊತೆಗೆ ಸರ್ಕಾರಿ ಶಾಲೆಗಳ ಫಲಿತಾಂಶವನ್ನು ಹೋಲಿಕೆ ಮಾಡಿ ನೋಡಿದಾಗ ವಾಸ್ತವ ಚಿತ್ರಣ ಬೇರೆಯೇ ಇದೆ ಎಂದು ಅವರು ಎಚ್ಚರಿಸಿದರು ಶಿಕ್ಷಕರ ಸಮಸ್ಯೆಗಳು ಮತ್ತು ಆಡಳಿತಾತ್ಮಕ ವೈಫಲ್
ಶಿಕ್ಷಕರ ಮೆಡಿಕಲ್ ಬಿಲ್‌ಗಳು, ಟಿಎ (ಖಿಂ) ಬಿಲ್‌ಗಳು ಮತ್ತು ಇತರ ಬಾಕಿ ಹಣವನ್ನು ಪಾವತಿಸುವಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆಯೂ ಡಿಡಿಪಿಐ ಅವರಿಗೆ ಸಚಿವರು ಎಚ್ಚರಿಕೆ ನೀಡಿದರು.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೇತ್ಗಾನಹಳ್ಳಿಯಲ್ಲಿ ರೈತರನ್ನು ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಎಂ. ಎಲ್. ಅನಿಲ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು.
ಹೈಕೋರ್ಟ್ ಆದೇಶವಿದ್ದರೂ ರೈತರಿಗೆ ಕೃಷಿ ಚಟುವಟಿಕೆಗೆ ಅವಕಾಶ ನೀಡದ ಅಧಿಕಾರಿಗಳ ವಿರುದ್ಧ ಸಚಿವರು ಕಿಡಿಕಾರಿದರು.
ರೈತರು ತಮಗೆ ಮಂಜೂರಾದ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಈ ಹಿಂದೆ ಅರಣ್ಯ ಇಲಾಖೆ ಅವರನ್ನು ತೆರವುಗೊಳಿಸಿತ್ತು. ಇದನ್ನು ಪ್ರಶ್ನಿಸಿ ರೈತರು ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯವು ರೈತರ ವಶದಲ್ಲಿರುವ ಭೂಮಿಗೆ ತೊಂದರೆ ನೀಡಬಾರದೆಂದು ಸ್ಪಷ್ಟ ಆದೇಶ ನೀಡಿದ್ದರಂ ಅಧಿಕಾರಿಗಳು ರೈತರಿಗೆ ಉಳುಮೆ ಮಾಡಲು ಬಿಡುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
ಅರಣ್ಯ ಅಧಿಕಾರಿಗಳ ಪ್ರಕಾರ ಇದು ಅರಣ್ಯ ಭೂಮಿಯಾಗಿದ್ದು, ಈಗಾಗಲೇ ಒತ್ತುವರಿ ತೆರವುಗೊಳಿಸಿ ಪ್ಲಾಂಟೇಶನ್ ಮಾಡಲಾಗಿದೆ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ರೈತರು ತಡೆಯಾಜ್ಞೆ ತಂದಿದ್ದಾರೆ ಮತ್ತು ತಾವು ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡರು.

ಸಭೆಯಲ್ಲಿದ್ದ ಸಚಿವರು ಅಧಿಕಾರಿಗಳ ವಾದವನ್ನು ತಳ್ಳಿಹಾಕಿದರು. “ನ್ಯಾಯಾಲಯದ ಆದೇಶ ಇರುವಾಗ ಅದನ್ನು ಪಾಲಿಸುವುದು ನಿಮ್ಮ ಕರ್ತವ್ಯ. ಮೇಲ್ಮನವಿ ಸಲ್ಲಿಸಿರುವುದು ಕೆಳಹಂತದ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದಂತಾಗುವುದಿಲ್ಲ,” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮೂರು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ರೈತರನ್ನು ಒಕ್ಕಲೆಬ್ಬಿಸಬಾರದು ಎಂಬ ಸರ್ಕಾರದ ನಿಯಮವಿದೆ. ಆದರೆ ಅಧಿಕಾರಿಗಳು ೧೮೦ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಮೆರವಣಿಗೆ ನಡೆಸಿ ರೈತರಲ್ಲಿ ಭಯ ಹುಟ್ಟಿಸಿದ್ದಾರೆ ಮತ್ತು ಅವರ ಟ್ರ‍್ಯಾಕ್ಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.

