ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಶ್ರೀಕ್ಷೇತ್ರ ಪುಷ್ಪಗಿರಿ ಹಳೇಬೀಡು ಸಹಯೋಗದಲ್ಲಿ ಜನವರಿ 3 ರಿಂದ 6ರ ವರೆಗೆ ಪದ್ಮಶ್ರೀ ಡಾ. ಸುಭಾಷ್ ಪಾಳೇಕರ್ ರವರಿಂದ ‘ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ’ (ನೈಸರ್ಗಿಕ ಕೃಷಿ)ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿಯವರು ಮಾಹಿತಿ ನೀಡಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿ, ಕಾರ್ಯಾಗಾರ ಜನವರಿ. 3 ರಿಂದ 6ರ ವರೆಗೆ ಶ್ರೀಕ್ಷೇತ್ರ ಪುಷ್ಪಗಿರಿ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು, ಹಾಸನ ಜಿಲ್ಲೆಯಲ್ಲಿ ನಡೆಯಲಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ, ನೇಪಾಳದಿಂದಲೂ ಶಿಬಿರಕ್ಕೆ ಜನ ಬರುತಿದ್ದಾರೆ. ಜನವರಿ. 7ರಂದು ಹಾಸನ ಜಿಲ್ಲೆಯಲ್ಲಿರುವ ಶೂನ್ಯ ಬಂಡವಾಳ ಹೂಡಿಕೆಯ ತೋಟಗಳಿಗೆ ಶಿಬಿರಾರ್ಥಿಗಳನ್ನು ಸುಭಾಷ್ ಪಾಳೇಕಾರ್ ಅವರ ನೇತೃತ್ವದಲ್ಲಿ ಭೇಟಿ ನೀಡುವುದಿದೆ.
ಚನ್ನರಾಯಪಟ್ಟಣದ ಹರ್ಷವರ್ಧನ, ಅರೇಹಳ್ಳಿ ರಾಜೇಗೌಡ್ರು, ಹಳೇಬೀಡು ಗುರುಸ್ವಾಮಿ ಗೌಡ್ರು, ಕಡೂರು ಚಂದ್ರಶೇಖರ್ ಸೇರಿದಂತೆ ನಾಲ್ಕು ಪ್ರಮುಖ ಶೂನ್ಯ ಬಂಡವಾಳ ತೋಟಗಳಿಗೆ ಆಸಕ್ತಿ ಶಿಬಿರಾರ್ಥಿಗಳ ಜೊತೆ ಭೇಟಿ, ಸಂವಾದ ನಡೆಯಲಿದೆ. ತೋಟದ ನಿರ್ವಹಣೆ ಮಾಹಿತಿಯೊಡನೆ ಚರ್ಚೆ ನಡೆಯಲಿದೆ ಎಂದರು.
ಜನವರಿ.8ರಂದು ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ರೈತರಿಗೆ ಕಾರ್ಯಾಗಾರ ನಡೆಯಲಿದೆ. ಹಾವೇರಿ ಹಾಗೂ ಬೆಳಗಾವಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದ್ದು, ಈ ಬಗ್ಗೆ ಶಾಸನ ಸಭೆಯಲ್ಲಿ ವರದಿ ಸಹ ನೀಡಿದ್ದಾರೆ. ಇದರ ಮುಖ್ಯ ಉದ್ದೇಶ ರೈತರು ನೈಸರ್ಗಿಕ ಕೃಷಿಯಲ್ಲಿ ಒಣ ಬೇಸಾಯ. ಬಿತ್ತನೆ ಬೀಜದಿಂದ ಹಿಡಿದು ಮಾರುಕಟ್ಟೆಯವರೆಗೆ ಸ್ವಾವಲಂಬನೆ ಸಾಧಿಸುವುದು ಹೇಗೆ? ಎಂಬುದನ್ನು ಸರಿಸುಮಾರು ಒಂದು ಸಾವಿರ ರೈತರಿಗೆ ಮಾಹಿತಿ ನೀಡಲಿದ್ದಾರೆ ಎಂದರು.
