ಕಚೇರಿ ಒಳ ಪ್ರವೇಶಿಸುತ್ತಿದ್ದಂತೆ ಶಿಥಿಲವಾದ ಚಾವಣಿ, ಕಚೇರಿಗೊಂದು ಕಬ್ಬಿಣದ ಬಾಗಿಲು. ಅದರ ಮುಂಭಾಗವೇ ಕಸದ ರಾಶಿ, ಮೂಲೆಗಳಲ್ಲಿ ಗುಟ್ಕಾ, ಗಬ್ಬುನಾತ, ಗೋಡೆಗಳ ಮೇಲೆ ಎದ್ದು ಕಾಣುವ ಎಲೆ ಅಡಿಕೆ ತಿಂದು ಉಗುಳಿರುವ ಕೆಂಪು ಬಣ್ಣ. ಇದು ಕೊಪ್ಪಳ ಜಿಲ್ಲೆಯ ತಹಶೀಲ್ದಾರ್ ಕಚೇರಿಯೊಂದರ ಚಿತ್ರಣ.
ಕೊಪ್ಪಳದ ಯಲಬುರ್ಗಾ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಕಟ್ಟಡವೇನೋ ದೊಡ್ಡದಿದೆ. ಆದರೆ, ಕಟ್ಟಡ ತೀರಾ ಹಳೆಯದಾಗಿದೆ. ಯಾವಾಗ ಯಾವ ಗೋಡೆ, ಚಾವಣಿ, ಸಿಬ್ಬಂದಿ ಅಥವಾ ಸಾರ್ವಜನಿಕರ ಮೇಲೆ ಬೀಳುತ್ತದೆಯೋ ಎಂದು ನಿತ್ಯ ಆತಂಕದಲ್ಲೇ ಓಡಾಡುವಂತಾಗಿದೆ. ಸಿಬ್ಬಂದಿಗೆ ಕುಡಿಯುವ ನಿರಿನ ವ್ಯವಸ್ಥೆ ಇಲ್ಲ. ಕನಿಷ್ಠ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಬಾಗಿಲು ಮುರಿದು ಹೋಗಿವೆ. ಕಾಲಿಡಲು ವಾಕರಿಕೆಯಾಗುವಷ್ಟು ದುರ್ನಾತದಿಂದ ನಾರುತ್ತಿದೆ. ಇದು ಸಾರ್ವಜನಿಕರ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ.
ಕಂದಾಯ ಹಾಗೂ ವಿವಿಧ ಇಲಾಖೆಯ ಮಹಿಳಾ ಸಿಬ್ಬಂದಿಗೆ, ಹೊರಗಿನಿಂದ ಬರುವ ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ಬಹುಮುಖ್ಯವಾಗಿ ಶೌಚಾಲಯದ ಅಗತ್ಯವಿದೆ. ಆದರೆ, ಕೊಠಡಿಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಮಾಡಿಕೊಂಡಿರುವ ಅಧಿಕಾರಿಗಳು ಜನರಿಗೆ ಬೇಕಾದ ಸೌಲಭ್ಯ ಒದಗಿಸಲು ಒಲವು ತೋರುತ್ತಿಲ್ಲ. ಶೌಚಾಲಯ ಇದ್ದರೂ ಇಲ್ಲದಂತೆ ಇದ್ದು ಕೆಟ್ಟ ನಾತದಿಂದ ಬೇಸತ್ತ ಜನ ತಹಶೀಲ್ದಾರರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಪ್ರತಿದಿನ ರೈತರು ಅಗ್ರಿಮೆಂಟ್ ಆಫ್ ಸೇಲ್, ಸೇಲ್ ಡೀಡ್, ಮಾರ್ಟ್‌ಗೇಜ್ ಸೇರಿದಂತೆ ಇತರ ಕೆಲಸಗಳಿಗಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸುತ್ತಾರೆ. ಆಸ್ತಿ ನೋಂದಣಿ ಒಳಗೊಂಡಂತೆ ಇತರ ಕಾರ್ಯಗಳಿಗಾಗಿ ಬೆಳಿಗ್ಗೆಯೇ ಕಚೇರಿಗೆ ಬರುವ ಸಾರ್ವಜನಿಕರಿಗೆ ಹಾಗೂ ಹಳ್ಳಿಯಿಂದ ಬರುವ ರೈತರಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಯಾವ ಮೂಲಸೌಕರ್ಯವೂ ಇಲ್ಲ.



