- ಅಂಬಾರಿ ಸಾಗುವ ಮಾರ್ಗದಲ್ಲಿ ಮೋದಿ ರೋಡ್ ಶೋ ಮಾಡಿದ್ದೇ ತಪ್ಪು
- ನಾಡಹಬ್ಬಕ್ಕೆ ಅಪಮಾನ ಆಗುವ ರೀತಿ ಬಿಜೆಪಿ ರೋಡ್ ಶೋ ಮಾಡಿದೆ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾಡಿದ್ದ ಮೈಸೂರಿನ ರಸ್ತೆಯನ್ನು ಸಿದ್ದರಾಮಯ್ಯ ಅಭಿಮಾನಿಗಳು ಗಂಜಲ ಮತ್ತು ಸಗಣಿ ನೀರು ಹಾಕಿ ಸ್ವಚ್ಛಗೊಳಿಸಿದ್ದಾರೆ.
ಸಿದ್ದರಾಮಯ್ಯ ಅಭಿಮಾನಿ ಕಂಸಾಳೆ ರವಿ ಹಾಗೂ ಇತರರು ಗೋಮೂತ್ರ ಮತ್ತು ಸಗಣಿ ನೀರನ್ನು ಹಾಕಿ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದ ಸಯ್ಯಾಜಿ ರಾವ್ ರಸ್ತೆಗೆ ಸ್ವಚ್ಛ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೈಸೂರಿನ ರಾಜಮಾರ್ಗದಲ್ಲಿ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದರು. ಆ ರಸ್ತೆಯನ್ನು ಸ್ವಚ್ಛಗೊಳಿಸಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಈ ವೇಳೆ ಕಾಂಗ್ರೆಸ್ ಮುಖಂಡ ಕಂಸಾಳೆ ರವಿ ಸುದ್ದಿಗಾರರೊಂದಿಗೆ ಮಾತನಾಡಿ, “ಚುನಾವಣೆಯ ಮೊದಲು ಮೈಸೂರಿನ ರಾಜ ಮಾರ್ಗದಲ್ಲಿ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದರು. ಅಂಬಾರಿ ಹಾದು ಹೋಗುವ ರಾಜ ಮಾರ್ಗದಲ್ಲಿ ಮೋದಿ ರೋಡ್ ಶೋ ಮಾಡಿದ್ದೆ ದೊಡ್ಡ ತಪ್ಪು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಪ್ರಬುದ್ಧ ಮತದಾರರಿಂದ ದೇಶಕ್ಕೆ ಬಲವಾದ ಸಂದೇಶ : ದಸಂಸ
“ಇದು ರಾಜ ಮನೆತನಕ್ಕೆ ಮಾಡಿದ ಅಪಮಾನ. ವಿಶ್ವ ವಿಖ್ಯಾತ ಅಂಬಾರಿ ಬಿಟ್ಟರೆ ಇನ್ಯಾವುದೇ ದೊಡ್ಡ ಮೆರವಣಿಗೆ ಇಲ್ಲಿ ಮಾಡಿರಲಿಲ್ಲ. ಆದರೆ, ಹಿಂದುತ್ವದ ಹೆಸರು ಹೇಳುವ ಬಿಜೆಪಿಯವರು ನಾಡಹಬ್ಬಕ್ಕೆ ಅಪಮಾನ ಆಗುವ ರೀತಿ ರೋಡ್ ಶೋ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಈ ರಸ್ತೆಗೆ ಆಗಿರುವ ಕೊಳೆಯನ್ನು ತೊಳೆಯಲು ಸಗಣಿ ನೀರು ಹಾಕಿ ಸ್ವಚ್ಛ ಮಾಡುತ್ತಿದ್ದೇವೆ” ಎಂದು ರವಿ ಹೇಳಿದ್ದಾರೆ.




