ಕೊಡಗು ಜಿಲ್ಲೆ, ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಎನ್ಎಸ್ಎಸ್ ಘಟಕ, ಸಮಾಜ ಸಂಘ, ವಿದ್ಯಾರ್ಥಿ ಸಂಘ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸ್ಥಳೀಯ ಸಂಸ್ಥೆ ಹಾಗೂ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ ‘ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನ-2026’ನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ‘ಸ್ವಾಮಿ ವಿವೇಕಾನಂದರ ಬದುಕು ಮತ್ತು ದೂರದೃಷ್ಠಿ, ವ್ಯಕ್ತಿತ್ವ’ ಕುರಿತು ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ‘ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಜನಾಂಗಕ್ಕೆ ಸ್ಫೂರ್ತಿ’ ಎಂದರು.
ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಉದಾತ್ತ ವ್ಯಕ್ತಿತ್ವ, ಜೀವನ ಕ್ರಮ, ದೂರದೃಷ್ಠಿ ಹಾಗೂ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು, ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರದ ಸಮಗ್ರತೆ ಹಾಗೂ ಏಕತೆಯನ್ನು ಎತ್ತಿ ಹಿಡಿಯಬೇಕು. ವಿವೇಕಾನಂದರ ಜೀವನ, ಚರಿತ್ರೆ, ಬದುಕು ಹಾಗೂ ಸಾಧನೆಯು ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿಯನ್ನು ಮೆರೆದಿದೆ ಎಂದು ಹೇಳಿದರು.
ಸಮಾಜ ವಿಜ್ಞಾನ ಶಿಕ್ಷಕಿ ಎಸ್.ಎಂ. ಗೀತಾ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಜನತೆಗೆ ನೀಡಿದ ಕರೆ ‘ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬುದು ಸರ್ವಕಾಲಕ್ಕೂ ನೆನೆಯುವ, ಯುವಕರನ್ನು ಉತ್ತಮ ಕೆಲಸಗಳಿಗೆ ತೊಡಗಿಸಲು, ಬಡಿದೆಚ್ಚರಿಸುವ ವಾಕ್ಯವಾಗಿದೆ. ಹೀಗೆ, ಅವರ ಇಂತಹ ಹಲವು ಕೊಡುಗೆಗಳು ಸ್ಮರಣಾರ್ಥ. ಕೊಡುಗೆ, ಸೇವೆಗಳ ನೆನಪಿಗಾಗಿ, ಯುವ ಜನಾಂಗ ಸದಾ ಸ್ಫೂರ್ತಿಯಾಗಿರಲು ಅವರ ಜನ್ಮ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಣೆ ಮಾಡಲಾಗುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಿದ್ಯಾರ್ಥಿಗಳು ಪೋಷಕರ ಬೆಂಬಲ ಮನಗಾಣಿ: ಆಯುಕ್ತ ಶೇಕ್ ತನ್ವಿರ್ ಆಸೀಫ್
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಬಿ.ಎನ್. ಸುಜಾತ, ಬಿ.ಡಿ. ರಮ್ಯ, ಅನ್ಸಿಲಾ ರೇಖಾ, ಕೆ.ಟಿ. ಸೌಮ್ಯ, ಕಛೇರಿ ಸಿಬ್ಬಂದಿ ಎಂ. ಉಷಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.





