ಬೆಂಬಿಡದೆ ಕಾಡುತ್ತಿರುವ ʼಜಾತಿʼ ಪಿಡುಗು; ʼಮರ್ಯಾದಾ ಹತ್ಯೆʼಗಳಿಗೆ ಕೊನೆ ಎಂದು?

Date:

ದಿನ ಬೆಳಗಾದ್ರೆ ಕೆಲ ಸ್ವಘೋಷಿತ ಧರ್ಮ ರಕ್ಷಕರು ʼಹಿಂದೂ, ನಾವೆಲ್ಲ ಒಂದುʼ ಎಂಬ ಘೋಷಣೆಗಳನ್ನು ಮೊಳಗಿಸುತ್ತಾರೆ. ಅದು ಕೇವಲ ವೇದಿಕೆಗೆ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರವೇ ಎಂಬುದಕ್ಕೆ ಇನ್ನೊಂದು ಸ್ಪಷ್ಟ ಉದಾಹರಣೆ ಸಿಕ್ಕಿದೆ. ಹುಬ್ಬಳ್ಳಿಯಲ್ಲಿ ನಡೆದ ಹೃದಯ ಹಿಂಡುವ ʼಮರ್ಯಾದಾ ಹತ್ಯೆʼ ಪ್ರಕರಣವು, ಸಮಾಜವನ್ನು ಜಾತಿ ಪಿಡುಗು ಎಂಬುದು ಎಷ್ಟು ಕಿತ್ತು ತಿನ್ನುತ್ತಿದೆ ಎನ್ನುವುದನ್ನು ಚಿತ್ರಿಸುತ್ತದೆ.

ಶತಮಾನಗಳಿಂದ ಮೇಲ್ಜಾತಿ, ಮೇಲ್ವರ್ಗದವರಿಂದ ದಲಿತರ ಮೇಲೆ ದೌರ್ಜನ್ಯ, ಹಲ್ಲೆ, ಕೊಲೆಗಳು ನಡೆಯುತ್ತಾ ಬಂದಿವೆ. ಹುಬ್ಬಳ್ಳಿ ತಾಲೂಕು ಇನಾಂ ವೀರಪೂರ ಗ್ರಾಮದಲ್ಲಿ ತನ್ನ ಮಗಳು ಒಬ್ಬ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ರೆಡ್ಡಿ ಲಿಂಗಾಯತ ಸಮುದಾಯದ ತಂದೆ ಮತ್ತು ಸಂಬಂಧಿಕರು ಸೇರಿ ಗರ್ಭಿಣಿ ಎಂತಲೂ ನೋಡದೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ. ಇದು ಮರ್ಯಾದಾ ಹತ್ಯೆಯೆಂದು ಪೊಲೀಸರು ದೃಢಪಡಿಸಿದ್ದು, ಇದು ಮಾನವ ಸಮಾಜದ ಮಾನಸಿಕ ಅಸ್ವಾಸ್ಥ್ಯಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು.