ತಹಶೀಲ್ದಾರ್ ಅವರು ಭೂಮಿಯ ದಾಖಲೆಗಳನ್ನು (ಪಹಣಿ ಮತ್ತು ಮ್ಯುಟೇಷನ್) ಪರಿಶೀಲಿಸಬೇಕು ಎಂದು ಸೂಚಿಸಲಾಯಿತು. “ಯಾರ ಹೆಸರಿನಲ್ಲಿ ಪಹಣಿ ಇದೆಯೋ ಅವರೇ ಮಾಲೀಕರು. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ರೈತರಿಗೆ ತೊಂದರೆ ನೀಡಬಾರದು,” ಎಂದು ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ಯಾವುದೇ ದಾಖಲೆಗಳಿಲ್ಲದ ೧೦,೦೦೦ ಪ್ರಕರಣಗಳನ್ನು ರದ್ದುಪಡಿಸಲು ಎ.ಸಿ ಅವರಿಗೆ ಸೂಚಿಸಲಾಗಿದೆ.
ನಂತರ ಸಚಿವರು ಮಾತನಾಡಿ ತಿಂಗಳ ೩೦ನೇ ತಾರೀಖಿನೊಳಗೆ ಎಲ್ಲಾ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಗುರಿಗಳನ್ನು ತಲುಪಬೇಕು. ವಿ.ಐ.ಪಿ ಪ್ರೋಟೋಕಾಲ್ ನೆಪದಲ್ಲಿ ಕಂದಾಯ ಕೆಲಸಗಳನ್ನು ವಿಳಂಬ ಮಾಡುವಂತಿಲ್ಲ ಎಂದು ಸಭೆಯಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಬೃಹತ್ ಕಾರ್ಯಕ್ರಮ ನಡೆಸಿ ರೈತರಿಗೆ ಹಕ್ಕುಪತ್ರ ಹಾಗೂ ಆರ್.ಟಿ.ಸಿ ವಿತರಿಸಲು ಯೋಜಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಸಂಘಟಿತ ಅಪರಾಧಗಳು, ಗಾಂಜಾ ಮಾರಾಟ ಮತ್ತು ಜೂಜಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಕಳೆದ ಏಳು ತಿಂಗಳಲ್ಲಿ ಸುಮಾರು ೧೭ ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ೧೩ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು ಮತ್ತು ಬಾಕಿ ಇರುವ ಕಡತಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಎಂದು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ಮದ್ಯ ಮಾರಾಟ ತಾಣಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಇದನ್ನು ಓದಿದ್ದೀರಾ..? ಟಮಕ ಡೇರಿ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ

ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೋಲಾರ ಶಾಸಕ ಡಾ. ಕೊತ್ತೂರು ಜಿ ಮಂಜುನಾಥ್, ಮಾಲೂರು ಶಾಸಕ ಕೆ. ವೈ ನಂಜೇಗೌಡ, ಕೆ. ಜಿ. ಎಫ್ ಶಾಸಕಿ ಡಾ.ರೂಪಕಲಾ ಶಶಿಧರ್, ವಿಧಾನ ಪರಿಷತ್ ಶಾಸಕರಾದ ಎಂ. ಎಲ್. ಅನಿಲ್ ಕುಮಾರ್, ಡಿ. ಟಿ. ಶ್ರೀನಿವಾಸ್, ಕೆಡಿಪಿ ನಾಮನಿರ್ದೇಶತ ಸದಸ್ಯರಾದ ಸೊಣ್ಣೆಗೌಡ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ. ಶಿವಾಕುಮಾರ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೆನಿ, ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಕೆ. ಜಿ ಎಫ್ ಪೊಲೀಸ್ ಅಧೀಕ್ಷಕ ಶಿವಂಷು ರಜಪೂತ, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸರಿನಾ ಸಿಕ್ಕಲಿಗರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ. ರಮೇಶ್ ಸೇರಿದಂತೆ ಎಲ್ಲಾ ತಹಸೀಲ್ದಾರ್, ಎಲ್ಲಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...