ಸುಳ್ಳು ಜಾತಿ ಪ್ರಮಾಣ ನೀಡಿ ಗ್ರಾಮ ಪಂಚಾಯತಿ ಸದಸ್ಯೆಯಾಗಿದ್ದ ಗುತ್ತಲ ಗ್ರಾಮದ ಮಹಿಳೆಗೆ ಹಾವೇರಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಹಾವೇರಿ ತಾಲೂಕಿನ ಗುತ್ತಲ ಗ್ರಾಮ ಪಂಚಾಯತಿಗೆ ನಡೆದ ಚುನಾವಣೆ ವೇಳೆ ಹಿಂದೂ ಗೊಂದಳಿ ಸಮುದಾಯದ ಮುಕ್ತಾಬಾಯಿ ಬೀಸೆಗೆ ಎಂಬ ಮಹಿಳೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಕೋಟಾದಲ್ಲಿ ಸ್ಪರ್ಧಿಸಿದ್ದರು. ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ, ಮುಕ್ತಾಬಾಯಿ ಅವರಿಗೆ ಏಳು ವರ್ಷ ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 37 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಇನ್ನು ಮುಕ್ತಾಬಾಯಿಗೆ ಸಹಾಯ ಮಾಡಿದ ಆರೋಪದ ಮೇಲೆ ಭರಡಿ ಗ್ರಾಮದ ಮಾರುತಿ ಹನುಮಂತಪ್ಪ ಕಿಳ್ಳಿಕಾತರ್ ಎಂಬುವರಿಗೂ ಏಳು ವರ್ಷ ಜೈಲು ಶಿಕ್ಷೆ ಮತ್ತು 37 ಸಾವಿರ ರೂ. ದಂಡ ವಿಧಿಸಿದೆ.
ಕಳ್ಳಪ್ಪ ದೊಡ್ಡರಾಮಪ್ಪ ತಳವಾರ ಮತ್ತು ಮಾರುತಿ ಹನುಮಂತಪ್ಪ ಕಿಳ್ಳಿಕ್ಯಾತರ ಸಹಾಯ ಪಡೆದು ಸುಳ್ಳು ವ್ಯಾಸಂಗ ಪ್ರಮಾಣ ಪತ್ರ ದಾಖಲಾತಿ ಸೃಷ್ಟಿಸಿದ್ದರು. ಈ ಸುಳ್ಳು ದಾಖಲಾತಿಗಳ ಮೇಲೆ, ಹಾವೇರಿ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಅದೇ ಪ್ರಮಾಣ ಪತ್ರದ ಮೇಲೆ 2010ರಲ್ಲಿ ಗುತ್ತಲ ಗ್ರಾಮ ಪಂಚಾಯತ್‌ಗೆ ನಡೆದ ಚುನಾವಣೆಯಲ್ಲಿ ವಾರ್ಡ್ ನಂಬರ್ 10 ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದರು.
ಸುಳ್ಳು ದಾಖಲಾತಿ ಸಲ್ಲಿಸಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ, ಆಯ್ಕೆ ಆಗಿರುವ ಕುರಿತಂತೆ ಹಾವೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬೆಳಗಾವಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪಿಐ ಎ.ಬಿ.ಹಪ್ಪಳಿ ಪ್ರಕರಣದ ತನಿಖೆ ನಡೆಸಿ, ದೋಷಾರೋಪಣ ಪತ್ರವನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆರೋಪಗಳು ರುಜುವಾತಾಗಿದ್ದವು. ಈ ಹಿನ್ನೆಲೆಯಲ್ಲಿ ಆರೋಪಿತರಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.