WhatsApp Image 2025 12 24 at 10.36.05 AM 1

ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಸಮಾಜದಲ್ಲಿ ಹಳೆಯ ಜಾತಿ ಪದ್ಧತಿಗಳು ಇಂದಿಗೂ ಜೀವಂತವಾಗಿವೆ ಎಂಬುದಕ್ಕೆ ಇಂತಹ ಘಟನೆಗಳೇ ಸಾಕ್ಷಿ. ಮರ್ಯಾದಾ ಹತ್ಯೆಗಳು ನಾಗರಿಕ ಸಮಾಜಕ್ಕೆ ಕಳಂಕವೆಂದು 2011ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಹರಿಯಾಣ, ಜಾರ್ಖಂಡ್ ಮತ್ತು ಪಂಜಾಬ್‌ ಸೇರಿದಂತೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಇದರಲ್ಲಿ ಕರ್ನಾಟಕವೇನೂ ಹಿಂದೆ ಉಳಿದಿಲ್ಲ. ರಾಜ್ಯದಲ್ಲಿಯೂ ಈ ಮೃಗೀಯ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಗೌರವವನ್ನು ರಕ್ಷಿಸಿಕೊಳ್ಳಲು ತಮ್ಮ ಸ್ವಂತದವರನ್ನೂ ನೋಡದೆ ಹತ್ಯೆಗೈಯಲಾಗುತ್ತದೆ. ತನ್ನವರು, ಪರರು ಎಂಬ ಭೇದವಿಲ್ಲದೆ ಕೊಂದು ಉಳಿಸಿಕೊಳ್ಳುವುದನ್ನು ಇವರು ಮರ್ಯಾದೆ ಎಂದು ಭಾವಿಸುವುದು ವಿಷಾದ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ದ ಪ್ರಕಾರ, ಭಾರತದಲ್ಲಿ 2019 ಮತ್ತು 2020ರಲ್ಲಿ ತಲಾ 25 ಹಾಗೂ 2021ರಲ್ಲಿ 33 ಮರ್ಯಾದಾ ಹತ್ಯೆಗಳು ನಡೆದಿವೆ. 2022 ರಿಂದ 2023 ರವರೆಗೆ ಕರ್ನಾಟಕದಲ್ಲಿ ಕನಿಷ್ಠ 7 ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಕಳೆದ 2024ರಲ್ಲಿ 28 ಪ್ರಕರಣಗಳು, 2025ರಲ್ಲಿ 178 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಕಳೆದ ವರ್ಷ 2 ಪ್ರಕರಣಗಳು, 2025ರಲ್ಲಿ ಹುಬ್ಬಳ್ಳಿಯ ಪ್ರಕಾರಣವನ್ನು ಸೇರಿಸಿದರೆ 4 ಪ್ರಕರಣಗಳು ದಾಖಲಾಗಿವೆ. ಇನ್ನು ಬೆಳಕಿಗೆ ಬಾರದೆ ಇರುವ ಪ್ರಕರಣಗಳಿಗೆ ಲೆಕ್ಕವೇ ಇಲ್ಲ. ಅದೆಷ್ಟೋ ಪ್ರಕರಣಗಳು ದಾಖಲಾಗದೆ ಮುಚ್ಚಿಹೋಗಿವೆ. ಮರ್ಯಾದಾ ಹತ್ಯೆಗಳಿಗೆ ಮುಗ್ಧ ಜೀವಗಳು ಬಲಿಯಾಗುತ್ತಿವೆ. ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಬೇಕಾದರೆ, ಜನರ ಮನಸ್ಥಿತಿ ಬದಲಾಗಬೇಕು. ಇಂದಿಗೂ ಪಳೆಯುಳಿಕೆಗಳಾಗಿ ಆಳವಾಗಿ ಬೇರೂರಿರುವ ಈ ಜಾತಿ ವ್ಯವಸ್ಥೆಯನ್ನು ಕಿತ್ತೊಗೆದು ಪ್ರಜಾತಾಂತ್ರಿಕ ನೈಜ ಮೌಲ್ಯಗಳನ್ನು ಸ್ಥಾಪಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.

