ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ಎರಡು ಸ್ವಾತಂತ್ರ್ಯ ಸಂಭ್ರಮದ ದಿನಗಳು, ಒಂದು ಬ್ರಿಟಿಷರಿಂದ ಮುಕ್ತಿ ಹೊಂದಿದ್ದ ಆಗಸ್ಟ್ 15ರ ಭಾರತದ ಸ್ವಾತಂತ್ರ್ಯ ದಿನಾಚರಣೆ, ಇನ್ನೊಂದು ದೇಶದ ಒಳಗಿನ ರಾಜರ ಸುಪರ್ದಿಯಲ್ಲಿದ್ದ ಪ್ರದೇಶ ಬಿಡುಗಡೆಯಾಗಿ ಸ್ವಾತಂತ್ರ್ಯ ದೇಶದೊಳಗೆ ವಿಲೀನವಾದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ. ಹೆಚ್ಚು ಕಮ್ಮಿ ಒಂದು ತಿಂಗಳ ಅಂತರದಲ್ಲಿ ಎರಡು ಬಾರಿಗೆ ಆಚರಿಸುವ ಸ್ವಾತಂತ್ರ್ಯ ಸಂಭ್ರಮ ಈ ಭಾಗದ ಜನರ ಸೌಭಾಗ್ಯ ಎನ್ನಬಹುದು.
ನಿಜಾಮರು ಆಳಿಸಿಕೊಂಡ ದಾಸ್ಯದ ಧ್ವನಿಯಾದ ʼಹೈದರಾಬಾದ್ ಕರ್ನಾಟಕʼ ಭಾಗವನ್ನು ʼಕಲ್ಯಾಣ ಕರ್ನಾಟಕʼ ಎಂದು ಬದಲಾಗಿದೆ. 2019ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ಪ್ರದೇಶಕ್ಕೆ ʼಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿತು.
ಹೆಸರು ಬದಲಾಗಿ ಈಗ ಆರು ವರ್ಷ ಕಳೆಯಿತು. ಹೆಸರು ಬದಲಾವಣೆ ವಿಷಯದಲ್ಲಿ ಈ ಭಾಗದ ಜನರು, ಜನಪ್ರತಿನಿಧಿಗಳು ಇನ್ನಿಲ್ಲದ ಹೋರಾಟಗಳು ನಡೆಸಿದ ಕಾರಣಕ್ಕೆ ಹೆಸರೇನೋ ಬದಲಾಗಿದೆ. ಆದರೆ, ಜನರ ಭಾವನಾತ್ಮಕ ವಿಚಾರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಸರ್ಕಾರ, ಇಲ್ಲಿನ ಸರ್ವಾಗೀಣ ಅಭಿವೃದ್ಧಿಯ ವಿಚಾರದಲ್ಲಿ ಸ್ಪಂದಿಸಲು ಹಿಂದೇಟು ಹಾಕುತ್ತದೆ ಎಂಬುದು ಮೇಲ್ನೋಟಕ್ಕೆ ಗಮನಿಸಬಹುದು.
ಬಸವಾದಿ ಶರಣರ ತವರು ನೆಲ, ಶರಣರ ಕಲ್ಯಾಣ ಸಮಾಜದ ಪರಿಕಲ್ಪನೆ ಸೇರಿದಂತೆ ದಾಸರು, ಸೂಫಿ, ಸಂತ, ತತ್ವಪದಕಾರರ ನೆಲೆವೀಡಾದ ಈ ಪ್ರದೇಶಕ್ಕೆ ʼಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ. ಹೆಸರು ಬದಲಾವಣೆ ಆಗಿರುವುದು ಸಮಂಜಸ. ಮರುನಾಮಕರಣ ಜೊತೆಗೆ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಈ ಪ್ರದೇಶ ದಾಸ್ಯದ ಸಂಕೋಲೆಯನ್ನು ಕಳಚುವುದಾಗಿ ಘೋಷಿಸಿದ್ದರು. ಮಾನವ ಸಂಪನ್ಮೂಲಗಾಗಿ ₹500 ಕೋಟಿ ಅನುದಾನವೂ ಘೋಷಿಸಲಾಗಿತ್ತು. ಈ ಘೋಷಣೆ ಅನುದಾನದಿಂದ ಅದೆಷ್ಟು ಅಭಿವೃದ್ಧಿ ಕಂಡಿದೆ ಎಂದು ಹುಡುಕಲು ಹೋದರೆ ಉತ್ತರ ದೊರಕುವುದು ತೀರ ಕಷ್ಟ.