ಕಚೇರಿಯಲ್ಲಿ ಹೆಸರಿಗೆ ಎರಡು ಶೌಚಾಲಯಗಳಿವೆ. ಆದರೆ ಮಹಿಳಾ ಸಿಬ್ಬಂದಿಗಳೂ ಪುರುಷರ ಶೌಚಾಲಯವನ್ನೇ ಬಳಸುವಂತ ಪರಿಸ್ಥಿತಿ ಇದೆ. ಕೆಲವು ಬಾರಿ ಅನಿವಾರ್ಯವಾಗಿ ಮಾಳಿಗೆ ಮೇಲೆ ಹೋಗಿ ಮೂತ್ರ ವಿಸರ್ಜಿಸಬೇಕಾದ ಸಂದರ್ಭಗಳೂ ಸೃಷ್ಟಿಯಾಗುತ್ತವೆ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳಾ ಸಿಬ್ಬಂದಿಯೊಬ್ಬರು ತಮ್ಮ ಅಸಹಾಯಕತೆ ಹೇಳಿಕೊಂಡರು. ಪುರುಷ ಶೌಚಾಲಯದಲ್ಲಿ ಪ್ಲಾಸ್ಟಿಕ್ ಹಾಳೆ, ನೀರಿನ ಬಾಟಲ್, ಸಾರಾಯಿ ಪ್ಯಾಕೆಟ್ ತುಂಬಿದ್ದು, ವಾಂತಿಯಾಗುವಷ್ಟು ನಾರುತ್ತಿದೆಯಂತೆ.
ತಹಶೀಲ್ದಾರ್ ಕಚೇರಿ ಬಲ ಭಾಗದಲ್ಲಿ ಸ್ವಚ್ಛತೆ ಇಲ್ಲದೆ ಪಾರ್ಥೇನಿಯಂನಂತ ಕಸ-ಕಳೆ ಬೆಳೆದು ನಿಂತಿದೆ. ನಾಷ್ಟಾ ಮಾಡಲು ತಂದ ಹಾಳೆ, ಪ್ಲಾಸ್ಟಿಕ್, ಎಲ್ಲೆಂದರಲ್ಲಿ ಎಸೆದಿರುವ ಕಸದ ರಾಶಿಯೇ ಕಾಣಿಸುತ್ತಿದ್ದು, ಸ್ವಚ್ಛತೆ ಇಲ್ಲದೆ ಇಡೀ ಕಚೇರಿ ಆವರಣ ಗಬ್ಬೆದ್ದಿದೆ. ತಾಲೂಕು ದಂಡಾಧಿಕಾರಿ ತಹಶಿಲ್ದಾರ ಇದು ಕಂಡೂ ಕಣ್ಮುಚ್ಚಿ ಕುಳಿತಿದ್ದಾರೆಯೇ? ಎಂದು ಕಛೇರಿಗೆ ಬರುವ ಜನರು ಮಾತಾಡುತ್ತಿದ್ದಾರೆ. ವಾಹನ ನಿಲುಗಡೆಯಲ್ಲೂ ಸರಿಯಾದ ವ್ಯವಸ್ಥೆಯಿಲ್ಲ. ವಿಶಾಲ ಜಾಗವಿದ್ದರೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿಕೊಂಡಿರುತ್ತಾರೆ. ಇಷ್ಟು ಅವ್ಯವಸ್ಥೆ ಕಂಡುಬಂದರೂ ಅಧಿಕಾರಿಗಳು ತುಟಿಬಿಚ್ಚಲ್ಲ ಎನ್ನುವುದು ಸಾರ್ವಜನಿಕರ ಆರೋಪ.



