ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರಿಗೆ ನ್ಯಾಯಾಲಯದ ಕಲಾಪದಲ್ಲಿ ವಕೀಲ ರಾಕೇಶ ಕಿಶೋರ್ ಶೂ ಎಸೆದು ಅವಮಾನಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿ, ಆರೋಪಿ ವಕೀಲನನ್ನು ಗಡಿಪಾರು ಮಾಡುವಂತೆ ಅಂಬೇಡ್ಕರ್ ಸೇನೆ ತಾಳಿಕೋಟೆ ತಾಲೂಕು ಸಮಿತಿ ಆಗ್ರಹಿಸಿದೆ. ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಹಶೀಲ್ದಾರ್ ಡಾ. ವಿನಿಯಾ ಹೂಗಾರ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಸಮಿತಿಯ ವಿಜಯಪುರ ಜಿಲ್ಲಾಧ್ಯಕ್ಷ ಬಸು ಮಾದರ ಮಾತನಾಡಿ, “ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಗವಾಯಿ ಅವರ ಮೇಲೆ ಶೂ ಎಸೆದಿರುವುದು ಅಕ್ಷಮ್ಯ ಅಪರಾಧ. ಈ ಘಟನೆಯನ್ನು ಸಂಘಟನೆಯು ಉಗ್ರವಾಗಿ ಖಂಡಿಸುತ್ತದೆ. ಇದು ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ತೋರಿದ ಅಗೌರವವಾಗಿದ್ದು, ಇಡೀ ದೇಶ ತಲೆತಗ್ಗಿಸುವಂಥಹ ಘಟನೆಯಾಗಿದೆ. ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಈ ರೀತಿ ಅವಮಾನಿಸಲಾಗಿದೆ. ಈ ಹೇಯ ಕೃತ್ಯ ಎಸಗಿದ ವಕೀಲ ಕಿಶೋರ್ ರಾಕೇಶನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಇದಕ್ಕಿಂತಲೂ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಇದನ್ನೂ ಓದಿ: ವಿಜಯಪುರ | ನೆರೆ ಹಾವಳಿ ವೀಕ್ಷಿಸಿದ ಬಿಜೆಪಿ ತಂಡ
ಈ ವೇಳೆ ಅಂಬೇಡ್ಕರ್ ಸೇನೆ(ರಿ) ತಾಲೂಕ ಘಟಕದ ಅಧ್ಯಕ್ಷ ಗೋಪಾಲ ಕಟ್ಟಿಮನಿ, ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷ ಶಪೀಕ ಇನಾಮದಾರ, ಜಾಂಭವ ಯುವ ಸೇನೆ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಮಾದರ, ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಜುಮಣ್ಣ ನಾಲತವಾಡ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಆಸಿಫ್ ಕೆಂಬಾವಿ, ಅಂಬೇಡ್ಕರ್ ಸೇನೆ ನಗರ ಘಟಕ ಅಧ್ಯಕ್ಷ ನಾಗರಾಜ ಗಜಕೋಶ, ತಾಲೂಕ ಕಾರ್ಯದರ್ಶಿ ಮಹದೇವ ಚಟ್ನಳ್ಳಿ (ಅಸ್ತಿ), ತಾಲೂಕ ಖಜಾಂಚಿ ಪರಶುರಾಮ ತಳವಾರ, ಕಾರ್ಮಿಕ ಘಟಕ ಅಧ್ಯಕ್ಷ ಪರಶುರಾಮ ನಾಲತವಾಡ, ಶಿವಪುರ ಗ್ರಾಮ ಘಟಕ ಅಧ್ಯಕ್ಷ ಯಮನಪ್ಪ ನಾಯ್ಯೋಡಿ, ಪದಾಧಿಕಾರಿಗಳಾದ ರಮೇಶ್ ಹರನಾಳ, ದ್ಯಾಮಣ್ಣ ಸೋಮನಾಳ, ಮಲ್ಲಿಕಾರ್ಜುನ ಚಳ್ಳಗಿ, ಬಾಗಪ್ಪ ಕಟ್ಟಿಮನಿ, ಗಣಪತಿ ಗುತ್ಯಾಳ, ತಾಯಪ್ಪ ಕೂಚಬಾಳ, ರಮೇಶ ಚಬನೂರ ಮತ್ತಿತರರು ಇದ್ದರು.





