ದೇಶದಲ್ಲಿ ಡಾಲರ್ ಮೌಲ್ಯ 90ಕ್ಕೂ ಮೇಲಾಗಿರುವುದು ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಇದನ್ನು ಮರೆಮಾಚಿಸಲು ಕೇಂದ್ರ ಸರ್ಕಾರ ವಿವಿಧ ವಿಷಯಗಳನ್ನು ಜನರ ಗಮನಕ್ಕೆ ತರುವ ಪ್ರಯತ್ನ ನಡೆಸುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರು ಹಾಗೂ ಉಡುಪಿ ನಗರಸಭಾ ಸದಸ್ಯರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸ್ತುತ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಿ, “ಯುಪಿಎ ಆಡಳಿತಾವಧಿಯಲ್ಲಿ ಡಾಲರ್ ಬೆಲೆ ಏರಿಕೆಯ ವಿಷಯದಲ್ಲಿ ತೀವ್ರ ಟೀಕೆ ಮಾಡಿದ್ದ ಅದೇ ನರೇಂದ್ರ ಮೋದಿಯವರು ಈಗ ಅಧಿಕಾರದಲ್ಲಿರುವಾಗ ಡಾಲರ್ ಮೌಲ್ಯ 90 ದಾಟಿದೆ. ಆಗ ಡಾಲರ್ ಮೌಲ್ಯವನ್ನು 30ಕ್ಕೆ ಇಳಿಸುತ್ತೇನೆ ಎಂದು ಬುರುಡೆ ಬಿಟ್ಟವರು ಇಂದು ಏಕೆ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡುವುದಿಲ್ಲ?” ಎಂದು ಪ್ರಶ್ನಿಸಿದ್ದಾರೆ.
ಇಂಡಿಗೋ ವಿಮಾನಯಾನ ಸಂಸ್ಥೆಯು ವಿಮಾನಯಾನಗಳನ್ನು ಅಚಾನಕ್ ರದ್ದುಗೊಳಿಸಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ ಘಟನೆ ಕೂಡ ಸಂಶಯಾಸ್ಪದವಾಗಿದೆ ಎಂದು ಅವರು ಆರೋಪಿಸಿದರು. “ಜನರ ಗಮನವನ್ನು ಆರ್ಥಿಕ ಸಮಸ್ಯೆಯಿಂದ ಬೇರೆಡೆಗೆ ತಿರುಗಿಸಲು ಕೇಂದ್ರ ಸರ್ಕಾರವೇ ಈ ರೀತಿಯ ಗೊಂದಲಗಳನ್ನು ಸೃಷ್ಟಿಸುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇಂಡಿಗೋ ಸಂಸ್ಥೆ ಬಿಜೆಪಿ ಪಕ್ಷಕ್ಕೆ ನೀಡಿರುವ ದೇಣಿಗೆಯ ಮೊತ್ತವನ್ನು ಕೂಡಾ ಬಹಿರಂಗಪಡಿಸಲು ಸುರೇಶ್ ಶೆಟ್ಟಿ ಆಗ್ರಹಿಸಿದರು. “ಜನಸಾಮಾನ್ಯರ ಸಮಸ್ಯೆಗಳಿಗೆ ಕಿವಿಗೊಡದೆ, ತಮ್ಮ ಸ್ವಾರ್ಥಕ್ಕಾಗಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರಿಂದ ದೇಶ ದುಸ್ಥಿತಿಗೆ ತಲುಪಿದೆ. ಮತ ಕಳ್ಳತನ ಮಾಡಿ ನಡೆಸುತ್ತಿರುವ ಆಡಳಿತ ದೇಶದ ದುರದೃಷ್ಟ,” ಎಂದು ಕಿಡಿಕಾರಿದ್ದಾರೆ.