ʼಕಲ್ಯಾಣ’ ಎಂದರೆ ಅದೊಂದು ಸ್ಥಳವಲ್ಲ, ನಿಗದಿತ ಪ್ರದೇಶದ ಹೆಸರೂ ಅಲ್ಲ. ಕಲ್ಯಾಣ ಎಂದರೆ ಒಳಿತು, ಸಮೃದ್ಧಿ, ಅಭ್ಯುದಯ, ಸರ್ವ ಸಮಾನತೆ ಸಮಾಜ, ಯಾವ ಕೊರತೆಗಳಿಲ್ಲದ ಒಂದು ಪ್ರದೇಶವನ್ನು ʼಕಲ್ಯಾಣʼ ನೆಲ ಎಂದು ಕರೆಯಬಹುದು. ಅಂಥ ʼಜನ ಕಲ್ಯಾಣʼಕ್ಕಾಗಿಯೇ ಶರಣರು ಕಾಯಕ ಚಳವಳಿ ಮೂಲಕ ಸಮಾನತೆಯ ಕನಸು ಕಂಡಿದ್ದರು. ಅಂಥ ʼಕಲ್ಯಾಣʼ ಹೆಸರಿನೊಂದಿಗೆ ಬದಲಾದ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಸರ್ಕಾರಗಳು ಧೋರಣೆ ಅನುಸರಿಸುತ್ತಲೇ ಬಂದಿವೆ. ಅಂದರೆ ರಾಜ್ಯದ ಉಳಿದ ಭಾಗದ ಸರ್ವಾಂಗೀಣ ಅಭಿವೃದ್ಧಿ ಕಂಡರೆ ಈ ಭಾಗ ಅದೆಷ್ಟು ʼಕಲ್ಯಾಣ’ ವಾಗಿದೆ ಎಂಬುದು ಅರ್ಥವಾಗದೇ ಇರದು.
ಈಗ ಕಲ್ಯಾಣ ಕರ್ನಾಟಕ ವಿಮೋಚನೆಗೆ ಅಮೃತ ಮಹೋತ್ಸವ ಸಂಭ್ರಮವೂ ಕಳೆದಿದ್ದೇವೆ, ಇನ್ನು ಸಂವಿಧಾನದ 371(ಜೆ) ಕಲಂ ಜಾರಿಗೆ ದಶಮಾನೋತ್ಸವ ಸಡಗರವೂ ಮುಗಿತು. ಒಂದು ಭಾಗದ ಜನರು ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಗತಿಯಾಗಿ ʼಜನ ಕಲ್ಯಾಣʼ ಹೊಂದಬೇಕಾಗಿದೆ. ಅದನ್ನು ಸರ್ಕಾರಗಳು ಕಾರ್ಯಗತಗೊಳಿಸಿದಾಗ ಮಾತ್ರ ‘ಕಲ್ಯಾಣ’ ಎಂಬ ಪದಕ್ಕೆ ಸೂಕ್ತ ಅರ್ಥ ಬರುವುದು. 371(ಜೆ) ಯಿಂದ ಶೈಕ್ಷಣಿಕವಾಗಿ ಒಂದಿಷ್ಟು ಲಾಭವಾಗಿರುವುದು ಬಿಟ್ಟರೆ ದೊಡ್ಡ ಮಟ್ಟದ ಶೈಕ್ಷಣಿಕವಾಗಲಿ, ಸಾಮಾಜಿಕವಾಗಲಿ ಪ್ರಗತಿ ಕಾಣಲು ಆಗಲೇ ಇಲ್ಲ.
ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟುಕೊಂಡ ಈ ಭಾಗದ ಜನರ ಬದುಕಿನಲ್ಲಿ ಯಾವ ಬದಲಾವಣೆಯೂ ಕಂಡುಕೊಳ್ಳಲಿಲ್ಲ. ಸಣ್ಣ ಪುಟ್ಟ ಮಕ್ಕಳನ್ನು ಒಡಲಲ್ಲಿ ಇಟ್ಟುಕೊಂಡು ಹೊರ ರಾಜ್ಯಗಳಿಗೆ ಗುಳೆ ಹೋಗುವ ಮಜಬೂರ್ ಇನ್ನೂ ತಪ್ಪಿಲ್ಲ. ಉದ್ಯೋಗ ಅರಸಿಕೊಂಡು ಹೋದ ಈ ಭಾಗದ ಸುಶಿಕ್ಷಿತ ವರ್ಗದಿಂದ ರಾಜಧಾನಿ, ನಗರಗಳು ಮತ್ತಷ್ಟು ಅಭಿವೃದ್ಧಿಗೊಳ್ಳುತ್ತಿವೆ. ಆದರೆ, ಇಲ್ಲಿನವರ ಜನರ ಆರ್ಥಿಕ, ಸಾಮಾಜಿಕ ಜೀವನಮಟ್ಟಲ್ಲಿ ಮಾತ್ರ ಯಾವ ಸುಧಾರಣೆಯೂ ಕಾಣಲಿಲ್ಲ. ಅಭಿವೃದ್ಧಿ ಯೋಜನೆಗಳು ಜಾರಿಯಾದರೂ ಪರಿಣಾಮಕಾರಿ ಅನುಷ್ಠಾನಕ್ಕೆ ಬರಲ್ಲ. ಅದನ್ನು ಮುತುವರ್ಜಿ ವಹಿಸುವ ಮಾಡಿಸುವಂಥ ಜನನಾಯಕರ ಕೊರತೆಯೂ ಇದೆ ಎಂಬುದು ಸುಳ್ಳಲ್ಲ.
ಈ ಭಾಗದ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಈ ಹಿಂದೆ ವರ್ಷಕ್ಕೆ ₹1,500 ಕೋಟಿ ವಿಶೇಷ ಅನುದಾನ ಘೋಷಿಸಿತು, ನಂತರ ಅದು ₹3,000 ಕೋಟಿಗೆ ಹೆಚ್ಚಾಯ್ತು. ಇದೀಗ ಪ್ರತಿ ವರ್ಷಕ್ಕೆ ₹5 ಸಾವಿರ ಕೋಟಿ ಅನುದಾನ ಹರಿದು ಬರುತ್ತಿದೆ . ಆದರೆ, ಈ ಅನುದಾನದಿಂದ ಯಾವ ಕಾಮಗಾರಿಗಳು, ಎಲ್ಲಿ ನಡೆದಿವೆ? ಎಷ್ಟು ಅನುದಾನ ಬಳಕೆಯಾಗಿದೆ ಎಂಬುದು ಅರ್ಥವಾಗದ ರೀತಿಯಲ್ಲಿದೆ. ಇದು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೋ, ಅಧಿಕಾರಿಗಳ ನಿರ್ಲಕ್ಷ್ಯವೋ ಎಂಬುದು ಪ್ರಜ್ಞಾವಂತರ ಪ್ರಶ್ನೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಂಡ ಈ ಭಾಗದ ಅದೆಷ್ಟೋ ಊರು,ತಾಡಾಗಳಿಗೆ ಇಂದಿಗೂ ರಸ್ತೆ ಕಂಡಿಲ್ಲ, ಸಾರಿಗೆ ಸಂಪರ್ಕ ಕಾಣದ ಗ್ರಾಮಗಳ ಸಂಖ್ಯೆ ಲೆಕ್ಕವಿಲ್ಲ. ಬೇಸಿಗೆ ಬಂದ್ರೆ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹರಸಾಹಸ ಪಡಬೇಕಾದ ಅದೆಷ್ಟು ಹಳ್ಳಿಗಳ ಜನರ ಒಡಲ ಸಂಕಟ ಹೇಳತೀರದು. ಅಭಿವೃದ್ಧಿಗೆ ಬಂದ ಅನುದಾನ ಸಮರ್ಪಕವಾಗಿ ಅನುಷ್ಠಾನಗೊಳ್ಳದಿದ್ದರೆ ಸೌಕರ್ಯದಿಂದ ವಂಚಿತರಾದ ಜನ ಹೇಗೆ ಜೀವ ಕಳೆದುಕೊಳ್ಳಬಹುದು ಎನ್ನುವುದಕ್ಕೆ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಉದಾಹರಣೆಗಳೂ ಈ ಭಾಗದಲ್ಲಿವೆ.
ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ, ಪಿಯುಸಿ, ಫಲಿತಾಂಶದಲ್ಲಿ ಈ ಭಾಗದ ಏಳು ಜಿಲ್ಲೆಗಳು ಕೊನೆಯ ಸ್ಥಾನದಲ್ಲಿರುವುದು ಸಾಮಾನ್ಯ ಎನ್ನುವಂತಿದೆ. ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿದರೆ ಸಾಲದು, ಗುಣಮಟ್ಟ ಶಿಕ್ಷಣಕ್ಕೆ ಬೇಕಾದ ವಾತಾವರಣದೊಂದಿಗೆ ಶಿಕ್ಷಕರ ಕೊರತೆ ನೀಗಿಸುವುದು ಅಷ್ಟೇ ಮುಖ್ಯವಾಗಿದೆ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ರೈಲು ಓಡಿತು, ವಿಮಾನ ಹಾರಿತು, ದೊಡ್ಡ ಕಟ್ಟಡ ನಿರ್ಮಿಸಿದ ಮಾತ್ರಕ್ಕೆ ಅಭಿವೃದ್ಧಿ ಅಂತ ಹೇಳಬೇಕೇ? ಜನರಿಗೆ ಅಗತ್ಯವಾಗಿ ಬೇಕಾಗಿರುವ ಕನಿಷ್ಠ ಮೂಲಸೌಕರ್ಯಗಳೇ ಸಿಗದ ಮೇಲೆ ಅಭಿವೃದ್ಧಿ ಅಂತ ಕರೆಯುವುದು ಯಾವ ಅರ್ಥಕ್ಕೆ? ಎಲ್ಲಾ ಕ್ಷೇತ್ರಗಳಲ್ಲಿಯೂ ಅನೇಕ ತಾಪತ್ರಯಗಳು ಈ ಭಾಗದವರು ಅಂದಿನಿಂದ ಇಂದಿನವರೆಗೂ ಅನುಭವಿಸಿಕೊಂಡು ಬರ್ತಿದ್ದಾರೆ. ಆದರೂ ಮಂತ್ರಿ ಮಹನೀಯರು ʼನಾವು ಹಿಂದುಳಿದಿಲ್ಲ, ನಮ್ಮದೂ ಮುಂದುವರೆದ ಪ್ರದೇಶʼ ಎಂದೇ ಹೇಳಿಕೊಳ್ಳುವುದು ವಾಡಿಕೆ.
ರಾಜ್ಯದ ಮುಖ್ಯಮಂತ್ರಿಗಳು ಪ್ರತಿವರ್ಷ ಸೆಪ್ಟೆಂಬರ್ 17ಕ್ಕೆ ಕಲಬುರಗಿಯಲ್ಲಿ ಧ್ವಜಾರೋಹಣ ನೆರವೇರಿಸಿ ʼಹೈದರಾಬಾದ್ ಕರ್ನಾಟಕ ವಿಮೋಚನೆ’ ಕುರಿತು ಮಾತನಾಡಿ, ಈ ಭಾಗದ ಸಮಸ್ಯೆಗಳು ಬಗೆಹರಿಸುವುದು, ಖಾಲಿ ಹುದ್ದೆ ಭರ್ತಿ ಮಾಡುವುದು, ಉದ್ಯೋಗ ಸೃಷ್ಟಿ, ಹೊಸ ಯೋಜನೆಗಳು ಸೇರಿ ಹಲವು ಆಶ್ವಾಸನೆ ನೀಡುವುದು ಪ್ರತಿ ವರ್ಷ ನಡೆಯುತ್ತಲೇ ಇದೆ. ತದನಂತರ ಈ ಭಾಗದ ಜಲ್ವಂತ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಮರೆತು ಬಿಡುವುದು, ಯೋಜನೆಗಳನ್ನು ಕಾಲಮಿತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಸರ್ಕಾರಗಳ ನಿರ್ಲಕ್ಷ್ಯ ತೋರುವುದು ನಡೆಯುತ್ತಿದೆ. ಇದರಿಂದ ಬದಲಾವಣೆ ಮರೀಚಿಕೆಯಾಗಿದೆ.
