ಕಳೆದ ಐದು ತಿಂಗಳಿಂದ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನಾದ್ಯಂತ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಬಹುತೇಕ ಎಲ್ಲಾ ಬೆಳೆಗಳು ಸಂಪೂರ್ಣ ನೀರಲ್ಲಿ ನಿಂತು ಹಾಳಾಗಿವೆ. ಜಂಟಿ ಸಮೀಕ್ಷೆ ನೆಪದಲ್ಲಿ ಸಮಯ ಹಾಳು ಮಾಡದೆ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ರೈತ ಸಂಘಟನೆಗಳು ಮನವಿ ಮಾಡಿವೆ.
“ವಿಪರೀತ ಮಳೆಯಿಂದಾಗಿ ತಾಲೂಕಿನ ಮುಖ್ಯ ಬೆಳೆಗಳಾದ ತೊಗರಿ, ಹತ್ತಿ, ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಬಹುತೇಕ ಬೆಳೆಗಳು ಹಾಳಾಗಿವೆ. ದ್ರಾಕ್ಷಿ, ದಾಳಿಂಬೆ, ಲಿಂಬೆ, ಬಾಳೆ ಸೇರಿದಂತೆ ಎಲ್ಲ ಬೆಳೆಗಳಲ್ಲಿ ನೀರು ನಿಂತು ಹಾಳಾಗಿವೆ. ತಾಲೂಕಿನ ಪ್ರತಿ ಗ್ರಾಮದ ಪ್ರತಿಯೊಬ್ಬ ರೈತರಿಗೂ ಒಣ ಬೇಸಾಯಕ್ಕೆ ರೂ. 50,000 ಹಾಗೂ ನೀರಾವರಿ ಭೂಮಿಗೆ ಒಂದು ಲಕ್ಷ ರೂಪಾಯಿ, ಬಹು ವಾರ್ಷಿಕ ಬೆಳೆಗಳಿಗೆ ರೂ. 2 ಲಕ್ಷ ಪರಿಹಾರ ನೀಡಬೇಕು ಎಂದು ಈ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ” ಎಂದು ರಾಜ್ಯ ರೈತ ಸಂಗದ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಆಗ್ರಹಿಸಿದರು.
ಶ್ರೀಶೈಲ್ ವಾಲಿಕಾರ ಮಾತನಾಡಿ, “ಭೀಮೆ, ಕೃಷ್ಣಾ ಹಾಗೂ ದೋಣಿ ಪ್ರವಾಹದಿಂದಾಗಿ ಸಾಕಷ್ಟು ರೈತರ ಬೆಳೆಗಳು ಹಾಳಾಗಿರುವ ಜೊತೆಗೆ ಮನೆ ಮಠಗಳು ಕೂಡ ಬಿದ್ದು, ಹಲವು ಸಾಕು ಪ್ರಾಣಿಗಳು ಕೂಡ ನೀರಿನಲ್ಲಿ ಕೊಚ್ಚಿ ಹೋಗಿವೆ. ಇದಕೆಲ್ಲ ಪರಿಹಾರ ನೀಡಬೇಕೆಂದು ಆಗ್ರಹ ಮಾಡುತ್ತಿದ್ದೇವೆ. ಒಂದು ವೇಳೆ ತಡವಾದರೆ ಉಗ್ರ ಹೋರಾಟ ಮಾಡಲಾಗುವುದು” ಎಂದರು.
ಇದನ್ನೂ ಓದಿ: ವಿಜಯಪುರ | ನೆರೆ ಹಾವಳಿ ವೀಕ್ಷಿಸಿದ ಬಿಜೆಪಿ ತಂಡ
ಮನವಿ ಸ್ವೀಕರಿಸಿ ಮಾತನಾಡಿದ ತಾಳಿಕೋಟೆ ತಹಸೀಲ್ದಾರ್, “ಈಗಾಗಲೇ ಮೊದಲ ಹಂತದ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಇತ್ತೀಚೆಗೆ ಹೆಚ್ಚಿನ ಮಳೆ ಉಂಟಾಗಿ ಅನೇಕ ರೈತರ ಜಮೀನುಗಳಲ್ಲಿ ನೀರು ನಿಂತು ನಷ್ಟಗೊಂಡಿರುವ ಕುರಿತು ಪ್ರಥಮ ವರದಿಯನ್ನು ಆಯಾ ಗ್ರಾಮ ಪಂಚಾಯತ್ ಅಥವಾ ತಲಾಟಿ ಕಚೇರಿ ಮುಂದೆ ಅಂಟಿಸಲಾಗಿದೆ. ಪಟ್ಟಿಯಲ್ಲಿ ಹೆಸರಿಲ್ಲದ ಬೆಳೆಹಾನಿಯಾದ ರೈತರು ದಾಖಲೆಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು” ಎಂದರು.
ಈ ವೇಳೆ ಬಾಗೇವಾಡಿ ತಾಲೂಕು ಅಧ್ಯಕ್ಷ ಮುದಕಣ್ಣ ಬಾಗೇವಾಡಿ, ಮಹಿಳಾ ತಾಲೂಕು ಅಧ್ಯಕ್ಷೆ ಸುಜಾತ ಅವಟಿ, ನಿಂಗಣ್ಣ ಸುಣದಳ್ಳಿ, ಈರಯ್ಯ ಅಲಾಳಮಠ, ಶಿವಶಂಕ್ರಪ್ಪ ಸಜ್ಜನ್, ಲಿಂಗರಾಜ ಮೇಟಿ, ರಮೇಶಗೌಡ ವಡವಡಗಿ, ದೇವರೆಡ್ಡಿ ಬಿರಾದಾರ, ದೇವೀಂದ್ರಪ್ಪಗೌಡ್ ಪಾಟೀಲ್, ಮಹದೇಪ್ಪಾಗೌಡ ಜಲಪುರ್, ದೇವಿಡ್ರಪ್ಪಾಗೌಡ ಕೊನಾಳ, ಸಂಗನಗೌಡ ಬೆಂಡೆಗೊಂದಳ, ಈರಣ್ಣ ಸಿಂಪಿಗೆರೆ, ಮಡಿವಾಳಪ್ಪ ಸಿಂಪಿಗೆರೆ, ಶಿವಾಜಿ ಮೊಪಗಾರ, ಸಿದ್ದಪ್ಪತಳವಾರ್, ಅಪ್ಪಸಾಹೇಬ್ ಸಜ್ಜನ್, ಮುರ್ತುಜ ಹಳ್ಳದಮನಿ. ಮಲ್ಲು ಮುದನೂರ್, ಅಪ್ಪಯ್ಯ ಕಾರಕಳ್ಳಿಮಠ, ಶಿವಶಂಕರಪ್ಪ ಟಕಳಕ್ಕಿ, ಬಸವರಾಜ್ ನಾಟಿಕಾರ್, ಭೀಮಣ್ಣ ಸಜ್ಜನ, ಬೋರಮ್ಮ ಕುಂಬಾರ, ಸುಧಾ ಮಡ್ಡಿ, ದ್ರಾಕ್ಷಿಯಿಣಿ ಲಿಂಗದಳ್ಳಿ, ವಿ ರೇಣುಕಾ ಹಂಚಾಟೆ, ಲಕ್ಷ್ಮಿಬಾಯಿ ಸಜ್ಜನ ಸೇರಿದಂತೆ ರೈತರು ಇದ್ದರು.