ಈ ಕುರಿತು ಈದಿನ.ಕಾಮ್ ನೊಂದಿಗೆ ಜಿಲ್ಲಾ ಭೀಮ್ ಆರ್ಮಿ ಸಂಘಟನೆಯ ಸಂಚಾಲಕ ಕಾಶಪ್ಪ ಛಲವಾದಿ ಮಾತನಾಡಿ, “ತಹಶೀಲ್ದಾರ ಕಚೇರಿಯು ತಾಲೂಕು ಆಡಳಿತದ ಮುಖ್ಯ ಶಕ್ತಿ ಕೇಂದ್ರ. ಇಲ್ಲಿಯೇ ಸಿಬ್ಬಂದಿಗಳು, ಸಾರ್ವಜನಿಕರು ಮೂಲಸೌಕರ್ಯಗಳ ಕೊರತೆ ಅನುಭವಿಸುತ್ತಿದ್ದಾರೆ; ಇನ್ನು ಬೇರೆಡೆ ಇಂತಹ ಸಮಸ್ಯೆಗಳನ್ನು ಅಧಿಕಾರಿಗಳು ಹೇಗೆ ಆಲಿಸುತ್ತಾರೆ? ಹಾಗೂ ಆ ಸಮಸ್ಯೆಗಳನ್ನು ನಿಜಕ್ಕೂ ಪರಿಹರಿಸುತ್ತಾರೆಯೇ? ಎನಿಸುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯರಾದ ನಿಂಗು ಬೆಣಕಲ್ ಮಾತನಾಡಿ, “ತಹಶೀಲ್ದಾರ ಕಚೇರಿಯ ಮೂಲಭೂತ ಸೌಕರ್ಯಗಳ ಕುರಿತು ಹಲವಾರು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಿದೆ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಆದರೆ, ಇಲ್ಲಿಯವರೆಗೂ ಈ ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸುವಂತ ಕಾರ್ಯ ಆಗದೇ ಇರುವುದು ದುರಂತ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಸ್ತಿ ವಿಚಾರವಾಗಿ ಅಧಿಕಾರಿಗಳ ಭೆಟ್ಟಿಗೆ ಬಂದಿದ್ದ ರೈತ ಭೀಮಣ್ಣ ಮಾತನಾಡಿ, “ನನಗೀಗ 63 ವರ್ಷ. ಆಸ್ತಿ ವಿಚಾರವಾಗಿ ಕೆಲ ವರ್ಷಗಳಿಂದ ತಹಶೀಲ್ದಾರ್ ಆಫೀಸಿಗೆ ಭೇಟಿ ನೀಡುತ್ತಲೇ ಇದ್ದೇನೆ. ಕಚೇರಿಯ ಮಾತ್ರ ಇಷ್ಟು ದೊಡ್ಡದಾಗಿದೆ. ಆದರೆ, ಒಳಗಿರುವ ವ್ಯವಸ್ಥೆ ಸ್ವಲ್ಪವೂ ಸರಿಯಾಗಿಲ್ಲ. ನಾನು ಬಂದ ಮೊದಲ ದಿನ ಹೇಗಿತ್ತೋ, ಕಚೇರಿ ಈಗಲೂ ಹಾಗೇ ಇದೆ. ಹೊಸದಾಗಿ ಬಂದವರಿಗೆ ಇದು ನಿಜವಾಗಿಯೂ ಸರ್ಕಾರಿ ಕಚೇರಿಯೇನಾ? ಎನ್ನುವ ಅನುಮಾನ ಬಂದುಬಿಡುತ್ತದೆ. ನಾನು ಮುಂಜಾನೆಯೇ ಮನೆಯಿಂದ ಹೊರಟು ಬಂದಿರುತ್ತೇನೆ. ಇಲ್ಲಿ ಬಂದಾಗ ಕುಡಿಯುವ ನೀರಿಗಾಗಿ ಅಲೆಯಬೇಕು. ಶೌಚಕ್ಕೆ ಹೋಗುವುದು ದೂರದ ಮಾತು. ಅಧಿಕಾರಿಗಳೂ ಹೀಗೇ ಇರ್ತಾರಾ ಅನ್ನೋದು ನನ್ನ ಪ್ರಶ್ನೆ. ನನ್ನ ಸಮಸ್ಯೆಯೂ ಬಗೆಹರೀಲಿಲ್ಲ. ಈ ಕಚೇರಿಯ ಸಮಸ್ಯೆಯೂ ಬಗೆಹರೀಲಿಲ್ಲ. ಎರಡಕ್ಕೂ ಯಾವಾಗ ಮುಕ್ತಿ ಕಾಣಿಸುವರೋ ನನಗೂ ಗೊತ್ತಿಲ್ಲ” ಎಂದರು ವಿಷಾದದಿಂದ.


