ರಾಜ್ಯದಲ್ಲಿ ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕೆಂಬ ಕೂಗು ಜೋರಗಿದ್ದು, ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಪ್ರದೇಶ ಕುರುಬ ಸಮಾಜ ಎಸ್‌ಟಿ ಹೋರಾಟ ಸಮಿತಿಯು ನಿರ್ಧರಿಸಿದೆ.
ಸಮಿತಿಯ ಅಧ್ಯಕ್ಷ ಸಿದ್ದನ್ನಾ ತೇಜಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಶಾಸಕರ ಭವನದಲ್ಲಿ ಮಹತ್ವದ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕುರುಬರ ಕುಲಶಾಸ್ತ್ರ ಅಧ್ಯಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯದಿಂದ ಕೆಲವು ದಾಖಲೆಗಳ ಮಾಹಿತಿ ಕೇಳಿದರೂ, ಕಳೆದ ಏಳು ತಿಂಗಳಿನಿಂದ ರಾಜ್ಯ ಸರ್ಕಾರ ಅದನ್ನು ಒದಗಿಸದೆ ವಿಳಂಬ ಮಾಡುತ್ತಿದೆ ಎಂದು ಸಮಿತಿ ಅವರು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯ ಸರ್ಕಾರ ತ್ವರಿತವಾಗಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಿ, ಕುರುಬರನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ಶಿಫಾರಸು ಮಾಡಬೇಕು. ವಿಳಂಬ ಮಾಡಿದರೆ, ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ಸಮಯದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಭಾರೀ ಪ್ರತಿಭಟನೆ ನಡೆಸಲಾಗುವುದು. ಇದಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ 20 ರಿಂದ 25 ಸಾವಿರ ಜನರನ್ನು ದೆಹಲಿಗೆ ಕರೆದುಕೊಂಡು ಹೋಗುವ ಯೋಜನೆ ರೂಪಿಸಲಾಗಿದೆ” ಎಂದು ಸಭೆಯಲ್ಲಿ ಸಿದ್ದನ್ನಾ ತೇಜಿ ತಿಳಿಸಿದ್ದಾರೆ.
ಸಭೆ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿಗಳು ಸಮಿತಿಯನ್ನು ಭೇಟಿ ಮಾಡಲು ಆಹ್ವಾನಿಸಿದ ಪರಿಣಾಮ, ಹೋರಾಟಗಾರರ ಪ್ರತಿನಿಧಿ ಮಂಡಳಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ರಾಜ್ಯದಿಂದ ಕೇಂದ್ರಕ್ಕೆ ಮಾಹಿತಿ ಕಳುಹಿಸುವ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನೊಳಗೊಂದು ಆರೆಸ್ಸೆಸ್ ಆನೆ ಅವಿತಿರುವ ದುರಂತ!
ಈ ಸಭೆಗೆ ರಾಜ್ಯದ 30 ಜಿಲ್ಲೆಗಳಿಂದ ಪದಾಧಿಕಾರಿಗಳು ಹಾಗೂ ಹೋರಾಟಗಾರರು ಭಾಗವಹಿಸಿದ್ದರು. ಸಮಿತಿಯ ಬೆಳಗಾವಿ ಸಂಚಾಲಕ ತೇಜಿ ಟಿವಿ, ಬಿಬಿಎಂಪಿ ಸದಸ್ಯ ಸೋಮಶೇಖರ್, ರಾಜಕುಮಾರ್, ಮಾಳಿಂಗರಾಯ, ಅಪ್ಪಾಜಿ, ಸಂತೋಷ್ ಪೂಜಾರಿ, ಕಾರ್ಯದರ್ಶಿ ರವಿರಾಜ್ ಕಂಬಳಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.





