ಕಾರ್ಮಿಕ ಅಧಿಕಾರಿಗಳು ಕಾಲಾಕಾಲಕ್ಕೆ ನಿರ್ಮಾಣ ಮತ್ತು ಇತರ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಬೇಕು. ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡಿಸದೆ ಸಮಯಕ್ಕೆ ತಕ್ಕ ಊಟ-ಉಪಚಾರ, ಕುಡಿಯುವ ನೀರಿನ ವ್ಯವಸ್ಥೆ ಪ್ರಥಮ ಚಿಕಿತ್ಸೆಗೆ ಬೇಕಾಗುವ ಸವಲತ್ತುಗಳನ್ನು ಪೂರೈಸಬೇಕು ಎಂದು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಹೇಳಿದರು.
ಸುಳ್ಯದ ಸಂಪಾಜೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಮತ್ತು ಮಂಗಳೂರು ವಿಭಾಗದ ವತಿಯಿಂದ ನಡೆದ ಕಾರ್ಮಿಕರ ಸೌಲಭ್ಯಗಳ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
“ಕಾರ್ಮಿಕರು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ತಲೆಗೆ ಹೆಲ್ಮೆಟ್, ಕಾಲಿಗೆ ಸುರಕ್ಷತಾ ಶೂ ಧರಿಸುವುದು ಅಗತ್ಯ. ಕೆಲಸದ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ಪ್ರಥಮ ಚಿಕಿತ್ಸೆ ಪಡೆದು ಅಗತ್ಯವಿದ್ದಲ್ಲಿ ಕಾರ್ಮಿಕ ಇಲಾಖೆಗೆ ತಿಳಿಸಿ ಸರಕಾರದಿಂದ ದೊರೆಯುವ ಪರಿಹಾರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸರಕಾರ ನೀಡುತ್ತಿರುವ ಸಹಾಯಧನ, ವಿದ್ಯಾರ್ಥಿ ವೇತನ ಹಾಗೂ ಅಪಘಾತ ಸೌಲಭ್ಯಗಳ ಬಗ್ಗೆ ಇಲಾಖೆಯಿಂದ ಮಾಹಿತಿ ಪಡೆದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ದಕ್ಷಿಣ ಕನ್ನಡ | ನಿಯಂತ್ರಣ ತಪ್ಪಿ ಸರ್ಕಲ್‌ಗೆ ಡಿಕ್ಕಿ ಹೊಡೆದ ಕಾರು; ಮೂವರು ಸಾವು
“ರಾಜ್ಯದಲ್ಲಿ ಸುಮಾರು 134 ವಲಯಗಳ 2.5 ಕೋಟಿ ಕಾರ್ಮಿಕರಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾರ್ಮಿಕರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು ಸರಕಾರ ಕಾರ್ಮಿಕ ಹಿತಾಶಕ್ತಿಗೆ ಪೂರಕವಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ನಾರಾಯಣ ಕಿಳಂಗೋಡಿ, ರಿಯಾಸ್ ಉಳ್ಳಾಲ, ಕಾರ್ಮಿಕ ಅಧಿಕಾರಿ ಗಣಪತಿ ಹೆಗ್ಡೆ ಹಾಗೂ ಕಾರ್ಮಿಕ ಮುಖಂಡ ಶ್ರೀಧರ್ ಕಡೆಪಾಲ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಹಾಗೂ ಇತರರು ಉಪಸ್ಥಿತರಿದ್ದರು.