WhatsApp Image 2025 12 24 at 10.36.05 AM

ಇಂದಿನ ಕತೆಯ ದುರಂತ ನಾಯಕಿ ಮೃತ ಮಾನ್ಯಾ ಅದೇ ಗ್ರಾಮದ ದಲಿತ ಸಮುದಾಯದ ಯುವಕ ವಿವೇಕಾನಂದ ದೊಡ್ಡಮನಿ ಎಂಬಾತನನ್ನು ಪ್ರೀತಿಸುತ್ತಿದ್ದಳು. 2 ವರ್ಷಗಳಿಂದ ಪ್ರಾಮಾಣಿಕವಾಗಿ ಪ್ರೀತಿಸಿದ್ದ ಮಾನ್ಯಾ ಮತ್ತು ವಿವೇಕಾನಂದ ಪೋಷಕರ ವಿರೋಧದ ನಡುವೆಯೂ ಕಳೆದ ಮೇ ತಿಂಗಳಿನಲ್ಲಿ ಜಾತಿಯನ್ನು ಮೆಟ್ಟಿನಿಂತು ಪೊಲೀಸರ ಸಮ್ಮುಖದಲ್ಲಿ ನಡೆದ ರಾಜಿ ಪಂಚಾಯತಿಯ ಬಳಿಕ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು. ಇದು ಅಂತರ್ಜಾತಿ ವಿವಾಹವಾಗಿತ್ತು. ಈ ಮದುವೆಗೆ ರೆಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ತಹಶೀಲ್ದಾರ್ ಹಾಗೂ ಪೊಲೀಸರು ಎರಡೂ ಕುಟುಂಬಗಳಿಗೆ ಎಚ್ಚರಿಕೆ ನೀಡಿದ್ದರು. ಪ್ರಾಣ ಭಯದಿಂದ ದಂಪತಿಗಳು ಕೆಲಕಾಲ ಹಾವೇರಿಯಲ್ಲಿ, ಮತ್ತು ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಡಿ. 8ರಂದು ದಂಪತಿ ಸ್ವಗ್ರಾಮಕ್ಕೆ ವಾಪಸ್ಸು ಬಂದಿದ್ದರು. ಅವರಿಬ್ಬರು ಊರಿಗೆ ಕಾಲಿಟ್ಟ ಸುದ್ಧಿ ತಿಳಿದ ಮಾನ್ಯಾಳ ತಂದೆ ಕೋಪಗೊಳ್ಳುತ್ತಾನೆ. ಗ್ರಾಮದ ಕೆಲವರು ಆತನನ್ನು ಮತ್ತಷ್ಟು ಪ್ರಚೋದಿಸುತ್ತಾರೆ ಎನ್ನಲಾಗಿದೆ. ಇದರಿಂದ ಇನ್ನಷ್ಟು ಕುಪಿತನಾದ ತಂದೆ ಪ್ರಕಾಶಗೌಡ ಪಾಟೀಲ ತಾನೇ ಸಾಕಿ, ಸಲಹಿದ ಮಗಳನ್ನು ಮತ್ತು ದಲಿತರು ಬದುಕುವುದೇ ತಪ್ಪು ಎಂಬಂತೆ ಅವರ ಇಡೀ ಕುಟುಂಬವನ್ನು ನಿರ್ನಾಮ ಮಾಡುವ ತಂತ್ರ ಮಾಡುತ್ತಾನೆ.

ಅದರಂತೆ ಡಿ. 21ರಂದು ತಾಲೂಕಿನ ಗಿರಿಯಾಲ್ ರಸ್ತೆಯಲ್ಲಿ ವಿವೇಕಾನಂದನ ದೊಡ್ಡಪ್ಪನ ಮೇಲೆ ಮಾನ್ಯಾ ತಂದೆ ಸೇರಿದಂತೆ ಕುಟುಂಬಸ್ಥರು ಹಲ್ಲೆ ನಡೆಸುತ್ತಾರೆ. ಅದೇ ದಿನ ಸಂಜೆ 5 ಗಂಟೆ ಸುಮಾರಿಗೆ ಪ್ರಕಾಶಗೌಡ ತಮ್ಮ ಸಂಬಂಧಿಕರ ಜೊತೆಗೂಡಿ ಏಕಾಏಕಿ ಮಾನ್ಯಾ ಇರುವ ಗಂಡನ ಮನೆಗೆ ಕೊಡಲಿ, ಕುಡುಗೋಲು ಇನ್ನಿತರೆ ಮಾರಕಾಸ್ತ್ರಗಳೊಂದಿಗೆ ಬಂದು 7 ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾಳ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಹೊಡೆದು ಗಾಯಗೊಳಿಸುತ್ತಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಾನ್ಯಾಳನ್ನು ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿವೇಕಾನಂದನ ತಾಯಿ ಮತ್ತು ಇತರರ ಮೇಲೂ ಭೀಕರ ದಾಳಿ ನಡೆಸುತ್ತಾರೆ. ಮಾನ್ಯಾಳ ಗಂಡನ ಮೇಲೂ ದಾಳಿ ಮಾಡುತ್ತಾರೆ. ಮಾನ್ಯಾ ತನ್ನ ಮೇಲೆ ದಾಳಿಯಾದ ಸಂದರ್ಭದಲ್ಲಿ ಕಾಪಾಡಿ-ಕಾಪಾಡಿ ಎಂದು ಅಂಗಲಾಚಿ ಬೇಡಿದರೂ ಸ್ಥಳೀಯರಾರೂ ಕೂಡ ಕಾಪಾಡಲು ಮುಂದೆ ಬರುವುದಿಲ್ಲ ಎನ್ನಲಾಗಿದ್ದು, ಇದರಿಂದ ಜಾತಿಯ ವಿಷಬೀಜ ಯಾವಮಟ್ಟಿಗೆ ಬೇರೂರಿದೆ ಎಂಬುದು ಸ್ಪಷ್ಟವಾಗುತ್ತದೆ.

