ಮದುವೆಯಾಗುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಪ್ರದೀಪ್ ಪೂಜಾರಿ (26) ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ಯುವತಿಯೊಬ್ಬಳನ್ನು ನಿರ್ಜನ ಪ್ರದೇಶದಲ್ಲಿ ಬೆದರಿಸಿ ಅತ್ಯಾಚಾರ ಎಸಗಿದ ಬಗ್ಗೆ ವರದಿಯಾಗಿದೆ. ಮೊದಲೇ ಕಿರುಕುಳ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯು ಮತ್ತೆ ಕುಕೃತ್ಯಕ್ಕೆ ಮುಂದಾಗಿದ್ದಾನೆ.
ನ.29ರಂದು ಈ ಘಟನೆ ನಡೆದಿದ್ದು ನಂತರದಲ್ಲಿ ಯುವತಿ ಮನೆಯವರಿಗೆ ಮಾಹಿತಿ ನೀಡಿದ್ದಳು. ಕುಟುಂಬದವರು ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸಂಘಪರಿವಾರದ ಕಾರ್ಯಕರ್ತರಿಂದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ — CPI(M)
ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಉಭಯ ಜಿಲ್ಲೆಗಳ ಸಂಘ ಪರಿವಾರದ ಕಾರ್ಯಕರ್ತರು ನಿರಂತರವಾಗಿ ಜಿಲ್ಲೆಯ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅತ್ಯಾಚಾರ ಮಾಡುತ್ತಿದ್ದ ಸುದ್ಧಿಗಳು ಜಿಲ್ಲೆಯ ಜನತೆಯನ್ನು ಆತಂಕಕ್ಕೆ ಒಳಗಾಗಿಸಿದೆ ಇದನ್ನು ಎಲ್ಲಾ ಪ್ರಜ್ಞಾವಂತರು ವಿರೋಧಿಸಬೇಕು. ಸಂಘಪರಿವಾರದ ಕಾರ್ಯಕರ್ತರಿಗೆ ಮನುಸ್ಮೃತಿಯ ವಿಚಾರಧಾರೆಯ ಪಾಠ ಹೇಳಿಕೊಡುತ್ತಿರುವುದರಿಂದಲೇ ಹೆಣ್ಣು ಮಕ್ಕಳನ್ನು ತುಚ್ಚವಾಗಿ ಎರಡನೇ ದರ್ಜೆಯ ಪ್ರಜೆಯಾಗಿ ನೋಡುತ್ತಿರುವ ಪರಿಣಾಮವೇ ಈ ಕೃತ್ಯಕ್ಕೆ ಕಾರಣ. ಸಂಘಪರಿವಾರದ ಸಂಘಟನೆಗಳಿಂದ ಹೆಣ್ಣು ಮಕ್ಕಳು ಹಾಗೂ ಯುವಜನರು ಅಂತರ ಕಾಪಾಡಿಕೊಳ್ಳಬೇಕು ಹಾಗೂ ಮಹಿಳಾ ವಿರೋಧಿಯಾದ ಈ ಸಂಘಟನೆಗಳನ್ನು ವಿರೋಧಿಸಬೇಕು. ಆರೋಪಿಗೆ ಕಠಿಣ ಶಿಕ್ಷೆ ನೀಡಲೇಬೇಕು ಎಂದು ಆಗ್ರಹಿಸಿದರು.
ಅಪರಾಧಿಯ ಧರ್ಮ ನೋಡಿ ಮೌನವಾಗಬೇಡಿ – WIM
ಈ ಬಗ್ಗೆ ವಿಮೆನ್ ಇಂಡಿಯಾ ಮೂವ್ಮೆಂಟ್‌ನ ಉಡುಪಿ ಜಿಲ್ಲಾ ಅಧ್ಯಕ್ಷೆ ನಾಝಿಯಾ ನಸ್ರುಲ್ಲಾ ಪ್ರತಿಕ್ರಿಯಿಸಿದ್ದು, ಇತ್ತೀಚೆಗೆ ಅವಳಿ ಜಿಲ್ಲೆಗಳಲ್ಲಿ ಸ್ವಯಂ ಧರ್ಮ ರಕ್ಷಕರೆಂದು ಕರೆಸಿಕೊಳ್ಳುವವರಿಂದ ಇಂತಹ ಪ್ರಕರಣಗಳು ಜಾಸ್ತಿಯಾಗಿ ನಡೆಯುತ್ತಿದ್ದು, ಕಳೆದ ತಿಂಗಳು ಮದುವೆಯಾಗುವುದಾಗಿ ನಂಬಿಸಿ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಮಣಿಪಾಲದ ಲಾಡ್ಜ್ ಗೆ ಕರೆದು ಸಿಕ್ಕಿಬಿದ್ದ ಘಟನೆಯು ನಡೆದಿತ್ತು. ಪೆರ್ಡೂರಿನಲ್ಲಿ ನಡೆದ ಘಟನೆಯಲ್ಲಿ ಒಂದು ವೇಳೆ ಆರೋಪಿಯು ಅನ್ಯ ಕೋವಿನವನಾಗಿದ್ದರೆ ಇಲ್ಲಿಯ ಶಾಸಕರ ಹಾಗೂ ಹಿಂದೂ ಧರ್ಮದ ರಕ್ಷಕರೆಣಿಸಿಕೊಂಡವರ ಆಕ್ರೋಶ, ಪ್ರತಿಭಟನೆ ಮುಗಿಲು ಮುಟ್ಟುತ್ತಿತ್ತು. ಆದರೆ ಆರೋಪಿಯು ತಮ್ಮದೇ ಸಂಘಟನೆಯವನಾಗಿರುವುದರಿಂದ ಸಂತ್ರಸ್ತೆಯ ನೋವು ಇವರಿಗೆ ಕಾಣಿಸುತ್ತಿಲ್ಲ. ಇಂತಹ ಅಪರಾಧ ಪ್ರಕರಣಗಳಳ್ಳೂ ಕೃತ್ಯ ಎಸಗಿದವನು ತಮ್ಮ ಧರ್ಮದವನು ಎಂದು ತಿಳಿದು ಸುಮ್ಮನಿರುವ ಪ್ರವೃತ್ತಿ ನಿಜಕ್ಕೂ ಕಳವಳಕಾರಿ. ಇದು ಅಪರಾಧಿಗಳಿಗೆ ಕುಮ್ಮಕ್ಕು ನೀಡುತ್ತದೆ. ಆದ್ದರಿಂದ ನಾಗರಿಕ ಸಮಾಜ ಇವರ ನಕಲಿ ಧರ್ಮ ಪ್ರೇಮವನ್ನು ಅರ್ಥಮಾಡಿಕೊಳ್ಳಬೇಕು, ಹಾಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಒಟ್ಟಾಗಿ ಹೋರಾಟವನ್ನು ನಡೆಸುವ ಮೂಲಕ ಇಂತಹ ಪ್ರಕರಣಗಳು ಮರುಕಳಿಸಿದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.





