ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ಟರ್, ಸರಕಾರಿ ಸ್ವಾಮ್ಯದ ಸ್ಥಳಗಳಲ್ಲಿ ಹಾಗೂ ಸರಕಾರದ ಅಧೀನ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಿಷೇಧಿಸಬೇಕೆಂದು ಬಿ.ಕೆ. ಹರಿಪ್ರಸಾದ್ ಮತ್ತು ಪ್ರಿಯಾಂಕ ಖರ್ಗೆ ಅವರ ಪ್ರತಿಪಾದನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯ ನೀಡಿರುವ ಅವರು, ಒಂದು ನೊಂದಣಿಯೇ ಆಗದ ಸಂಘಟನೆಯಾದ ಆರ್‌ಎಸ್‌ಎಸ್‌ನ ಭಯೋತ್ಪಾದಕ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂಬುದು ಈ ದೇಶದ ಪ್ರಜಾಪ್ರಭುತ್ವವಾದಿಗಳ ಧ್ವನಿ. ಸಂವಿಧಾನ ವಿರೋಧಿ, ರಾಷ್ಟ್ರಧ್ವಜ ವಿರೋಧಿ ಹಾಗೂ ಸಮಾನತೆ ವಿರೋಧಿ ಸಂಘಟನೆಯಾದ ಆರ್‌ಎಸ್‌ಎಸ್‌ಗೆ ಬೆಂಗಳೂರಿನ ಮುಖ್ಯರಸ್ತೆಗಳಲ್ಲಿ ಲಾಠಿ ಹಿಡಿದು ಪಥಸಂಚಲನ ಮಾಡಲು ಅನುಮತಿ ನೀಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಖಂಡಿಸಿದ್ದಾರೆ.
ನೂರು ವರ್ಷ ತುಂಬಿದ ಆರ್‌ಎಸ್‌ಎಸ್ ಈ ಪ್ರಜಾಪ್ರಭುತ್ವ ದೇಶದಿಗಾಗಿ ಮಾಡಿದ ಯಾವುದೇ ಘನಾಂದಾರಿ ಕೆಲಸದ ದಾಖಲೆ ಇಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಒಬ್ಬರೂ ಆರ್‌ಎಸ್‌ಎಸ್ ಧುರೀಣ ಬಲಿದಾನ ಮಾಡಿದ ಉದಾಹರಣೆ ಇಲ್ಲ. ಬ್ರಿಟಿಷರ ಪರವಾಗಿ ಕೆಲಸ ಮಾಡುವ ತಪ್ಪೋಪ್ಪಿಗೆ ಪತ್ರ ಬರೆದ ಸಂಘಟನೆಯವರು ಇಂದು ದೇಶಭಕ್ತಿಯ ಪಾಠ ಬೋಧಿಸುತ್ತಿರುವುದು ವಿಪರ್ಯಾಸವಾಗಿದೆ ಎಂದು ಅವರು ಹೇಳಿದರು.
ಆರ್‌ಎಸ್‌ಎಸ್‌ನ ನೂರು ವರ್ಷಗಳ ಸಾಧನೆ ಎಂದರೆ ಚಡ್ಡಿಯಿಂದ ಪ್ಯಾಂಟಿಗೆ ಬಂದ ಅಭಿವೃದ್ದಿ ಮಾತ್ರ. ಸನಾತನ ಧರ್ಮದ ಹೆಸರಿನಲ್ಲಿ ಅಸಮಾನತೆಯನ್ನು ಬೆಳೆಸುವ, ಚಾತುರ್ವರ್ಣ ವ್ಯವಸ್ಥೆಯನ್ನು ಪೋಷಿಸುವ ಆರ್‌ಎಸ್‌ಎಸ್, ಸಮಾಜದ ಶೂದ್ರ ವರ್ಗದ ಕೈಯಿಂದಲೇ ತಮ್ಮ ಬ್ರಾಹ್ಮಣ್ಯವನ್ನು ಬಲಪಡಿಸುತ್ತಿದೆ. ಇದರ ಅರಿವು ಜನತೆ ಹೊಂದಬೇಕು.
ಬಿಜೆಪಿ ಸರ್ಕಾರದ ಮೂಲಕ ತಮ್ಮ ಅಜೆಂಡಾಗಳನ್ನು ಜಾರಿಗೊಳಿಸುತ್ತಿರುವ ಆರ್‌ಎಸ್‌ಎಸ್ ತೆರೆಯ ಹಿಂದೆ ನಿಂತು ರಾಜಕೀಯವನ್ನು ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ ಅವರು, ಡಿ.ಎಸ್.ಎಸ್.ಗೆ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡುವ ಈ ಸರಕಾರ, ಆರ್‌ಎಸ್‌ಎಸ್‌ಗೆ ಮುಖ್ಯರಸ್ತೆಗಳಲ್ಲಿ ಲಾಠಿ ಹಿಡಿದು ಮೆರವಣಿಗೆ ನಡೆಸಲು ಅವಕಾಶ ನೀಡುವುದರಿಂದ ಸನಾತನ ಪರ ನಿಲುವು ತೋರಿಸಿದೆ ಎಂದು ಹೇಳಿದರು.