WhatsApp Image 2025 12 24 at 10.37.22 AM

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗರ್ಭಿಣಿ ಮಾನ್ಯ ಚಿಕಿತ್ಸೆ ಫಲಿಸದೆ ಹೊಟ್ಟೆಯಲ್ಲಿದ್ದ ಕೂಸಿನ ಜತೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಾನ್ಯಾಳ ಹೊಟ್ಟೆಯಲ್ಲಿದ್ದ, ಭೂಮಿಗೂ ಕಾಲಿಡದ ಶಿಶುವಿಗೆ ಜಾತಿ ಅಂದರೇನು ಗೊತ್ತಿರಲಿಲ್ಲ. ಮರ್ಯಾದೆಯ ಅರ್ಥವೂ ತಿಳಿದಿರಲಿಲ್ಲ. ಗರ್ಭಿಣಿ ಮಗಳನ್ನು ತಂದೆಯೇ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡುತ್ತಾನೆಂದರೆ, ನಾವು ಮನುಷ್ಯರೇ? ಅನ್ನುವ ಪ್ರಶ್ನೆ ನಮ್ಮೊಳಗೆ ಮೂಡಬೇಕಿದೆ. ಇಂತಹ ಕ್ರೂರ ಮನಸ್ಥಿತಿಯ, ಜಾತಿಯ ಅಂಧತ್ವ ಕೊನೆಯಾಗಬೇಕಿದೆ. ಮಾನ್ಯಾಳ ಸಾವಿನ ಬಳಿಕ ಕೆಲ ದಿನಗಳು ದುಃಖಪಡುತ್ತೇವೆ, ಆಕ್ರೋಶ ವ್ಯಕ್ತಪಡಿಸುತ್ತೇವೆ ಅದನ್ನು ಬಿಟ್ಟರೆ ಬೇರೆ ನಮ್ಮಿಂದೇನು ಸಾಧ್ಯ? ಜಾತಿಯ ವಿಷವು ಮುಂದೆ ಮತ್ತೊಬ್ಬರ ಜೀವ ತೆಗೆಯುವುದನ್ನು ತಡೆಯಲು ಸಾಧ್ಯವೇ? ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕಿದೆ.

ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇನ್ನುಳಿದ 5 ಜನರು ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯುವಕ ವಿವೇಕಾನಂದನ ತಾಯಿ ರೇಣವ್ವನ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಯುವಕನ ರಕ್ಷಣೆಗೆ ಒಬ್ಬ ಕಾವಲುಗಾರನ ನೇಮಿಸಲಾಗಿದೆ. ಒಟ್ಟು 14 ಜನರ ವಿರುದ್ದ ಪ್ರಕರಣ ದಾಖಲಾಗಿದ್ದು, ಇದುವರೆಗೆ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದವರ ಹುಡುಕಾಟದಲ್ಲಿದ್ದಾರೆ. ಸ್ಥಳಕ್ಕೆ ಭೇಟಿಕೋಟ್ಟು ಪರಿಶೀಲಿಸಿದ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ʼಜಾತಿಯ ಸಂಕೋಲೆಗಳಿಂದ ಮಗಳ ಪ್ರಾಣವನ್ನೇ ತೆಗೆದ ಈ ಘಟನೆ ಅತ್ಯಂತ ಖಂಡನೀಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದುʼ ಎಂದು ತಿಳಿಸಿದ್ದಾರೆ.