ಇದನ್ನೂ ಓದಿ: ಕೊಪ್ಪಳ | 62 ದಿನಗಳ ಕಾಲ 1,550 ಕಿ.ಮೀ. ಏಕಾಂಗಿ ಪಾದಯಾತ್ರೆ ನಡೆಸಿದ ಹನುಮೇಶ
ಸರ್ಕಾರಿ ಕಚೇರಿಗಳು ಸಾರ್ವಜನಿಕರ ಕನಿಷ್ಠ ಅಗತ್ಯಗಳು, ಸುರಕ್ಷತೆ ಮತ್ತು ಮಾನಸಿಕ ಆರಾಮವನ್ನೂ ಕಡೆಗಣಿಸುತ್ತವೆ ಎನ್ನುವ ಎಂದಿನ ಆರೋಪ ಮುಂದುವರೆಯದಿರಲಿ. ರೈತರಿಂದ ಹಿಡಿದು ಮಹಿಳಾ ಸಿಬ್ಬಂದಿವರೆಗೆ, ಹಿರಿಯ ನಾಗರಿಕರು, ಮಕ್ಕಳಿಂದ ಹಿಡಿದು ತುರ್ತು ಕೆಲಸಕ್ಕಾಗಿ ಬರುವವರ ತನಕ ಎಲ್ಲರ ಸಮಸ್ಯೆಯೂ ಒಂದೇ. ಒಂದೆಡೆ ಕಟ್ಟಡ ಕುಸಿಯುವ ಆತಂಕ, ಶೌಚಾಲಯಗಳ ಹದಗೆಟ್ಟ ಪರಿಸ್ಥಿತಿ, ಕುಡಿಯುವ ನೀರಿನ ಕೊರತೆ, ಅಸಹ್ಯಕರ ಕಸ-ಕಡ್ಡಿ, ದುರ್ವಾಸನೆ, ಅಸುರಕ್ಷತ.ಇನ್ನೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯ. ಇವು ಸಾರ್ವಜನಿಕರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಸಾರ್ವಜನಿಕರ ವಿಶ್ವಾಸ ಕಳೆದುಕೊಂಡ ಆಡಳಿತ ವ್ಯವಸ್ಥೆಯನ್ನು ಪುನಃ ನಿಲ್ಲಿಸಲು, ಆದೇಶಗಳು ಮಾತ್ರ ಸಾಕಾಗುವುದಿಲ್ಲ. ತಕ್ಷಣದ ದುರಸ್ತಿ, ಅಧಿಕಾರಿಗಳ ಹೊಣೆಗಾರಿಕೆ ಮತ್ತು ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ಶಿಸ್ತುಬದ್ಧ ಪುನರ್‌ಸ್ಥಾಪನೆಯ ಅಗತ್ಯವಿದೆ ಎನ್ನುವುದು ಅಲ್ಲಿಯವರ ಆಗ್ರಹ.