ಜನವರಿ.9ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಕಾರ್ಯಗಾರ ನಡೆಯಲಿದೆ. ಕಬ್ಬನ್ನ ನೈಸರ್ಗಿಕ ಕೃಷಿಯಲ್ಲಿ ಬೆಳೆಯುವ ಮಾದರಿ, ಖರ್ಚನ್ನು ಕಡಿಮೆ ಮಾಡುವುದು, ಲಾಭಧಾಯಕವಾಗಿ ಮಾಡಿಕೊಳ್ಳುವ ವಿಧಾನ ಕುರಿತಾಗಿ ಕಾರ್ಯಾಗಾರ ನಡೆಯಲಿದೆ ಎಂದು ಹೇಳಿದರು.
ಶಿಬಿರಕ್ಕೆ ಹೊಸದಾಗಿ ವ್ಯವಸಾಯ ಆರಂಬಿಸಲು ಯೋಚಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರೈತರು ಸಹ ಆಸಕ್ತಿ ತೋರಬೇಕು. ತಮ್ಮ ಭೂಮಿಯನ್ನು ಕಾಪಾಡಿಕೊಳ್ಳಲು ಅವರ ಆಸಕ್ತಿಯು ಸಹ ಪ್ರಮುಖವಾದದ್ದು. ಮೊದಲನೇ ದಿನ ತಾತ್ವಿಕತೆಯ ಬಗ್ಗೆ ಮಾತನಾಡಲಿದ್ದಾರೆ, ನಂತರದ ದಿನಗಳಲ್ಲಿ ಮುಂದಿರುವ ಸವಾಲುಗಳು, ಜಾಗತಿಕ ತಾಪಮಾನ, ಬಿತ್ತನೆ ಬೀಜ ಕುರಿತಾಗಿ. ‘ಜ್ಞಾನ ಆಧಾರಿತ ಕೃಷಿಯೇ ಹೊರತು, ಗೊಬ್ಬರದ ಅಂಗಡಿ ಆಧಾರಿತ ಕೃಷಿಯಲ್ಲ’ ಎನ್ನುವುದನ್ನವು ಮನದಟ್ಟು ಮಾಡಲಿದ್ದಾರೆ.
ರಾಸಾಯನಿಕ ಮುಕ್ತವಾಗಿ, ಹೊರಗಿನಿಂದ ಏನನ್ನು ತರದೆ, ಬಿತ್ತನೆ ಬೀಜದಿಂದ ಹಿಡಿದು ಸಂಪೂರ್ಣ ಸ್ವಾವಲಂಬನೆ ಕೃಷಿ ಮಾಡುವುದರ ಕುರಿತಾಗಿಯೇ ನಾಲ್ಕು ದಿನದ ಕಾರ್ಯಾಗಾರ ನಡೆಯಲಿದೆ. ಬೇಲೂರು, ಹಳೆಬೀಡು ಸುತ್ತಮುತ್ತಲಿನಲ್ಲಿ ತರಕಾರಿ ಬೆಳೆಗಾರರಿದ್ದು, ಈ ಕಾರ್ಯಾಗಾರ ಸದುಪಯೋಗ ಪಡಿಸಿಕೊಳ್ಳಬೇಕು. ಈ ಕುರುತಾಗಿಯೂ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರಿಗೆ ವೇಗ, ಒತ್ತಡದ ಬೆಳವಣಿಗೆ ಬೇಡ: ಪ್ರೊ ಎಂ ಕೃಷ್ಣೆಗೌಡ
ಕಾರ್ಯಾಗಾರದಲ್ಲಿ ರಾಜ್ಯ ಅಧ್ಯಕ್ಷಿಯ ಮಂಡಳಿಯ ಸದಸ್ಯರಾದ ಪ್ರೊ. ರವಿವರ್ಮಕುಮಾರ್, ಶಿವಮೊಗ್ಗದಿಂದ ಕೆ.ಟಿ. ಗಂಗಾಧರ್, ಅನುಸೂಯಮ್ಮ, ಹಾಸನದ ಗ್ಯಾರೆಂಟಿ ರಾಮಣ್ಣ, ಹಾವೇರಿ ಜಿಲ್ಲೆಯ ರಾಮಣ್ಣ ಕೆಂಚಳ್ಳಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.