ವಿದ್ಯಾಕಾಶಿ ಧಾರವಾಡದಂತಹ ಜಿಲ್ಲೆಯಲ್ಲಿ ಈ ರೀತಿಯ ಮರ್ಯಾದಾ ಹತ್ಯೆ ನಡೆದಿರುವುದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇನಾಂವೀರಾಪೂರ ಗ್ರಾಮದ ತುಂಬೆಲ್ಲ ಸ್ಮಶಾನ ಮೌನ ಆವರಿಸಿದ್ದು, ಸಂಪೂರ್ಣ ಗ್ರಾಮವೇ ಸ್ತಬ್ಧಗೊಂಡಿದೆ. ಪ್ರೀತಿ, ವಾತ್ಸಲ್ಯ, ಮಮತೆಗಿಂತ ಜಾತಿಯೇ ಮುಖ್ಯವಾಯಿತಲ್ಲ ಎಂದು ಪ್ರಜ್ಞಾವಂತರು ಮಾತನಾಡುತ್ತಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡುವ ಮೂಲಕ ಜಾತಿಯ ವಿಷಬೀಜವನ್ನು ಕಿತ್ತೊಗೆಯಲು ಮುಂದಾದರು. ಅವರ ಹೆಸರು ಹೇಳಿಕೊಂಡು, ಅವರು ಸ್ಥಾಪಿಸಿದ ಧರ್ಮ ಪಾಲಕರಾಗಿ ಹುಟ್ಟಿ, ಲಿಂಗಾಯತರೆನಿಸಿಕೊಂಡ ಜಾತಿವಾದಿಗಳಿಗೆ ಇಂದಿಗೂ ಅವರ ವಿಚಾರಗಳು ಅರ್ಥವಾಗಿಲ್ಲ. ಕೊಲ್ಲುವುದು ಧರ್ಮವಲ್ಲ ಎಂದು ತಿಳಿದಿದ್ದರೂ ಹತ್ಯೆಗಳು ಹೆಚ್ಚಾಗುತ್ತಿವೆ.

WhatsApp Image 2025 12 24 at 10.36.04 AM

ಈ ಬಗ್ಗೆ ಈದಿನ.ಕಾಮ್ ಜತೆಗೆ ಮಾನ್ಯಾಳ ಪತಿ ವಿವೇಕಾನಂದ ಮಾತನಾಡಿ, “ನಮ್ಮಿಬ್ಬರನ್ನು ಸುಮ್ಮನೆ ಬಿಟ್ಟಿದ್ದರೆ; ಎಲ್ಲಾದರೂ ಬದುಕುತ್ತಿದ್ದೆವು. ನಾವು ಪ್ರೀತಿ ಮಾಡಿದ್ದೆ ತಪ್ಪಾಯಿತೇ? ಮಾನ್ಯಾಳ ತಂದೆಯು ಕೂಡ ಒಬ್ಬ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದರಂತೆ! ಅವರಿಗೆ ಒಂದು ನ್ಯಾಯ ಮಗಳಿಗೆ ಒಂದು ನ್ಯಾಯ ಆಯಿತು. ಮೊನ್ನೆ ನನ್ನ ಹೆಂಡತಿಯ ಮೇಲೆ ದಾಳಿಯಾದಾಗ ಅವಳು ಕಿರುಚಿ ಬೇಡಿಕೊಂಡರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಅಷ್ಟರ ಮಟ್ಟಿಗೆ ಜಾತಿ ಬೇರೂರಿದೆ. ನಾವಿಬ್ಬರು ಮದುವೆ ಆದಮೇಲೆ ಗ್ರಾಮದಲ್ಲಿ ನಮ್ಮನ್ನು ದೇಶದ್ರೋಹಿಗಳಂತೆ ನೋಡುತ್ತಿದ್ದರು. ನನ್ನ ಮಾನ್ಯಾಳನ್ನು ಕೊಂದವರಿಗೆ ಮರಣದಂಡನೆ ಶಿಕ್ಷೆ ಆಗಬೇಕು” ಎಂದು ಕಣ್ಣೀರಾದರು.