ಡಿ.ಎನ್.ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದ ಒಟ್ಟು 175 ತಾಲೂಕುಗಳ ಪೈಕಿ ಶೇ.65% ಅಂದ್ರೆ 175 ರಲ್ಲಿ 114 ತಾಲೂಕು ಹಿಂದುಳಿದಿದ್ದು, ಅದರಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕು 39, ಅತಿ ಹಿಂದುಳಿದ ತಾಲ್ಲೂಕು 40 ಹಾಗೂ ಹಿಂದುಳಿದ ತಾಲ್ಲೂಕು 35 ಎಂದು ಮೂರು ಭಾಗವಾಗಿ ವರ್ಗೀಕರಿಸಿತು. ಅದರಲ್ಲಿ ಅತ್ಯಂತ ಹಿಂದುಳಿದ ಒಟ್ಟು 39 ತಾಲೂಕಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ್ದೇ 21 ತಾಲೂಕುಗಳಿವೆ. ಅಂದ್ರೆ ಶೇ.60% ಕ್ಕಿಂತ ಹೆಚ್ಚು ಭಾಗ ಹಿಂದುಳಿದುರುವಿಕೆ ಎಂದರ್ಥ. ಇದರಲ್ಲಿ ಉತ್ತರ ಭಾಗದ 26, ಹಾಗೂ ದಕ್ಷಿಣ ಭಾಗದ 13 ತಾಲ್ಲೂಕು ಅತ್ಯಂತ ಹಿಂದುಳಿದ ಪಟ್ಟಿಯಲ್ಲಿವೆ. ಈ ಭಾಗದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸೇರಿ ಹಲವು ಕ್ಷೇತ್ರಗಳಲ್ಲಿ ತೀರಾ ಹಿಂದುಳಿಯಲು ʼಪ್ರಾದೇಶಿಕ ಅಸಮಾನತೆʼಯೂ ಕಾರಣ ಎಂಬುದು ಗಟ್ಟಿಯಾಗಿ ಹೇಳಲೇಬೇಕಿದೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ), ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇದ್ದರೂ ದಕ್ಷಿಣ ಕರ್ನಾಟಕದಂತೆ ಅಭಿವೃದ್ಧಿ ಹೊಂದಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಈ ಭಾಗದ ಜನಪ್ರತಿನಿಧಿಗಳು ಮತ್ತೆ ಮತ್ತೆ ಯೋಚಿಸಬೇಕಾದ ಸಂಗತಿ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಒಂದು ದಶಕದಿಂದ ಅಧ್ಯಕ್ಷತೆ ಕಲಬುರಗಿ ಜಿಲ್ಲೆಯ ಜನಪ್ರತಿನಿಧಿಗಳ ಹಿಡಿತದಲ್ಲಿರುವುದು, ಇನ್ನು ಸೆ.17ರ ʼಕಲ್ಯಾಣ ಕರ್ನಾಟಕ ಉತ್ಸವʼಕ್ಕೆ ಪ್ರತಿವರ್ಷ ರಾಜ್ಯದ ಸಿಎಂ ಕಲಬುರಗಿ ಒಂದೇ ಜಿಲ್ಲೆಗೆ ಆಗಮಿಸುವುದು ಜಿಲ್ಲಾವಾರು ತಾರತಮ್ಮ ಸೃಷ್ಟಿಗೆ ಕಾರಣವಾಗಿದೆ ಎನ್ನಬಹುದು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಕ್ಕೆ ಸಚಿವ ಸಂಪುಟ ಅನುಮೋದನೆ : ಪ್ರಿಯಾಂಕ್ ಖರ್ಗೆ
ಸಿಎಂ ಸಿದ್ದರಾಮಯ್ಯನವರ ನೇತ್ರತ್ವದ ರಾಜ್ಯ ಸರ್ಕಾರ ಹೆಚ್ಚು ಕಮ್ಮಿ ಅರ್ಧ ಅವಧಿ ಪೂರೈಸಿದೆ. ಈಗಲಾದರೂ ʼಕಲ್ಯಾಣ ಕರ್ನಾಟಕʼ ಭಾಗದ ಜನರ ಬವಣೆ ನೀಗಿಸಿ ಜನರ ಜೀವನಮಟ್ಟ ಸುಧಾರಣೆಗೆ ಒಂದು ದಶಕದ ಅವಧಿಗೆ ಕ್ರಿಯಾ ಯೋಜನೆ ರೂಪಿಸಿ, ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಹೆಚ್ಚು ಒತ್ತು ಕೊಡಬೇಕಿದೆ. ಇಲ್ಲದಿದ್ರೆ ʼಕಲ್ಯಾಣ ಕರ್ನಾಟಕ’ ಅಭಿವೃದ್ಧಿ ಕನ್ನಡಿಯೊಳಗಿನ ಗಂಟಾಗಿಯೇ ಉಳಿಯಲಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




