ಉಡುಪಿ ಜಿಲ್ಲೆಯ ಹಿರಿಯಡಕದ ಸರಕಾರಿ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ನಿನ್ನೆ ದಿನ ಮಧ್ಯಾಹ್ನ 12.15 ಗಂಟೆ ಸುಮಾರಿಗೆ ವಿದ್ಯಾರ್ಥಿಯು ತನ್ನ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಪೆರ್ಡೂರಿಗೆ ತೆರಳಿದ್ದು, ಅಲ್ಲಿ ತಂದೆಯನ್ನು ಬಿಟ್ಟು ಅಜ್ಜಿ ಮನೆಯಾದ ಅಲಂಗಾರಿಗೆ ಹೋಗಿದ್ದಾನೆ. ನಂತರ ಅಜ್ಜಿ ಮೊಬೈಲ್‌ನಿಂದ ತಂದೆಗೆ ಕರೆ ಮಾಡಿ, ತಾನು ಅಜ್ಜಿ ಮನೆ ಬಳಿ ಇರುವ ನದಿಗೆ ಆಟವಾಡಲು ಹೋಗುವುದಾಗಿ ತಿಳಿಸಿದ್ದಾನೆ.
ಆದರೆ ಮಧ್ಯಾಹ್ನ 3 ಗಂಟೆಯಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ತಂದೆಯು ಅಜ್ಜಿ ಮನೆಗೆ ಕರೆ ಮಾಡಿ ವಿಚಾರಿಸಿದಾಗ, ಹುಡುಗ ಅಜ್ಜಿ ಮನೆಗೂ ಬಂದಿಲ್ಲವೆಂದು ತಿಳಿದುಬಂದಿದೆ. ಕೂಡಲೇ ಕುಟುಂಬಸ್ಥರು ಅಲಂಗಾರು, ಪೆರ್ಡೂರು ಹಾಗೂ ಸುತ್ತಮುತ್ತ ಹುಡುಕಾಟ ನಡೆಸಿದರೂ ವಿದ್ಯಾರ್ಥಿ ಪತ್ತೆಯಾಗಿರಲಿಲ್ಲ. ಈ ಕುರಿತು ವಿದ್ಯಾರ್ಥಿಯ ತಂದೆಯ ದೂರು ಆಧರಿಸಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹುಡುಕಾಟ ನಡೆಸಿದ್ದರು.
ಇಂದು ಪೆರ್ಡೂರು ಅಡಪಾಡಿಯ ಮಡಿಸಾಲು ಹೊಳೆಯಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ, ಈತನು ಹೊಳೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿರ ಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.