ಇಲ್ಲಿಯವರೆಗೂ ಮೃತರ ಕುಟುಂಬಕ್ಕಾಗಲೀ, ಸಂತ್ರಸ್ತ ವಿವೇಕಾನಂದನಿಗಾಗಲೀ ಸಾಂತ್ವನ ಹೇಳುವ, ಜೊತೆಯಲ್ಲಿ ನಿಲ್ಲುವ ಕೆಲಸವನ್ನು ದಲಿತ ಸಂಘಟನೆಗಳು ಮಾಡುತ್ತಿದ್ದಾವೆಯೇ ಹೊರತು ಯಾವುದೇ ಹಿಂದೂಪರ ಸಂಘಟನೆಗಳು ಮಾಡಿಲ್ಲ. ಮತ್ತು ಮಾತೆತ್ತಿದರೆ ಹಿಂದೂ ನಾವೆಲ್ಲ ಒಂದು ಎಂದು ಮಾತನಾಡುವ, ಕೊಲೆಗಾರನ ಸ್ಥಾನದಲ್ಲಿ ಮುಸ್ಲಿಂ ಇದ್ದರೆ ಪ್ರತಿಭಟನೆಗೆ, ಹೋರಾಟಕ್ಕೆ ಇಳಿಯುವ ಯಾರೂ ಬಂದು ವಿವೇಕಾನಂದನಿಗೆ ಸಮಾಧಾನ ಮಾತುಗಳನ್ನು ಹೇಳುವ ಕೆಲಸ ಮಾಡಿಲ್ಲ. ಹಾಗೂ ಚುನಾವಣಾ ಸಮಯದಲ್ಲಿ ವೋಟ್ ಬ್ಯಾಂಕಿಗಾಗಿ ಸಾವನ್ನು ಬಳಸಿಕೊಳ್ಳುವ ರಾಜಕಾರಣಿಗಳಾದರೂ ಇಲ್ಲಿಯವರೆಗೂ ಕಾಲಿಟ್ಟಿಲ್ಲ. ಪ್ರಕರಣ ನಡೆದು 3 ದಿನದ ನಂತರ ಅಂದರೆ; ಡಿ. 23ರಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಸಂತ್ರಸ್ತರ ಭೇಟಿಗೆ ವಿವೇಕಾನಂದ ಆಸ್ಪತ್ರೆಗೆ ಬಂದಾಗ ದಲಿತ ಮುಖಂಡರು ಅವರನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಸಂತ್ರಸ್ತರಿಗೆ 5 ಲಕ್ಷ ಚೆಕ್ ನೀಡಿ, ಅವರ ಆಸ್ಪತ್ರೆಯ ಖರ್ಚುನ್ನು ಜಿಲ್ಲಾಡಳಿತದಿಂದ ಭರಿಸುವುದಾಗಿ ತಿಳಿಸಿದ್ದಾರೆ.

WhatsApp Image 2025 12 24 at 10.38.15 AM

ಈ ಬಗ್ಗೆ ದಲಿತ ವಿಮೋಚನಾ ಸಮಿತಿಯ ಸುರೇಶ ಖಾನಾಪುರ ಮಾತನಾಡಿ, “ಹಿಂದೂ ನಾವೆಲ್ಲ ಒಂದು ಎನ್ನುತ್ತಾರೆ. ಇಲ್ಲಿ ಒಬ್ಬ ಹಿಂದೂ ತಂದೆಯಿಂದ ಹಿಂದೂ ಮಗಳ ಹತ್ಯೆಯಾಗಿದೆ. ಯಾವೊಬ್ಬ ಧೀಮಂತ ಧರ್ಮ ರಕ್ಷಕರೂ ಬಂದು ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಇನ್ನು ಮಾನ್ಯಾಳ ಅಂತ್ಯಸಂಸ್ಕಾರದ ವೇಳೆ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾರೂ ಭಾಗವಹಿಸಿಲ್ಲ. ದಲಿತರೇನು ಮನುಷ್ಯರಲ್ಲವೇ? ಹಲವು ವರ್ಷಗಳಿಂದ ದಲಿತರ ಧ್ವನಿಯನ್ನು ಹತ್ತಿಕ್ಕಲಾಗಿದೆ. ಇದೀಗ ನಾವು ಸುಮ್ಮನೆ ಕೂರುವುದಿಲ್ಲ. ಇನ್ನೂ ಎಷ್ಟುಕಾಲ ನಾವು ಜಾತೀಯತೆಯನ್ನು ಎದುರಿಸಬೇಕು? ಸಮಾಜದಲ್ಲಿ ನಮ್ಮ ಇಚ್ಛೆಯಂತೆ ನಮಗೆ ಬದುಕುವ ಹಕ್ಕಿಲ್ಲವೇ? ಮರ್ಯಾದಾ ಹತ್ಯೆಗಳಿಗೆ ಕೊನೆ ಯಾವಾಗ ಸಿಗುತ್ತದೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಧಾರವಾಡ | ಮರ್ಯಾದೆಗೇಡು ಹತ್ಯೆ ನಿಷೇಧ ಕಾನೂನು ಜಾರಿಗೆ ಜನಪರ ಸಂಘಟನೆಗಳ ಒತ್ತಾಯ

ಜಾತಿ ಎಲ್ಲಿದೆ? ಎಂದು ಪ್ರಶ್ನಿಸುತ್ತಾ ಜಾತೀಯತೆ ಆಚರಿಸುವ ಅದೆಷ್ಟೋ ಜನರು ಇವತ್ತಿಗೂ ಇದ್ದಾರೆ. ಇಲ್ಲಿ ಕೊಂದವರಿಗೆ ಏನೂ ಸಿಗಲಿಲ್ಲ. ಕೊಲ್ಲುವುದು ತಪ್ಪು ಎಂಬ ಅರಿವು ಮೂಡಲಿಲ್ಲ. ಇದೀಗ ಕೊಲೆಗೈದವರಿಗೂ, ಕೊಲೆಯಾದ ಕುಟುಂಬಕ್ಕೂ ನೆಮ್ಮದಿಯಿಲ್ಲದಂತಾಗಿದೆ. ದಲಿತ ಯುವಕನನ್ನು ಮದುವೆ ಆದಳೆಂದು ಸ್ವಂತ ಮಗಳನ್ನೇ ಕೊಲ್ಲುವಾಗ ತಂದೆಗೆ ಮಗಳೆಂಬ ಮಮಕಾರ ಮೂಡಲಿಲ್ಲ. ಅವರಿಗೆ ಜಾತಿ ಮಾತ್ರ ಮುಖ್ಯವಾಯಿತು. ಜಾತಿ ಸಂಘರ್ಷವು ಗರ್ಭಿಣಿ ಮಗಳ ಕರುಳನ್ನೇ ಬಗೆಯುವಷ್ಟು ಭೀಕರವಾಗಿರುವುದು ಅತ್ಯಂತ ನೋವಿನ ಸಂಗತಿ. ಇನ್ನಾದರೂ ಧರ್ಮ, ಜಾತಿಯ ಕಾರಣಕ್ಕೆ ಜನರನ್ನು ಕೊಲ್ಲುವ ಧರ್ಮದ ಅಂತ್ಯಕ್ಕಾಗಿ ಪ್ರಾರ್ಥಿಸಬೇಕಿದೆ. ಜಾತಿ, ಧರ್ಮ ಬೇಧ ರಹಿತ ಸಮಾಜದ ನಿರ್ಮಾಣಕ್ಕೆ ಸಂಘಟಿತರಾಗಿ ಅಂತರ್ಜಾತಿ ವಿವಾಹಗಳನ್ನು ಒಮ್ಮನದಿಂದ ಸ್ವಾಗತಿಸುವ ಗುಣ ಬರಬೇಕಿದೆ.

WhatsApp Image 2024 09 06 at 11.32.31 a95e9ba6
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...